ಅಂತಿಮ ದಾಳಿಗೆ ಅಮೆರಿಕ ಸಿದ್ಧತೆ - ತಕ್ಕ ತಿರುಗೇಟಿನ ಎಚ್ಚರಿಕೆ ನೀಡಿದ ಇರಾನ್

Published : Mar 27, 2026, 06:33 AM IST
us iran

ಸಾರಾಂಶ

ತನ್ನ ಕದನ ವಿರಾಮ ಪ್ರಸ್ತಾವವನ್ನು ತಿರಸ್ಕರಿಸಿದ ವೈರಿ ಇರಾನ್‌ ವಿರುದ್ಧ ಕ್ರೋಧದಿಂದ ಕುದಿಯುತ್ತಿರುವ ಅಮೆರಿಕ, ಸಂಧಾನದ ದಾರಿ ಪೂರ್ಣ ಬಂದ್ ಅದರೆ ಇರಾನ್‌ ಮೇಲೆ ಭೂದಾಳಿ, ಮುಖ್ಯ ತೈಲ ಸೌಲಭ್ಯಗಳ ನಾಶ, ಖಾರ್ಗ್ ಮತ್ತು ಲಾರಕ್‌ ದ್ವೀಪದ ವಶ ಸೇರಿದಂತೆ ಹಲವು ಭೀಕರ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ವಾಷಿಂಗ್ಟನ್‌: ತನ್ನ ಕದನ ವಿರಾಮ ಪ್ರಸ್ತಾವವನ್ನು ತಿರಸ್ಕರಿಸಿದ ವೈರಿ ಇರಾನ್‌ ವಿರುದ್ಧ ಕ್ರೋಧದಿಂದ ಕುದಿಯುತ್ತಿರುವ ಅಮೆರಿಕ, ಸಂಧಾನದ ದಾರಿ ಪೂರ್ಣ ಬಂದ್ ಅದರೆ ಇರಾನ್‌ ಮೇಲೆ ಭೂದಾಳಿ, ಮುಖ್ಯ ತೈಲ ಸೌಲಭ್ಯಗಳ ನಾಶ, ಖಾರ್ಗ್ ಮತ್ತು ಲಾರಕ್‌ ದ್ವೀಪದ ವಶ ಸೇರಿದಂತೆ ಹಲವು ಭೀಕರ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ದೊಡ್ಡ ಏಟಿನ ಮೂಲಕ ಯುದ್ಧವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯಲು ಚಿಂತನೆ ನಡೆಸಿದೆ ಎಂದು ಆ್ಯಕ್ಸಿಯೋ ವರದಿ ಮಾಡಿದೆ.

ಇದರ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಕಾಲ ಮಿಂಚುವ ಮೊದಲೇ ಎಚ್ಚೆತ್ತುಕೊಳ್ಳಿ. ಒಮ್ಮೆ ಆಗಬಾರದ್ದು ಆಗಿಹೋದರೆ, ಮರಳಿ ಹಿಂತಿರುಗಲು ಸಾಧ್ಯವಿಲ್ಲ. ಅದರ ಪರಿಣಾಮ ಚೆನ್ನಾಗಿರುವುದಿಲ್ಲ’ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಭೂ ದಾಳಿ, ದ್ವೀಪ ವಶ ಗುರಿ:

ರಾಜತಾಂತ್ರಿಕ ಮಾತುಕತೆಗಳು ನೆರವೇರದಿದ್ದರೆ, ಇರಾನ್‌ನ ಮುಖ್ಯ ತೈಲ ಸೌಲಭ್ಯಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಲಿದೆ. ಇರಾನ್‌ನ ಅತಿ ಹೆಚ್ಚು ತೈಲ ರಫ್ತಾಗುವ ಖಾರ್ಗ್‌ ದ್ವೀಪದ ವಶ ಅಥವಾ ಮುತ್ತಿಗೆಗೆ ಯೋಜನೆ ರೂಪಿಸುತ್ತಿದೆ. ಹೋರ್ಮುಜ್‌ಗೆ ಹತ್ತಿರದಲ್ಲೇ ಇರುವ ಲಾರಕ್ ದ್ವೀಪದ ಮೇಲೂ ಅಮೆರಿಕ ಕಣ್ಣಿಟ್ಟಿದೆ. ಇಲ್ಲಿ ಇರಾನ್ ಸೇನಾ ನೆಲೆಗಳು ಮತ್ತು ರಾಡಾರ್ ವ್ಯವಸ್ಥೆಗಳಿವೆ. ಅವು ಹಡಗುಗಳ ಚಲನೆಯನ್ನು ಗಮನಿಸುತ್ತವೆ.

3ನೇ ಆಯ್ಕೆಯಾಗಿ ಪರ್ಷಿಯನ್ ಕೊಲ್ಲಿಯ ಪೂರ್ವ ಭಾಗದಲ್ಲಿರುವ ಅಬು ಮುಸಾ ದ್ವೀಪದ ಮೇಲೆ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ದ್ವೀಪವು ಕೊಲ್ಲಿಯಿಂದ ಹೊರಡುವ ಹಡಗುಗಳ ಮೇಲೆ ಇರಾನ್‌ಗೆ ತಾಂತ್ರಿಕ ಮಾಹಿತಿ ನೀಡುತ್ತದೆ. ಇದನ್ನು ಅಮೆರಿಕ ಸ್ನೇಹಿತ ಯುಎಇ ತನ್ನದೆಂದು ವಾದಿಸುತ್ತಿದೆ. ಇದಲ್ಲದೆ, ಇರಾನ್‌ನ ತೈಲ ಹಡಗುಗಳನ್ನು ನಿರ್ಬಂಧಿಸುವುದು ಅಥವಾ ವಶಪಡಿಸಿಕೊಳ್ಳುವ ಮೂಲಕ ತೈಲ ಸಾಗಣೆಯನ್ನು ನೇರವಾಗಿ ತಡೆಯುವ ಯೋಜನೆಗಳನ್ನೂ ಚರ್ಚಿಸಲಾಗುತ್ತಿದೆ. ಇರಾನ್‌ ಮೇಲೆ ಅಮೆರಿಕ ಸೈನಿಕರು ದಾಳಿ ನಡೆಸಿ, ಯುರೇನಿಯಂ ಅನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ ಎಂದು ವರದಿ ಉಲ್ಲೇಖಿಸಿದೆ.

ಟ್ರಂಪ್ ಕಿಡಿ:

ಈ ನಡುವೆ, ತಮ್ಮ ಟ್ರುತ್‌ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್‌‘ಇರಾನ್‌ನ ಮಾತುಕತೆಗಳು ವಿಭಿನ್ನ ಮತ್ತು ವಿಚಿತ್ರವಾಗಿವೆ. ಅವರು ಒಪ್ಪಂದ ಮಾಡಿಕೊಳ್ಳುವಂತೆ ನಮ್ಮನ್ನು ಬೇಡಿಕೊಳ್ಳುತ್ತಿದ್ದಾರೆ. ಸೇನಾ ರೀತಿಯಲ್ಲಿ ನಾಶವಾಗಿರುವುದರಿಂದ ಮತ್ತು ಹಿಂದಕ್ಕೆ ಮರಳುವ ಸಾಧ್ಯತೆಯಿಲ್ಲದ್ದರಿಂದ ಅವರು ಹಾಗೆ ಮಾಡಲೇಬೇಕು. ಆದರೂ ಅವರು ಸಾರ್ವಜನಿಕವಾಗಿ ‘ಅಮೆರಿಕದ ಪ್ರಸ್ತಾವವನ್ನು ನೋಡುತ್ತಿದ್ದೇವೆ’ ಎಂದು ಹೇಳುತ್ತಾರೆ. ತಪ್ಪು! ತಡವಾಗುವ ಮೊದಲು ಅವರು ಗಂಭೀರವಾಗಿ ವರ್ತಿಸುವುದು ಉತ್ತಮ. ಏಕೆಂದರೆ ಒಮ್ಮೆ ಅದು ಸಂಭವಿಸಿದರೆ, ಹಿಂದೆ ಸರಿಯಲು ಸಾಧ್ಯವಿಲ್ಲ. ಅದು ಸುಂದರವಾಗಿರುವುದಿಲ್ಲ’ ಎಂದು ಎಚ್ಚರಿಸಿದ್ದಾರೆ.

ಇದಲ್ಲದೆ ಸಂಪುಟ ಸಭೆಯಲ್ಲಿ ಟ್ರಂಪ್ ಅವರು, ‘ಇರಾನಿಗರು ಕೆಟ್ಟ ಹೋರಾಟಗಾರರು, ಆದರೆ ಉತ್ತಮ ಸಮಾಲೋಚಕರು. ಒಪ್ಪಂದ ಬೇಕೆಂದು ಕೇಳುತ್ತಿರುವರು ಅವರು. ನಾನಲ್ಲ’ ಎಂದಿದ್ದಾರೆ.

ತಮ್ಮದೇ ಜನ ಕೊಲ್ಲುವ ಭಯ:

ಇದಕ್ಕೂ ಮುನ್ನ ಬುಧವಾರ ರಾತ್ರಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಟ್ರಂಪ್‌, ‘ಇರಾನ್‌ನವರು ಮಾತುಕತೆ ನಡೆಸುತ್ತಿದ್ದಾರೆ ಮತ್ತು ಒಪ್ಪಂದ ಮಾಡಿಕೊಳ್ಳಲು ತೀವ್ರವಾಗಿ ಬಯಸುತ್ತಿದ್ದಾರೆ. ಆದರೆ ಅವರು ಅದನ್ನು ಹೇಳಲು ಹೆದರುತ್ತಿದ್ದಾರೆ. ಏಕೆಂದರೆ ಹಾಗೇನಾದರೂ ಆದರೆ ತಮ್ಮದೇ ಜನ ತಮ್ಮನ್ನು ಕೊಲ್ಲುತ್ತಾರೆ ಎಂಬ ಭಯ ಅವರನ್ನು ಕಾಡುತ್ತಿದೆ’ ಎಂದಿದ್ದಾರೆ.

ಇನ್ನೊಂದು ಜಲಸಂಧಿಗೆ ನಿರ್ಬಂಧ: ಇರಾನ್‌ ಬೆದರಿಕೆ

ಟೆಹರಾನ್‌: ಹೋರ್ಮುಜ್‌ ಜಲಸಂಧಿ ಆಯ್ತು, ಇದೀಗ ಅಂತಾರಾಷ್ಟ್ರೀಯ ಸಮುದ್ರ ವ್ಯಾಪಾರದ ಪಾಲಿನ ಮತ್ತೊಂದು ಮಹತ್ವದ ರಹದಾರಿಯಾದ ಬಾಬ್‌ ಅಲ್‌ ಮಂಡೆಬ್‌ ಜಲಸಂಧಿಯನ್ನೂ ಬಂದ್‌ ಮಾಡುವುದಾಗಿ ಇರಾನ್‌ ಬೆದರಿಕೆ ಹಾಕಿದೆ.

ಒಂದು ವೇಳೆ ಇಸ್ರೇಲ್‌, ಅಮೆರಿಕ ಖಾರ್ಗ್‌ ದ್ವೀಪ ಸೇರಿ ಬೇರೆಡೆ ಸೇನಾ ಕಾರ್ಯಾಚರಣೆಗಿಳಿದರೆ ಬಾಬ್‌ ಅಲ್‌ ಮಂಡೆಬ್‌ ಜಲಸಂಧಿಯಲ್ಲೂ ವಾಣಿಜ್ಯ ಹಡಗುಗಳ ಸಂಚಾರ ಬಂದ್‌ ಮಾಡುವ ಸಾಮರ್ಥ್ಯ ತನಗಿದೆ ಎಂದು ಇರಾನ್‌ ಎಚ್ಚರಿಕೆ ನೀಡಿದೆ. ಈ ಮೂಲಕ 28 ದಿನಗಳಿಂದ ನಡೆಯುತ್ತಿರುವ ಮಧ್ಯಪ್ರಾಚ್ಯ ಸಂಘರ್ಷ ಮತ್ತೊಂದು ಸಾಗರ ಮಾರ್ಗದಲ್ಲೂ ವಾಣಿಜ್ಯ ಹಡಗುಗಳ ಸಂಚಾರ ಅಸ್ತವ್ಯಸ್ತಗೊಳಿಸುವ ಸುಳಿವು ನೀಡಿದೆ.

ಏನಿದು ಬಾಬ್‌ ಅಲ್‌ ಮಂಡೆಬ್‌ ಜಲಸಂಧಿ?:

ಅರೇಬಿಯಾದಲ್ಲಿ ‘ಕಣ್ಣೀರಿನ ಬಾಗಿಲು’ ಎಂದು ಕರೆಯಲ್ಪಡುವ ಬಾಬ್‌ ಅಲ್‌ ಮಂಡೆಬ್‌ ಜಲಸಂಧಿಯು ಹೊರ್ಮುಜ್‌ ರೀತಿಯ ಕಿರಿದಾದ ಹಡಗು ಸಾಗಣೆ ಮಾರ್ಗವಾಗಿದೆ. 29 ಕಿ.ಮೀ. ಅಗಲದ ಈ ಜಲಸಂಧಿಯು ಗಲ್ಫ್‌ ಆಫ್‌ ಅಡೆನ್‌ ಹಾಗೂ ಅರಬ್ಬೀ ಸಮುದ್ರವನ್ನು ಕೆಂಪು ಸಮುದ್ರದೊಂದಿಗೆ ಜೋಡಿಸುತ್ತದೆ. ಯೆಮೆನ್‌ ಮತ್ತು ಜಿಬೌಟಿ ಹಾಗೂ ಎರಿಟ್ರಿಯಾ ದೇಶಗಳ ನಡುವೆ ಇರುವ ಈ ಜಲಸಂಧಿ ಕೂಡ ಪ್ರಮುಖ ಹಡಗು ಮಾರ್ಗವಾಗಿದೆ. ಯುರೋಪ್‌, ಆಫ್ರಿಕಾ ಮತ್ತು ಪೂರ್ವ ಏಷ್ಯಾವನ್ನು ಈ ಜಲಸಂಧಿ ಸಂಪರ್ಕಿಸುತ್ತದೆ. ಸಮುದ್ರ ಮಾರ್ಗದ ಮೂಲಕ ನಡೆಯುವ ವಿಶ್ವದ ಶೇ.12ರಷ್ಟು ತೈಲ ಮತ್ತು ಎಲ್‌ಎನ್‌ಜಿ ವ್ಯವಹಾರ ಈ ಜಲಸಂಧಿ ಮೂಲಕವೇ ನಡೆಯುತ್ತದೆ. ಕೆಂಪು ಸಮುದ್ರದ ಮೂಲಕ ವಾರ್ಷಿಕ 93.95 ಲಕ್ಷ ಕೋಟಿ ರು. ಮೌಲ್ಯದ ಸರಕುಗಳು ಸಾಗಣೆಯಾಗುತ್ತವೆ.

ಹೌತಿ ಉಗ್ರರ ಬೆದರಿಕೆ:

ಲೆಬನಾನ್‌ನ ಹಿಜ್ಬುಲ್ಲಾ ರೀತಿಯಲ್ಲೇ ಯೆಮೆನ್‌ನ ಹೌತಿ ಬಂಡುಕೋರರು ಇರಾನ್‌ನ ಬೆಂಬಲಿಗರು. ಗಾಜಾ ಯುದ್ಧದ ಕೆಂಪು ಸಮುದ್ರದಲ್ಲಿ ಅಂತಾರಾಷ್ಟ್ರೀಯ ಹಡಗುಗಳ ಮೇಲೆ ದಾಳಿ ನಡೆಸಿದ್ದರು. ನಾಲ್ಕು ಹಡಗುಗಳನ್ನು ಮುಳುಗಿಸಿದ್ದರು. ಇದೀಗ ಇರಾನ್‌ ಹೌತಿ ಉಗ್ರರನ್ನು ಬಳಸಿಕೊಂಡು ಈ ಜಲಮಾರ್ಗದಲ್ಲಿ ಅಂತಾರಾಷ್ಟ್ರೀಯ ಹಡಗು ಸಂಚಾರಕ್ಕೆ ಅಡ್ಡಿ ಉಂಟು ಮಾಡುವ ಆತಂಕ ಶುರುವಾಗಿದೆ.

ಈ ಜಲಸಂಧಿ ಬಂದ್‌ನ ಪರಿಣಾಮ ಏನು?

ಹೊರ್ಮುಜ್‌ ರೀತಿಯಲ್ಲಿ ಬಾಬ್‌ ಅಲ್‌ ಮಂಡೆಬ್‌ ಜಲಸಂಧಿಯಲ್ಲೂ ಹಡಗುಗಳ ಮೇಲೆ ದಾಳಿ ನಡೆದರೆ ವಾಣಿಜ್ಯ ಹಡಗುಗಳು ದಕ್ಷಿಣ ಆಫ್ರಿಕಾದ ಕೇಪ್‌ ಆಫ್‌ ಗುಡ್‌ ಹೋಪ್‌ ಮೂಲಕ ಸಾಗಬೇಕಾಗುತ್ತದೆ. ಇದು 20-25 ದಿನಗಳ ಹಡಗು ಪ್ರಯಾಣವನ್ನು 30ರಿಂದ 40 ದಿನಕ್ಕೆ ಹೆಚ್ಚಿಸಲಿದೆ. ಇದರಿಂದ ಹಡಗು ಮೂಲಕ ಸರಕು ಸಾಗಣೆ ವೆಚ್ಚ ಮತ್ತಷ್ಟು ಹೆಚ್ಚಳವಾಗಲಿದೆ.

 

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಭಾರತ ಸೇರಿ 5 ಮಿತ್ರ ದೇಶಗಳಿಗೆ ಹೊರ್ಮುಜ್ ಜಲಸಂಧಿ ಓಪನ್-ಭಾರತಕ್ಕೆ ತೈಲ, ಅನಿಲ ಆಗಮನ ಸುಗಮ
ಹೋರ್ಮುಜ್‌ ಜಲಸಂಧಿಯನ್ನು ಮುಚ್ಚಿಸಿದ್ದಇರಾನ್‌ ಕಮಾಂಡರ್‌ ಅಲಿರೇಜಾ ಹತ್ಯೆ