ಮತ್ತೊಬ್ಬ ಲಷ್ಕರ್‌ ಉಗ್ರ ನಿಗೂಢ ಹತ್ಯೆ

KannadaprabhaNewsNetwork |  
Published : Dec 07, 2023, 01:15 AM IST
ಅದ್ನನ್‌ | Kannada Prabha

ಸಾರಾಂಶ

ಅನಾಮಧೇಯನ ದಾಳಿ: ಪಾಕಲ್ಲಿ ಅದ್ನಾನ್‌ ಬಲಿ. ಭಾರತದ ಮೋಸ್ಟ್ ವಾಂಟೆಡ್‌ 22ನೇ ವ್ಯಕ್ತಿ ಹತ್ಯೆ. ಹಫೀಜ್‌ ಆಪ್ತ ಈತ. ಉಧಂಪುರ ದಾಳಿ ರೂವಾರಿ. 2015ರ ಉಧಂಪುರ, 2016ರ ಪಂಪೋರ್‌ ದಾಳಿ ರೂವಾರಿ ಅದ್ನಾನ್‌. ಈ ಎರಡೂ ದಾಳಿಗಳಲ್ಲಿ 10 ಭಾರತೀಯ ಯೋಧರು ಹತರಾಗಿದ್ದರು. 2008ರ ಮುಂಬೈ ದಾಳಿಕೋರ ಹಫೀಜ್‌ ಸಯೀದ್‌ ಆಪ್ತ ಅದ್ನಾನ್‌. ಡಿ.2ರ ಮಧ್ಯರಾತ್ರಿ ಮನೆಯ ಹೊರಗೆ ಅದ್ನಾನ್‌ ಮೇಲೆ ಗುಂಡಿನ ದಾಳಿ. ರಸಹ್ಯವಾಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಯತ್ನಿಸಿದ್ದ ಪಾಕ್‌. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಅದ್ನಾನ್‌ ಡಿ.5ರಂದು ಕೊನೆಯುಸಿರು. ದೇಶ- ವಿದೇಶಗಳಲ್ಲಿ ನಿಗೂಢವಾಗಿ ಹತ್ಯೆಗೀಡಾದ ಉಗ್ರರ ಸಂಖ್ಯೆ 22ಕ್ಕೆ.

ಇಸ್ಲಾಮಾಬಾದ್‌: 26/11 ಮುಂಬೈ ದಾಳಿಯ ರೂವಾರಿ ಹಫೀಜ್‌ ಸಯೀದ್‌ನ ಆಪ್ತ, ಲಷ್ಕರ್‌-ಎ-ತೊಯ್ಬಾಉಗ್ರ ಹನ್‌ಜ್ಲಾ ಅದ್ನಾನ್‌ ಪಾಕಿಸ್ತಾನದ ಕರಾಚಿಯಲ್ಲಿ ಅನಾಮಧೇಯ ದಾಳಿಕೋರರ ಗುಂಡಿಗೆ ಬಲಿಯಾಗಿದ್ದಾನೆ. ಈತ 2015ರಲ್ಲಿ ಜಮ್ಮು-ಕಾಶ್ಮೀರದ ಉಧಮ್‌ಪುರದಲ್ಲಿ ಬಿಎಸ್‌ಎಫ್‌ ಯೋಧರ ವಾಹನದ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್‌ ಆಗಿದ್ದ. ಈತನ ಹತ್ಯೆಯೊಂದಿಗೆ ಇತ್ತೀಚಿನ ತಿಂಗಳಲ್ಲಿ ದೇಶ- ವಿದೇಶಗಳಲ್ಲಿ ನಿಗೂಢವಾಗಿ ಸಾವನ್ನಪ್ಪಿದ, ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

ಕರಾಚಿಯಲ್ಲಿ ಡಿಸೆಂಬರ್‌ 2ರ ಮಧ್ಯರಾತ್ರಿ ಅದ್ನಾನ್‌ನ ಮನೆಯ ಹೊರಗೇ ಗುಂಡಿನ ದಾಳಿ ನಡೆದಿದೆ. ಈತನ ದೇಹದಲ್ಲಿ ನಾಲ್ಕು ಗುಂಡುಗಳು ಪತ್ತೆಯಾಗಿವೆ.

ದಾಳಿಯ ಬಳಿಕ ಉಗ್ರ ಅದ್ನಾನ್‌ನನ್ನು ಪಾಕಿಸ್ತಾನಿ ಸೇನೆಯು ರಹಸ್ಯವಾಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಯತ್ನಿಸಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಡಿ.5ರಂದು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.2015ರಲ್ಲಿ ಉಧಮ್‌ಪುರದಲ್ಲಿ ಬಿಎಸ್‌ಎಫ್‌ ವಾಹನದ ಮೇಲೆ ನಡೆದ ದಾಳಿಯನ್ನು ಈತನೇ ಸಂಘಟಿಸಿದ್ದ. ದಾಳಿಯಲ್ಲಿ 2 ಯೋಧರು ಸಾವನ್ನಪ್ಪಿ, 13 ಮಂದಿ ಗಾಯಗೊಂಡಿದ್ದರು. ಅದರ ತನಿಖೆಯನ್ನು ಎನ್‌ಐಎ ನಡೆಸುತ್ತಿದೆ. 2016ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪಂಪೋರ್‌ ಬಳಿ ಸಿಆರ್‌ಪಿಎಫ್‌ ಯೋಧರ ವಾಹನದ ಮೇಲೆ ನಡೆದ ದಾಳಿಯನ್ನೂ ಈತನೇ ಸಂಘಟಿಸಿದ್ದ ಎನ್ನಲಾಗಿದೆ. ಆ ದಾಳಿಯಲ್ಲಿ 8 ಯೋಧರು ಸಾವನ್ನಪ್ಪಿ, 22 ಮಂದಿ ಗಾಯಗೊಂಡಿದ್ದರು.ಮೂಲಗಳ ಪ್ರಕಾರ ಹನ್‌ಜ್ಲಾ ಅದ್ನಾನ್‌ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಲಷ್ಕರ್‌-ಎ-ತೊಯ್ಬಾ ಸಂಘಟನೆಗೆ ಉಗ್ರರನ್ನು ನೇಮಕ ಮಾಡಿಕೊಳ್ಳುತ್ತಿದ್ದ. ಭಾರತದೊಳಗೆ ಉಗ್ರರನ್ನು ಕಳುಹಿಸಿ ದಾಳಿಗಳನ್ನು ಸಂಘಟಿಸುವ ಈತನ ಕೃತ್ಯಕ್ಕೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹಾಗೂ ಪಾಕ್ ಸೇನೆ ಬೆಂಬಲ ನೀಡುತ್ತಿತ್ತು ಎನ್ನಲಾಗಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಲಾಟರಿ ಮೂಲಕ ವೀಸಾ ವಿತರಣೆಗೆ ಟ್ರಂಪ್‌ ಬ್ರೇಕ್‌
ಕಾಂಬೋಡಿಯಾದ 30 ಅಡಿಯ ವಿಷ್ಣು ಪ್ರತಿಮೆ ಥಾಯ್ಲೆಂಡಿಂದ ಧ್ವಂಸ