ಯುದ್ಧ : ಜಗತ್ತಿನಲ್ಲೇ ಮೊದಲ ಬಾರಿ ಖಂಡಾಂತರ ಕ್ಷಿಪಣಿ ಬಳಸಿ ಉಕ್ರೇನ್‌ಗೆ ರಷ್ಯಾದ ದಾಳಿ

KannadaprabhaNewsNetwork |  
Published : Nov 22, 2024, 01:20 AM ISTUpdated : Nov 22, 2024, 04:12 AM IST
ದಾಳಿ | Kannada Prabha

ಸಾರಾಂಶ

ಇತ್ತೀಚೆಗಷ್ಟೇ 1000 ದಿನ ಪೂರೈಸಿರುವ ಉಕ್ರೇನ್‌ ಮೇಲಿನ ಯುದ್ಧದಲ್ಲಿ ರಷ್ಯಾ ಮೊದಲ ಬಾರಿಗೆ ಐಸಿಬಿಎಂ (ಇಂಟರ್‌ ಕಾಂಟಿನೆಂಟಲ್‌ ಬ್ಯಾಲಿಸ್ಟಿಕ್‌ ಮಿಸೈಲ್‌) ಬಳಕೆ ಮಾಡಿದೆ.

 ಕೀವ್‌: ಇತ್ತೀಚೆಗಷ್ಟೇ 1000 ದಿನ ಪೂರೈಸಿರುವ ಉಕ್ರೇನ್‌ ಮೇಲಿನ ಯುದ್ಧದಲ್ಲಿ ರಷ್ಯಾ ಮೊದಲ ಬಾರಿಗೆ ಐಸಿಬಿಎಂ (ಇಂಟರ್‌ ಕಾಂಟಿನೆಂಟಲ್‌ ಬ್ಯಾಲಿಸ್ಟಿಕ್‌ ಮಿಸೈಲ್‌) ಬಳಕೆ ಮಾಡಿದೆ. ವಿಶ್ವದ ಇತಿಹಾಸದಲ್ಲೇ ಯುದ್ಧವೊಂದರ ವೇಳೆ ಇಂಥ ಕ್ಷಿಪಣಿ ಬಳಕೆ ಇದೇ ಮೊದಲು. ಜೊತೆಗೆ ಐಸಿಬಿಎಂನಲ್ಲಿ ಒಂದೇ ಕಾಲಕ್ಕೆ ಹಲವು ಸಿಡಿತಲೆಗಳನ್ನು ಹೊತ್ತೊಯ್ದು ದಾಳಿ ನಡೆಸಬಲ್ಲ ಎಂಐಆರ್‌ವಿ ತಂತ್ರಜ್ಞಾನವೂ ಅಳವಡಿಕೆಯಾಗಿತ್ತು. ಇದರ ಬಳಕೆಯೂ ಇದೇ ಮೊದಲು ಎನ್ನಲಾಗಿದೆ. ಹೀಗಾಗಿ ರಷ್ಯಾದ ಈ ಅತ್ಯಾಧುನಿಕ ಕ್ಷಿಪಣಿ ಬಳಕೆ ಜಾಗತಿಕ ಮಟ್ಟದಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ.

ಎರಡು ದಿನಗಳ ಹಿಂದಷ್ಟೇ ಅಮೆರಿಕದ ನೀಡಿದ್ದ ಕ್ಷಿಪಣಿ ಬಳಸಿ ರಷ್ಯಾ ಮೇಲೆ ಉಕ್ರೇನ್‌ ದಾಳಿ ನಡೆಸಿತ್ತು. ಅದರ ಬೆನ್ನಲ್ಲೇ ತನ್ನ ಪರಮಾಣು ದಾಳಿ ನೀತಿಯಲ್ಲಿ ಬದಲಾವಣೆ ಘೋಷಿಸಿದ್ದ ರಷ್ಯಾ, ಅಗತ್ಯಬಿದ್ದರೆ ಪರಮಾಣು ಅಸ್ತ್ರ ರಹಿತ ದೇಶಗಳ ಮೂಲಕ ಪರಮಾಣು ದಾಳಿಗೆ ಅವಕಾಶ ಕಲ್ಪಿಸಿತ್ತು.

ಅದರ ಬೆನ್ನಲ್ಲೇ ಉಕ್ರೇನ್‌ ನಿಪ್ರೋ ನಗರ ಸೇರಿದಂತೆ ಉಕ್ರೇನ್‌ನ ಹಲವು ನಗರಗಳ ಮೇಲೆ ರಷ್ಯಾ ತನ್ನ ಆರ್‌ಎಸ್‌- 26 ರುಬೆಝ್‌ ಐಸಿಬಿಎಂ ಕ್ಷಿಪಣಿ ಮತ್ತು ಎಂಐಆರ್‌ವಿ ತಂತ್ರಜ್ಞಾನದ ಕ್ಷಿಪಣಿ ಬಳಸಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಏನು ಹಾನಿ ಆಗಿದೆ ಎಂಬುದನ್ನು ಉಕ್ರೇನ್‌ ಬಹಿರಂಗ ಪಡಿಸಿಲ್ಲ.

ಆದರೆ ಈ ದಾಳಿಯ ಉದ್ದೇಶ ತಕ್ಷಣಕ್ಕೆ ಉಕ್ರೇನ್‌ನಲ್ಲಿ ಯಾವುದೇ ಹಾನಿ ಮಾಡುವುದಕ್ಕಿಂತ, ಉಕ್ರೇನ್‌ಗೆ ನೆರವು ನೀಡುತ್ತಿರುವ ಅಮೆರಿಕ, ಬ್ರಿಟನ್‌, ಉತ್ತರ ಕೊರಿಯಾ ಮತ್ತು ನ್ಯಾಟೋ ದೇಶಗಳಿಗೆ ಎಚ್ಚರಿಕೆ ಸಂದೇಶ ರವಾನಿಸುವ ಪ್ರಯತ್ನವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಆರ್‌ಎಸ್‌-26 ರುಬೆಝ್‌: ಇದು ರಷ್ಯಾ ನಿರ್ಮಿತ ಖಂಡಾಂತರ ಬ್ಯಾಲೆಸ್ಟಿಕ್‌ ಕ್ಷಿಪಣಿ. 36000 ಕೆಜಿ ತೂಕವಿದೆ. ಇದು 800 ಕೆಜಿಯಷ್ಟು ಅಣ್ವಸ್ತ್ರ ಸಿಡಿತಲೆ ಸೇರಿದಂತೆ ಯಾವುದೇ ಸಿಡಿತಲೆ ಹೊತ್ತೊಯ್ದು ದಾಳಿ ನಡೆಸಬಲ್ಲದು. ಇದು ಗರಿಷ್ಠ 5500 ಕಿ.ಮೀ ವರೆಗೆ ದಾಳಿ ನಡೆಸಬಲ್ಲದು. ಗಂಟೆಗೆ 24500 ಕಿ.ಮೀ ವೇಗದಲ್ಲಿ ಸಾಗಬಲ್ಲದಾಗಿದೆ.

ಈ ಕ್ಷಿಪಣಿಗೆ ಎಂಐಆರ್‌ವಿ (ಮಲ್ಟಿಪಲ್‌ ಇಂಡಿಪೆಂಡೆಂಟ್ಲಿ ಟಾರ್ಗೆಟಬಲ್‌ ರೀ ಎಂಟ್ರಿ ವೆಹಿಕಲ್‌) ತಂತ್ರಜ್ಞಾನವನ್ನೂ ಅಳವಡಿಕೆ ಮಾಡಲಾಗಿತ್ತು. ಇಂಥ ಕ್ಷಿಪಣಿಗಳು ಏಕಕಾಲಕ್ಕೆ ಸಾವಿರಾರು ಕಿ.ಮೀ ದೂರದೂರದ ಗುರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಬಲ್ಲದಾಗಿರುತ್ತದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು
ಅಣ್ವಸ್ತ್ರ ಕ್ಷಿಪಣೀಲಿ ಇಂಧನ ಬದಲು ನೀರು ತುಂಬಿದ್ದ ಅಧ್ಯಕ್ಷ ಕ್ಸಿ ಆಪ್ತ!