₹10000 ಕೋಟಿ ಕೊಡ್ತೀವಿ ದಾಳಿ ನಿಲ್ಲಿಸ್ಬಿಡಿ: ಹೌತಿಗೆ ಸೌದಿ ಆಫರ್‌!

Published : Oct 28, 2026, 10:48 AM IST
saudi arabia houthis deal 1 billion dollar offer asim munir iran mediation report

ಸಾರಾಂಶ

ಶತ್ರುಗಳು ದಾಳಿ ಮಾಡಿದರೆ ನೆರವಿಗೆ ಬರುವ ಪಾಕಿಸ್ತಾನದ ಭರವಸೆ ಹುಸಿಯಾದ ಬೆನ್ನಲ್ಲೇ, ಇರಾನ್‌ ಬೆಂಬಲಿತ ಹೌತಿ ಬಂಡುಕೋರರ ದಾಳಿ ತಡೆಯಲು ಅವರಿಗೇ 10000 ಕೋಟಿ ರು. ಲಂಚ ನೀಡುವ ಆಫರ್‌ ಒಂದನ್ನು ಸೌದಿ ಅರೇಬಿಯಾ ಸರ್ಕಾರ ಮುಂದಿಟ್ಟಿದೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ರಿಯಾದ್‌: ಶತ್ರುಗಳು ದಾಳಿ ಮಾಡಿದರೆ ನೆರವಿಗೆ ಬರುವ ಪಾಕಿಸ್ತಾನದ ಭರವಸೆ ಹುಸಿಯಾದ ಬೆನ್ನಲ್ಲೇ, ಇರಾನ್‌ ಬೆಂಬಲಿತ ಹೌತಿ ಬಂಡುಕೋರರ ದಾಳಿ ತಡೆಯಲು ಅವರಿಗೇ 10000 ಕೋಟಿ ರು. ಲಂಚ ನೀಡುವ ಆಫರ್‌ ಒಂದನ್ನು ಸೌದಿ ಅರೇಬಿಯಾ ಸರ್ಕಾರ ಮುಂದಿಟ್ಟಿದೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಇನ್ನೂ ಕುಚೋದ್ಯ ಏನೆಂದರೆ, ತನ್ನ ಸೇನೆ ಬಳಸಿ ಹೌತಿಗಳ ದಾಳಿಯಿಂದ ಸೌದಿಗೆ ರಕ್ಷಣೆ ನೀಡಬೇಕಿದ್ದ ಪಾಕಿಸ್ತಾನವೇ, ಸೌದಿ ಮತ್ತು ಹೌತಿಗಳ ನಡುವಣ ಈ ಹಣಕಾಸಿನ ಡೀಲ್‌ನಲ್ಲಿ ಭಾಗಿಯಾಗಿದೆ ಎಂದು ವರದಿಗಳು ತಿಳಿಸಿವೆ.

ಇಸ್ರೇಲಿ ಮಾಧ್ಯಮಗಳ ವರದಿ ಅನ್ವಯ, ಕಳೆದ ಹಲವು ದಿನಗಳಿಂದ ರಾಜಧಾನಿ ರಿಯಾದ್‌ನ ವಿಮಾನ ನಿಲ್ದಾಣ, ತೈಲ ಸಂಸ್ಕರಣಾ ಘಟಕಗಳ ಮೇಲೆ ಬಿಟ್ಟೂಬಿಡದೆ ನಡೆಯುತ್ತಿರುವ ಹೌತಿ ಬಂಡುಕೋರರ ದಾಳಿಯಿಂದ ಕಂಗೆಟ್ಟಿರುವ ಸೌದಿ ಅರೇಬಿಯಾ ಸರ್ಕಾರ, ದಾಳಿ ನಿಲ್ಲಿಸಿದರೆ 10 ಸಾವಿರ ಕೋಟಿ ರು. ಕೊಡುವುದಾಗಿ ಶತ್ರುವಿಗೇ ಆಫರ್‌ ನೀಡಿದೆ ಎನ್ನಲಾಗಿದೆ.

ಈ ಸಂಬಂಧ ಇತ್ತೀಚೆಗೆ ಪಾಕ್‌ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಂ ಮುನೀರ್‌, ಟರ್ಕಿಯ ಗುಪ್ತಚರ ಮುಖ್ಯಸ್ಥ ಇಬ್ರಾಹಿಂ ಕಾಲಿನ್ ಮತ್ತು ಇರಾನ್‌ನ ರಾಜತಾಂತ್ರಿಕರ ಮಧ್ಯಸ್ಥಿಕೆಯಲ್ಲಿ ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿ ಹೌತಿಗಳೊಂದಿಗೆ ಸಭೆ ಏರ್ಪಡಿಸಲಾಗಿತ್ತು.

ಇದರಲ್ಲಿ ಭಾಗಿಯಾದ ಸೌದಿ ರಕ್ಷಣಾ ಸಚಿವ ಪ್ರಿನ್ಸ್‌ ಖಾಲಿದ್ ಬಿನ್ ಸಲ್ಮಾನ್, ಯುದ್ಧ ಅಂತ್ಯಕ್ಕೆ ಪ್ರತಿಯಾಗಿ 1 ಬಿಲಿಯನ್‌ ಡಾಲರ್‌ ನೀಡುವುದಾಗಿ ಪ್ರಸ್ತಾಪಿಸಿದ್ದರು. ಜತೆಗೆ, ತಮ್ಮ ಹರ್ಕ್ಯುಲಿಸ್ ಮಿಲಿಟರಿ ಸಾರಿಗೆ ವಿಮಾನದಲ್ಲಿ ಹಣವನ್ನೂ ಕೊಂಡೊಯ್ದಿದ್ದರು ಎಂದು ವರದಿಗಳು ತಿಳಿಸಿವೆ.

ದಾಳಿ ಏಕೆ?:

ಯೆಮನ್‌ನ ರಾಜಕೀಯದಲ್ಲಿ ಸೌದಿ ಮಧ್ಯಪ್ರವೇಶವನ್ನು ಹೌತಿಗಳು ಒಪ್ಪುತ್ತಿಲ್ಲ. ಅಲ್ಲಿಯ ದುರ್ಬಲ ಸರ್ಕಾರವನ್ನು ಸೌದಿ ದೊರೆಗಳು ಬೆಂಬಲಿಸುತ್ತಿದ್ದಾರೆ ಎಂಬುದು ಹೌತಿಗಳ ಆರೋಪ. ಜೊತೆಗೆ 2015ರಲ್ಲಿ ಹೌತಿಗಳು ಯೆಮೆನ್‌ ರಾಜಧಾನಿ ಸನಾವನ್ನು ವಶಕ್ಕೆ ಪಡೆದಾಗ ಅದರ ವಿರುದ್ಧ ಸೇನಾ ಮೈತ್ರಿಕೂಟ ರಚಿಸಿ ರಾಜಧಾನಿಯನ್ನು ಮರಳಿ ಸರ್ಕಾರದ ವಶಕ್ಕೆ ಸಿಗುವಂತೆ ಸೌದಿ ಅರೇಬಿಯಾ ಮಾಡಿತ್ತು. ಮತ್ತೊಂದೆಡೆ ಯೆಮನ್‌ನಲ್ಲಿ ಇರುವ ಹೌತಿ ಬಂಡುಕೋರರಿಗೆ ಇರಾನ್‌ನ ಬೆಂಬಲವಿದೆ. ಇತ್ತೀಚೆಗೆ ಇರಾನ್‌ ಮೇಲೆ ನಡೆಸಿದ ದಾಳಿ ವೇಳೆ ಅಮೆರಿಕ ಸೇನಾಪಡೆಗಳು ಸೌದಿ ಅರೇಬಿಯಾವನ್ನು ತಮ್ಮ ನೆಲೆ ಮಾಡಿಕೊಂಡಿದ್ದವು. ಆ ಸೇಡು ತೀರಿಸಿಕೊಳ್ಳಲು ಸೌದಿ ಮೇಲೆ ಹೌತಿಗಳು ದಾಳಿ ನಡೆಸುತ್ತಿದ್ದಾರೆ.

ಫಲ ಕೊಡದ ಪಾಕ್‌ ಡೀಲ್‌:

ಒಂದು ರಾಷ್ಟ್ರದ ಮೇಲಿನ ದಾಳಿಯನ್ನು ತಮ್ಮ ಮೇಲಿನ ನೇರ ಆಕ್ರಮಣ ಎಂದು ಪರಿಗಣಿಸಿ ಮಿತ್ರನ ರಕ್ಷಣೆಗೆ ಧಾವಿಸಬೇಕು ಎಂದು ಆಗಸ್ಟ್‌ನಲ್ಲಿ ಪಾಕಿಸ್ತಾನ ಹಾಗೂ ಟರ್ಕಿಯ ಜತೆ ಮಾಡಿಕೊಳ್ಳಲಾಗಿದ್ದ ಒಪ್ಪಂದ ಸೌದಿಯನ್ನು ಹೌತಿಗಳಿಂದ ಕಾಪಾಡುವುದರಲ್ಲಿ ವಿಫಲವಾಗಿದೆ. ಈ ಹಿಂದೆ ಅ.8ರಂದು ಸೌದಿ ಪರ ಪಾಕ್‌ ಯುದ್ಧವಿಮಾನಗಳೊಂದಿಗೆ ಕದನ ಕಣಕ್ಕೆ ಇಳಿದಿತ್ತಾದರೂ ಹೌತಿಗಳನ್ನು ಹಿಮ್ಮೆಟ್ಟಿಸಲು ಅಥವಾ ಸುಮ್ಮನಾಗಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸೌದಿ ಸರ್ಕಾರ ಅನಿವಾರ್ಯವಾಗಿ ಹಣದ ಆಮಿಷ ಒಡ್ಡಿ ಹೌತಿಗಳ ದಾಳಿ ತಡೆಯಲು ಮುಂದಾಗಿದೆ.

ನಿಲ್ಲದ ಹೌತಿ ದಾಳಿ: ಸೌದಿಯ ರಕ್ಷಣಾ ಇಲಾಖೆಗೇ ಬಾಂಬ್‌!

ರಿಯಾದ್‌: ಸೌದಿ ಅರೇಬಿಯಾದ ಮೇಲೆ ದಾಳಿ ತೀವ್ರಗೊಳಿಸಿರುವ ಹೌತಿ ಉಗ್ರರು ಸೌದಿ ರಕ್ಷಣಾ ಸಚಿವಾಲಯಕ್ಕೇ ಕ್ಷಿಪಣಿ ದಾಳಿ ನಡೆಸಿದ್ದಾರೆ. ಅಲ್ಲದೆ ಸೌದಿ ಅರೇಬಿಯಾದ ಎರಡು ವಿಮಾನಗಳನ್ನು ಉಡಾಯಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಇದನ್ನು ಸೌದಿ ಅರೇಬಿಯಾ ಇನ್ನೂ ಖಚಿತಪಡಿಸಿಲ್ಲ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಯುರೋಪ್‌ನ 5 ದೇಶಗಳಲ್ಲಿ ವೀಕೆಂಡ್‌ ದಂಗೆ
ಟ್ರಂಪ್‌ - ಮ್ಯಾಕ್ರಾನ್‌ ಜಟಾಪಟಿ ಫ್ರಾನ್ಸ್‌ ಶೀಘ್ರವೇ ಮುಸ್ಲಿಂ ದೇಶ ಆಗುತ್ತೆ: ಟ್ರಂಪ್‌