;Resize=(412,232))
ವಾಷಿಂಗ್ಟನ್: ಅಮೆರಿಕ ಸಂಸತ್ತಿನ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಐತಿಹಾಸಿಕ ಜಯ ದಾಖಲಿಸಿದ್ದು, ಸಂಸತ್ತಿನ ಉಭಯ ಸದನಗಳಾದ ಸೆನೆಟ್ ಮತ್ತು ಜನಪ್ರತಿನಿಧಿ ಸಭೆ ಎರಡರ ಮೇಲೂ ಪೂರ್ಣ ನಿಯಂತ್ರಣ ಸಾಧಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷಕ್ಕೆ ಈ ಫಲಿತಾಂಶ ತೀವ್ರ ಹಿನ್ನಡೆ ತಂದಿದೆ. ಈ ಮೂಲಕ ವಿದೇಶಗಳ ಮೇಲೆ ಭಾರಿ ತೆರಿಗೆ ಹೇರಿಕೆ, ಇರಾನ್ ವಿರುದ್ಧ ಯುದ್ಧ ಅವರಿಗೆ ಮುಳುವಾದಂತಾಗಿದೆ.
ಈ ಜನಾದೇಶದಿಂದಾಗಿ ಇನ್ನು ಮುಂದೆ ಅನೇಕ ವಿಷಯಗಳಲ್ಲಿ ಆಟಕ್ಕುಂಟು-ಲೆಕ್ಕಕ್ಕಿಲ್ಲ ಎಂಬಂತಾಗಲಿದೆ. ಏಕೆಂದರೆ ಅವರ ಅನೇಕ ನಿರ್ಧಾರಗಳಿಗೆ ವಿಪಕ್ಷಗಳ ತೆಕ್ಕೆಯಲ್ಲಿರುವ ಸಂಸತ್ತಿನ ಉಭಯ ಸದನಗಳ ಅನುಮೋದನೆ ಬೇಕಾಗುತ್ತದೆ.
ಫಲಿತಾಂಶದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ‘ಡೆಮಾಕ್ರಟನ್ನರು ಉತ್ತಮವಾಗಿ ಕೆಲಸ ಮಾಡಿದ್ದಾರೆ’ ಎಂದು ಶ್ಲಾಘಿಸುವ ಮೂಲಕ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ. ಇರಾನ್ ಯುದ್ಧ ಮತ್ತು ತೈಲ ಬೆಲೆ ಏರಿಕೆಯು ತಮ್ಮ ಪಕ್ಷದ ಸೋಲಿಗೆ ಪ್ರಮುಖ ಕಾರಣ ಎಂಬುದನ್ನು ಅವರು ಒಪ್ಪಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಡೆಮಾಕ್ರಟರೊಂದಿಗೆ ಸೇರಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
ಅಮೆರಿಕ ಸಂಸತ್ತಿನ ಕೆಳಮನೆಯಾದ ಜನಪ್ರತಿನಿಧಿ ಸಭೆಗೆ ಒಟ್ಟು 435 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಡೆಮಾಕ್ರಟರು ರಿಪಬ್ಲಿಕನ್ ಭದ್ರಕೋಟೆಗಳನ್ನು ಭೇದಿಸಿ ಬಹುಮತಕ್ಕೆ ಬೇಕಾದ 218ರ ಗಡಿಯನ್ನು ದಾಟಿದ್ದಾರೆ.
ಎನ್ಬಿಸಿ ನ್ಯೂಸ್ ಅಂದಾಜಿನ ಪ್ರಕಾರ ಡೆಮಾಕ್ರಟರು ಕನಿಷ್ಠ 258 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಇದರಿಂದಾಗಿ ಹಕೀಮ್ ಜೆಫ್ರಿಸ್ ಅವರು ಅಮೆರಿಕದ ಇತಿಹಾಸದಲ್ಲೇ ಮೊದಲ ಕಪ್ಪು ವರ್ಣೀಯ ಹೌಸ್ ಸ್ಪೀಕರ್ ಆಗಲು ಸಜ್ಜಾಗಿದ್ದಾರೆ.
ಮೇಲ್ಮನೆಯಾದ ಸೆನೆಟ್ನ 100 ಸ್ಥಾನಗಳ ಪೈಕಿ 35 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಭರ್ಜರಿ ಯಶಸ್ಸು ಗಳಿಸಿದೆ. 35 ಸ್ಥಾನದಲ್ಲಿ ಡೆಮಾಕ್ರಟ್ 24 ಸ್ಥಾನ ಹಾಗೂ ರಿಪಬ್ಲಿಕನ್ 11 ಸ್ಥಾನದಲ್ಲಿ ಗೆದ್ದಿವೆ. ಹೀಗಾಗಿ ಸದನದಲ್ಲಿ ಡೆಮಾಕ್ರಟಿಕ್ ಬಲ ಬಹುಮತದ 51 ದಾಟಿ 54ಕ್ಕೇರಿದರೆ ರಿಪಬ್ಲಿಕನ್ ಬಲ 44ಕ್ಕೆ ಕುಸಿದಿದೆ.
ಟೆಕ್ಸಾಸ್, ಒಹಾಯೋ, ಮತ್ತು ಸುಮಾರು 100 ವರ್ಷಗಳಿಂದ ರಿಪಬ್ಲಿಕನ್ ವಶದಲ್ಲಿದ್ದ ಕಾನ್ಸಾಸ್ನಂತಹ ಪ್ರಮುಖ ರಾಜ್ಯಗಳಲ್ಲಿ ಡೆಮಾಕ್ರಟರು ಜಯಭೇರಿ ಬಾರಿಸಿ ಸೆನೆಟ್ ನಿಯಂತ್ರಣವನ್ನು ಪಡೆದುಕೊಂಡಿದ್ದಾರೆ.
ರಿಪಬ್ಲಿಕನ್ ಸೋಲಿಗೆ ಕಾರಣಗಳು:
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಾವಧಿಯ ಮಧ್ಯಭಾಗದಲ್ಲಿ ನಡೆದ ಈ ಚುನಾವಣೆ ಅವರ ಮೇಲಿನ ಜನಾಭಿಪ್ರಾಯವಾಗಿತ್ತು. ಅಮೆರಿಕದಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಹಣದುಬ್ಬರ ಹಾಗೂ ಇರಾನ್ ವಿರುದ್ಧ ಟ್ರಂಪ್ ಘೋಷಿಸಿದ ಯುದ್ಧ ಮತ್ತು ಅದರಿಂದಾಗಿ ಅಮೆರಿಕದಲ್ಲಿ ಇಂಧನ (ಗ್ಯಾಸ್) ಬೆಲೆಗಳು ಗಗನಕ್ಕೇರಿರುವುದು ರಿಪಬ್ಲಿಕನ್ನರ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಜನಪ್ರತಿನಿಧಿ ಸಭೆ (ಒಟ್ಟು ಸ್ಥಾನ 435/ಬಹುಮತ 218)
ಡೆಮಾಕ್ರಟಿಕ್ 255
ರಿಪಬ್ಲಿಕನ್ 151
ಎಣಿಕೆ ಬಾಕಿ 29
ಸೆನೆಟ್ (ಒಟ್ಟು ಸ್ಥಾನ 100/ಬಹುಮತ 51)
ಡೆಮಾಕ್ರಟಿಕ್ 54
ರಿಪಬ್ಲಿಕನ್ 44
ಎಣಿಕೆ ಬಾಕಿ 2
ಸೋಲು ಒಪ್ಪಿಕೊಳ್ಳಲು ಸಿದ್ಧ
ನಾನು ಈ ಫಲಿತಾಂಶ ಒಪ್ಪಿಕೊಳ್ಳಲು ಸಿದ್ಧನಿದ್ದೇನೆ ಮತ್ತು ದೇಶದ ಒಳಿತಿಗಾಗಿ ಡೆಮೋಕ್ರಾಟ್ ಪಕ್ಷದೊಂದಿಗೆ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ನಾನೇನೂ ಈ ಬ್ಯಾಲೆಟ್ ಪೇಪರ್ನಲ್ಲಿ ಸ್ಪರ್ಧಿಸಿರಲಿಲ್ಲ, ಒಂದು ವೇಳೆ ನಾನೇ ಚುನಾವಣೆಯಲ್ಲಿದ್ದಿದ್ದರೆ ನಾವು ಭರ್ಜರಿ ಬಹುಮತದಿಂದ ಗೆಲ್ಲುತ್ತಿದ್ದೆವು.
- ಡೊನಾಲ್ಡ್ ಟ್ರಂಪ್ , ಅಮೆರಿಕ ಅಧ್ಯಕ್ಷ
ಟ್ರಂಪ್ಗೇಕೆ ಸೋಲು?
ಅಧಿಕಾರಕ್ಕೆ ಬಂದಾಗಿನಿಂದಲೂ ಅತಿರೇಕದ ವರ್ತನೆ ಮೂಲಕ ಎಲ್ಲರಿಂದಲೂ ಟೀಕೆಗೆ ಗುರಿ
ಸಂಸತ್, ಸಂವಿಧಾನಕ್ಕೆ ಸವಾಲೆಸೆಯುವ ಹೇಳಿಕೆ, ನಡೆಗಳ ಮೂಲಕ ಎಲ್ಲರಿಂದ ಛೀಮಾರಿ
ಟ್ರಂಪ್ ವಲಸೆ, ಉದ್ಯೋಗ, ತೆರಿಗೆ ನೀತಿಗಳು ದೇಶಕ್ಕೆ ವರವಾಗುವ ಬದಲು ಮುಳುವಾಗಿತ್ತು
ದಿನೇ ದಿನ ಜನಜೀವನ ದುಬಾರಿಯಾಗಿತ್ತು. ಮಧ್ಯಪ್ರಾಚ್ಯ ಯುದ್ಧ ಬಳಿಕ ಡೀಸೆಲ್ ದರ ಏರಿಕೆ
ಕೊಲ್ಲಿ ಯುದ್ಧದಿಂದ ಆರ್ಥಿಕ ನಷ್ಟ, ಇರಾನ್ಗೆ ಸೋಲುಣಿಸಲು ವಿಫಲವಾಗಿದ್ದಕ್ಕೆ ಟೀಕೆಗೆ ತುತ್ತು
ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳಲ್ಲಿ ಯಾವುದೇ ಮಹತ್ವದ ಸಾಧನೆ ಇಲ್ಲದ ವೈಫಲ್ಯ
ಟ್ರಂಪ್ ಓಟಕ್ಕೆ ಬೀಳಲಿದೆ ಲಗಾಮು
ವಾಷಿಂಗ್ಟನ್: ಉಭಯ ಸದನಗಳಲ್ಲಿ ಡೆಮಾಕ್ರಟಿಕ್ ಪಕ್ಷವು ಬಹುಮತ ಪಡೆದಿರುವುದರಿಂದ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂದಿನ ಎರಡು ವರ್ಷಗಳ ಆಡಳಿತಾವಧಿಯಲ್ಲಿ ಅವರ ಯಾವುದೇ ಪ್ರಮುಖ ಮಸೂದೆ ಅಥವಾ ಕಾರ್ಯಸೂಚಿಗಳಿಗೆ ಸಂಸತ್ತಿನ ಒಪ್ಪಿಗೆ ಪಡೆಯುವುದು ಕಠಿಣವಾಗಲಿದೆ. ಎಲ್ಲದಕ್ಕೂ ಅವರು ಡೆಮಾಕ್ರಟಿಕನ್ನರ ಮರ್ಜಿ ಕಾಯಬೇಕಾಗುತ್ತದೆ. ಆದರೆ ರಕ್ಷಣೆ ವಿಷಯದಲ್ಲಿ ಟ್ರಂಪ್ಗೆ ಪರಮಾಧಿಕಾರವಿದೆ.
ವಿಪಕ್ಷಗಳು ಏನು ಮಾಡಬಹುದು?
ವಾಷಿಂಗ್ಟನ್: ರಿಪಬ್ಲಿಕನ್ ಪಕ್ಷದ ಯಾವುದೇ ಹೊಸ ಬಿಲ್ ಸುಲಭವಾಗಿ ಪಾಸ್ ಮಾಡಲು ವಿಪಕ್ಷ ತಡೆಯೊಡ್ಡಬಹುದು. ತೆರಿಗೆ ಕಡಿತ ಅಥವಾ ನೀತಿ ಬದಲಾವಣೆಗಳಂತಹ ನಿರ್ಧಾರಗಳಿಗೆ ಇನ್ನು ವಿಪಕ್ಷ ಒಪ್ಪಿಗೆ ಅನಿವಾರ್ಯ. ಡೆಮಾಕ್ರೆಟ್ಗೆ ತನಿಖೆ ನಡೆಸುವ ಅಧಿಕಾರ ಸಿಗುವುದರಿಂದ, ಇರಾನ್ ಯುದ್ಧ, ವಲಸೆ ಜಾರಿ ಮತ್ತು ಸರ್ಕಾರದೊಳಗಿನ ಭ್ರಷ್ಟಾಚಾರದ ಆರೋಪಗಳ ಕುರಿತು ಅವರು ವ್ಯಾಪಕವಾದ ತನಿಖೆ ಕೈಗೊಳ್ಳಬಹುದು. ಟ್ರಂಪ್ ಮಾಡುವ ನೇಮಕಾತಿಗಳಿಗೂ ತಡೆ ಒಡ್ಡಬಹುದು. ಟ್ರಂಪ್ಗೆ ವಾಗ್ದಂಡನೆ ವಿಧಿಸುವ ಅವಕಾಶವೂ ಸಿಗಲಿದೆ.