ಪ್ರಧಾನಿ ಮೋದಿ ಅವರ ಆಗಮನಕ್ಕೂ ಮುನ್ನಖಲಿಸ್ತಾನಿ ಉಗ್ರರ ಜೊತೆ ಶ್ವೇತ ಭವನದ ಮಾತುಕತೆ

KannadaprabhaNewsNetwork | Updated : Sep 22 2024, 04:13 AM IST

ಸಾರಾಂಶ

ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿಗೂ ಮುನ್ನ, ಶ್ವೇತಭವನದ ಅಧಿಕಾರಿಗಳು ಭಾರತ ವಿರೋಧಿ ಖಲಿಸ್ತಾನಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ಭೇಟಿಯಲ್ಲಿ ನಮ್ಮ ನೆಲದಲ್ಲಿ ವಿದೇಶಿ ದಾಳಿಗಳಿಂದ ರಕ್ಷಿಸುವ ಭರವಸೆ ನೀಡಿದ್ದಾರೆ.

ವಾಷಿಂಗ್ಟನ್‌: ಸಂಬಂಧ ಸುಧಾರಣೆಯ ಮಾತಿನ ನಡುವೆಯೇ ಆಗಾಗ್ಗೆ ಭಾರತವನ್ನು ಚಿವುಟುವ ಕೆಲಸ ಮಾಡುವ ಅಮೆರಿಕ ಮತ್ತೆ ಅಂಥದ್ದೇ ಕೆಲಸ ಮಾಡಿದೆ. ಪ್ರಧಾನಿ ಮೋದಿ ಅವರ ಮಹತ್ವದ ಅಮೆರಿಕ ಭೇಟಿಗೂ ಮುನ್ನ, ಶ್ವೇತಭವನದ ಅಧಿಕಾರಿಗಳು ಭಾರತ ವಿರೋಧಿ ಖಲಿಸ್ತಾನಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ.

ಹಾಲಿ ಅಮೆರಿಕದಲ್ಲಿರುವ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಹತ್ಯೆಗೆ ಕೆಲ ದಿನಗಳ ಹಿಂದೆ ಯತ್ನ ನಡೆದಿತ್ತು. ಇದರ ಹಿಂದೆ ಭಾರತದ ಕೈವಾಡವಿದೆ ಎಂದು ಅಮೆರಿಕದ ಆರೋಪಿಸಿತ್ತು. ಅದರ ಬೆನ್ನಲ್ಲೇ ಖಲಿಸ್ತಾನಿ ಬೆಂಬಲಿಗ ಗುಂಪಿನ ಪ್ರತಿನಿಧಿಗಳನ್ನು ಶ್ವೇತಭವನದ ಅಧಿಕಾರಿಗಳು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ನಮ್ಮ ನೆಲದಲ್ಲಿ ವಿದೇಶಿ ದಾಳಿಗಳಿಂದ ರಕ್ಷಿಸುವ ಭರವಸೆ ನೀಡಿದ್ದಾರೆ.

ಕೆನಡಾ ಮತ್ತು ಅಮೆರಿಕ ದೇಶಗಳು ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಆಶ್ರಯ ನೀಡುತ್ತಿವೆ ಎಂಬ ಆರೋಪಗಳ ಬೆನ್ನಲ್ಲೇ ಈ ಭೇಟಿ ನಡೆದಿದೆ.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್‌, ‘ಭಾರತವು ವಾಕ್‌ ಸ್ವಾತಂತ್ರ್ಯವನ್ನು ಗೌರವಿಸುತ್ತದೆ. ಆದರೆ ಅದು ಪ್ರತ್ಯೇಕತೆಯನ್ನು ಬೆಂಬಲಿಸುವಂತಿರಬಾರದು. ಜೊತೆಗೆ ವಿದೇಶಿ ರಾಜತಾಂತ್ರಿಕರಿಗೆ ಬೆದರಿಕೆ ಒಡ್ಡಿ ಹಿಂಸೆಯನ್ನು ಪ್ರಚೋದಿಸಬಾರದು’ ಎಂದರು. ಜೊತೆಗೆ ಸಂಶಯಾಸ್ಪದ ದಾಖಲೆಗಳನ್ನು ಹೊಂದಿದವರು ದೇಶದಲ್ಲಿದ್ದರೆ, ಅದು ಕಾನೂನಿಗಿಂತ ವೋಟ್‌ ಬ್ಯಾಂಕ್‌ ಅತಿ ಶಕ್ತಿಶಾಲಿ ಎಂಬುದನ್ನು ಸೂಚಿಸುತ್ತದೆ ಎಂದರು.

ಕ್ವಾಡ್‌ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅಮೆರಿಕಕ್ಕೆ ತೆರಳುವ ಕೆಲ ಗಂಟೆಗಳ ಮೊದಲು ಈ ಮಾತುಕತೆ ನಡೆದಿರುವುದು ಗಮನಾರ್ಹ.

ಟ್ರಂಪ್ ಮೇಲೆ ದಾಳಿ ಹಿನ್ನೆಲೆ ಮೋದಿಗೆ ಭಾರೀ ಭದ್ರತೆ

ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ , ಡೊನಾಲ್ಡ್ ಟ್ರಂಪ್‌ ಮೇಲೆ ಎರಡು ಬಾರಿ ಕೊಲೆ ಯತ್ನ ನಡೆದ ಬೆನ್ನಲ್ಲೇ, ಅಮೆರಿಕದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಸೆ.21ರಿಂದ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಮೋದಿಯವರು ತಮ್ಮ ಪ್ರವಾಸದಲ್ಲಿ ಭೇಟಿ ನೀಡಲಿರುವ ಡೆಲವೇರ್‌ ಮತ್ತು ನ್ಯೂಯಾರ್ಕ್‌ನಲ್ಲಿ ಸುತ್ತಮುತ್ತ ಅಮೆರಿಕದ ಸೀಕ್ರೆಟ್‌ ಸರ್ವೀಸ್‌ ಪಡೆ ಭದ್ರತೆಯನ್ನು ಜಾಸ್ತಿ ಮಾಡಿದೆ. ಜೊತೆಗೆ ಅಮೆರಿಕದಲ್ಲಿ ಖಲಿಸ್ತಾನಿ ಪರ ಮನಸ್ಥಿತಿ ಇರುವ ಕಾರಣಕ್ಕೂ ಪ್ರಧಾನಿ ಭದ್ರತೆ ಹೆಚ್ಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ಹಿನ್ನಲೆಯಲ್ಲಿ ಕಳೆದ 15 ದಿನಗಳಲ್ಲಿ ಭಾರತ ಮತ್ತು ಅಮೆರಿಕದ ಭದ್ರತಾ ಪಡೆ ಸೀಕ್ರೆಟ್‌ ಸರ್ವೀಸ್‌ ಪಡೆ ನಡುವೆ ಮೋದಿ ಭದ್ರತೆ ಬಗ್ಗೆ ಮಾತುಕತೆಗಳು ನಡೆದಿತ್ತು ಎನ್ನಲಾಗಿದೆ.

Share this article