ಕದನ ವಿರಾಮವಲ್ಲ, ಅದಕ್ಕಿಂತ ದೊಡ್ಡದು ಬೇರೆ ಕಾದಿದೆ: ಅಮೆರಿಕ ಅಧ್ಯಕ್ಷ ಟ್ರಂಪ್‌ ಎಚ್ಚರಿಕೆ

Published : Jun 18, 2025, 04:31 AM IST
donald trump on iran

ಸಾರಾಂಶ

ಯುದ್ಧಕ್ಕೆ ಅಂತ್ಯ ಹಾಡಬೇಕಿದೆ. ಆದರೆ ಕದನವಿರಾಮದ ಮೂಲಕವಲ್ಲ. ನಾನು ಜಿ7 ಶೃಂಗದಿಂದ ಅರ್ಧಕ್ಕೇ ನಿರ್ಗಮಿಸುತ್ತಿರುವುದು ಕದನವಿರಾಮಕ್ಕಲ್ಲ. ಅದಕ್ಕಿಂತ ದೊಡ್ಡ ಕಾರಣವಿದೆ’ ಎಂದಿದ್ದಾರೆ ಟ್ರಂಪ್.

 ಕನನಾಸ್ಕಿಸ್‌ (ಕೆನಡಾ)/ವಾಷಿಂಗ್ಟನ್‌: ಇಸ್ರೇಲ್-ಇರಾನ್ ಯುದ್ಧದ ನಡುವೆಯೇ ಕೆನಡಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಗೆ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅರ್ಧಕ್ಕೇ ಶೃಂಗ ತೊರೆದು ತವರಿಗೆ ವಾಪಸಾಗಿದ್ದಾರೆ. ಅಲ್ಲದೆ, ‘ಟೆಹ್ರಾನ್‌ ನಗರವನ್ನು ಜನರು ಕೂಡಲೇ ತೊರೆಯಬೇಕು. ಯುದ್ಧಕ್ಕೆ ಅಂತ್ಯ ಹಾಡಬೇಕಿದೆ. ಆದರೆ ಕದನ ವಿರಾಮದ ಮೂಲಕವಲ್ಲ. ನಾನು ಜಿ7 ಶೃಂಗದಿಂದ ಅರ್ಧಕ್ಕೇ ನಿರ್ಗಮಿಸುತ್ತಿರುವುದು ಕದನವಿರಾಮಕ್ಕಲ್ಲ. ಅದಕ್ಕಿಂತ ದೊಡ್ಡ ಕಾರಣವಿದೆ’ ಎಂದಿದ್ದಾರೆ.

ಇದಲ್ಲದೆ, ‘ಇದೇ ವೇಳೆ, ಇರಾನ್‌ ಸರ್ವೋಚ್ಚ ನಾಯಕ ಖಮೇನಿ ಅಡಗಿರುವ ಜಾಗ ಗೊತ್ತು. ಆದರೆ ಅವರನ್ನು ಸದ್ಯಕ್ಕೆ ಹತ್ಯೆ ಮಾಡುವ ಯಾವುದೇ ಉದ್ದೇಶವಿಲ್ಲ. ಆದರೆ ಯುದ್ಧ ಬಿಟ್ಟು ಇರಾನ್‌ ಶರಣಾಗಬೇಕು’ ಎಂದಿದ್ದಾರೆ. ಟ್ರಂಪ್‌ ಅವರ ಈ ಹೇಳಿಕೆ ಬಳಿಕ ಅಮೆರಿಕದ ಯುದ್ಧನೌಕೆಗಳು ಹಾಗೂ ಯುದ್ಧವಿಮಾನಗಳು ಮಧ್ಯಪ್ರಾಚ್ಯದತ್ತ ದೌಡಾಯಿಸುತ್ತಿವೆ ಎಂದು ವರದಿಗಳು ಹೇಳಿವೆ.

ಹಿಗಾಗಿ ಅಮೆರಿಕದ ನೆರವು ಪಡೆದು ಇರಾನ್ ಮೇಲೆ ಇಸ್ರೇಲ್‌ ಬಹುದೊಡ್ಡ ದಾಳಿ ನಡೆಸಹುದು. ಬಳಿಕ ಯುದ್ಧ ಅಂತ್ಯವಾಗಬಹುದು ಎಂದು ಟ್ರಂಪ್‌ ಸುಳುಹು ನೀಡಿದ್ದಾರೆ

ಖಮೇನಿ ಹತ್ಯೆಗೆ ಯತ್ನಿಸಿದ್ದ ಇಸ್ರೇಲ್‌ಗೆ ಟ್ರಂಪ್‌ ಇತ್ತೀಚೆಗೆ ತಡೆ ಒಡ್ಡಿದ ವಿಷಯ ಬಹಿರಂಗವಾಗಿತ್ತು ಹಾಗೂ ಯುದ್ಧದಲ್ಲಿ ಇರಾನ್‌ ಸೋಲಲಿದೆ ಎಂದು ಟ್ರಂಪ್‌ ಹೇಳಿದ್ದರು. ಇದಾದ ನಂತರ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಖಮೇನಿ ಹತ್ಯೆ ಮೂಲಕ ಯುದ್ಧ ಅಂತ್ಯವಾಗಲಿದೆ ಎಂದಿದ್ದರು.

ಅದರ ಬೆನ್ನಲ್ಲೇ ಮಾತನಾಡಿರುವ ಟ್ರಂಪ್‌, ‘ನಾನು ಕದನವಿರಾಮ ಅಲ್ಲ, ಅದಕ್ಕಿಂತಲೂ ದೊಡ್ಡದನ್ನು ಎದುರು ನೋಡುತ್ತಿದ್ದೇನೆ. ಶಾಂತಿ ಮಾತುಕತೆಗಾಗಿ ನಾನು ಇರಾನ್‌ ಅನ್ನು ಸಂಪರ್ಕಿಸಿಲ್ಲ. ಅದರಲ್ಲಿ ನನಗೆ ಆಸಕ್ತಿಯೂ ಇಲ್ಲ. ಬೇಕಿದ್ದರೆ ನನ್ನ ಬಳಿ ಬರಬೇಕು. ಶರಣಾಗಬೇಕು. ಸದ್ಯಕ್ಕೆ ಖಮೇನಿ ಹತ್ಯೆ ಮಾಡುವ ಯೋಚನೆ ಇಲ್ಲ’ ಎಂದಿದ್ದಾರೆ.

ಭಾನುವಾರವಷ್ಟೇ ಟ್ರಂಪ್ ಜಿ7ಗೆಂದು ಕೆನಡಾಗೆ ತೆರಳಿದ್ದರು. ದಿಢೀರನೇ ಅವರು ಕೆನಡಾದಿಂದ ಅಮೆರಿಕಕ್ಕೆ ವಾಪಸಾಗಿದ್ದು ನಾನಾ ಊಹಾಪೋಹಕ್ಕೆ ನಾಂದಿ ಹಾಡಿತು. ಈ ಬಗ್ಗೆ ಶ್ವೇತಭವನ ಪ್ರತಿಕ್ರಿಯಿಸಿದ್ದು, ‘ಇರಾನ್- ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಹಲವು ಪ್ರಮುಖ ವಿಚಾರಗಳನ್ನು ಚರ್ಚಿಸುವ ಸಲುವಾಗಿ ಟ್ರಂಪ್ ಮುಂಚಿತವಾಗಿ ಶೃಂಗಸಭೆಯಿಂದ ಹೊರ ಬರಲಿದ್ದಾರೆ’ ಎಂದಿದೆ.

PREV
Read more Articles on

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!