ಕೆಫೆ ಬಾಂಬ್‌ ಸ್ಫೋಟ ಕೇಸಲ್ಲಿ ಮೊದಲ ಸೆರೆ

| Published : Mar 29 2024, 02:02 AM IST / Updated: Mar 29 2024, 08:16 AM IST

ಸಾರಾಂಶ

ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸಂಚು ಭೇದಿಸುವಲ್ಲಿ ಯಶಸ್ಸು ಕಂಡಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಈ ವಿಧ್ವಂಸಕ ಕೃತ್ಯಕ್ಕೆ ಸಹಕರಿಸಿದ್ದ ಶಂಕಿತ ಉಗ್ರನೊಬ್ಬನನ್ನು ಸೆರೆ ಹಿಡಿದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸಂಚು ಭೇದಿಸುವಲ್ಲಿ ಯಶಸ್ಸು ಕಂಡಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಈ ವಿಧ್ವಂಸಕ ಕೃತ್ಯಕ್ಕೆ ಸಹಕರಿಸಿದ್ದ ಶಂಕಿತ ಉಗ್ರನೊಬ್ಬನನ್ನು ಸೆರೆ ಹಿಡಿದಿದೆ.

]ತನ್ಮೂಲಕ ಕೆಫೆ ಸ್ಫೋಟ ಪ್ರಕರಣದಲ್ಲಿ ಮೊದಲ ಬಂಧನವಾದಂತಾಗಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕಳಸದ ಮುಜಾಮಿಲ್‌ ಷರೀಫ್‌ (34) ಬಂಧಿತನಾಗಿದ್ದು, ಆತನಿಂದ ಲ್ಯಾಪ್‌ಟಾಪ್ ಹಾಗೂ ಹಣ ಜಪ್ತಿ ಮಾಡಲಾಗಿದೆ.

ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟು ಪರಾರಿಯಾಗಿರುವ ಇಸ್ಲಾಮಿಕ್ ಸ್ಟೇಟ್ಸ್‌ (ಐಸಿಸ್‌) ‘ಶಿವಮೊಗ್ಗ ಮಾಡ್ಯೂಲ್‌’ನ ಮೋಸ್ಟ್ ವಾಂಟೆಡ್‌ ಶಂಕಿತ ಉಗ್ರ ಮುಸಾವೀರ್ ಹುಸೇನ್‌ ಶಾಜಿಬ್‌ ಹಾಗೂ ಪ್ರಮುಖ ಸಂಚುಕೋರ ಅಬ್ದುಲ್‌ ಮತೀನ್ ತಾಹಾನಿಗೆ ಮುಜಾಮಿಲ್ ಲಾಜಿಸ್ಟಿಕಲ್‌ ಸಹಕಾರ ನೀಡಿದ್ದ ಎಂದು ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಪ್ರಕರಣ ಸಂಬಂಧ ಬೆಂಗಳೂರು, ತೀರ್ಥಹಳ್ಳಿ ಹಾಗೂ ಕೊಪ್ಪ ಸೇರಿದಂತೆ ಕರ್ನಾಟಕದ 12 ಸ್ಥಳಗಳು ಮಾತ್ರವಲ್ಲದೆ ತಮಿಳುನಾಡಿನ 5 ಹಾಗೂ ಉತ್ತರಪ್ರದೇಶದ 1 ಸೇರಿ ಒಟ್ಟು 18 ಸ್ಥಳಗಳಲ್ಲಿ ಬುಧವಾರ ಎನ್‌ಐಎ ಭರ್ಜರಿ ಶೋಧ ಕಾರ್ಯ ನಡೆಸಿತ್ತು. 

ಆ ವೇಳೆ ಲಭ್ಯವಾದ ಮಾಹಿತಿ ಆಧರಿಸಿ ಕೊಪ್ಪ ತಾಲೂಕಿನ ಕಳಸದಲ್ಲಿ ಮುಜಾಮಿಲ್‌ನನ್ನು ಬಂಧಿಸಲಾಯಿತು ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ.ಮಾ.1ರಂದು ಬೆಂಗಳೂರಿನ ಐಟಿ ಕಾರಿಡಾರ್‌ ಕುಂದಲಹಳ್ಳಿ ಕಾಲೋನಿಯ ದಿ ರಾಮೇಶ್ವರಂ ಕೆಫೆಗೆ ಬ್ಯಾಗ್‌ನಲ್ಲಿ ಬಾಂಬ್ ತಂದಿಟ್ಟು ಶಂಕಿತರು ಸ್ಫೋಟಿಸಿದ್ದರು. 

ಈ ವಿಧ್ವಂಸಕ ಕೃತ್ಯದಲ್ಲಿ 20ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದರು. ಈ ಕೃತ್ಯದಲ್ಲಿ ಬಾಂಬರ್ ಬೆನ್ನುಹತ್ತಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಿಸಿಬಿ ಹಾಗೂ ಎನ್‌ಐಎ ಜಂಟಿ ಕಾರ್ಯಾಚರಣೆ ನಡೆಸಿದ್ದವು. 

ಸತತ ಪ್ರಯತ್ನದ ಬಳಿಕ ಕೆಫೆಗೆ ಬಾಂಬ್ ಇಟ್ಟು ಪರಾರಿಯಾಗಿದ್ದ ಶಂಕಿತ ಉಗ್ರ ಮುಸಾವೀರ್‌ ಗುರುತು ಪತ್ತೆ ಹಚ್ಚುವಲ್ಲಿ ತನಿಖಾ ದಳಗಳು ಯಶಸ್ಸು ಕಂಡಿದ್ದವು. 

ಈಗ ಮುಂದುವರೆದ ಕಾರ್ಯಾಚರಣೆಯಲ್ಲಿ ಕೃತ್ಯಕ್ಕೆ ನೆರವು ನೀಡಿದ್ದ ಶಂಕಿತ ಉಗ್ರ ಮುಜಾಮಿಲ್‌ನನ್ನು ಎನ್‌ಐಎ ಬೇಟೆಯಾಡಿದೆ.

3 ಶಂಕಿತರ ಮನೆಗಳ ಶೋಧ: ತೀರ್ಥಹಳ್ಳಿ ತಾಲೂಕಿನಲ್ಲಿರುವ ಮುಸಾವೀರ್ ಹುಸೇನ್, ಮತೀನ್ ಹಾಗೂ ಕೊಪ್ಪ ತಾಲೂಕಿನ ಕಳಸದ ಮುಜಾಮಿಲ್‌ ಮನೆಗಳ ಮೇಲೆ ಗುರುವಾರ ಕೂಡ ಎನ್‌ಐಎ ದಾಳಿ ನಡೆಸಿದೆ. 

ಈ ವೇಳೆ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ನಗದು ಹಣ ಜಪ್ತಿಯಾಗಿದೆ. ಈ ಎಲೆಕ್ಟ್ರಿಕ್‌ ವಸ್ತುಗಳನ್ನು ಪರಿಶೀಲನೆಗೊಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಬಾಂಬ್‌ ತಯಾರಿಕೆಗೆ ಮುಜಾಮಿಲ್ ನೆರವು?
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೃತ್ಯದಲ್ಲಿ ಕಚ್ಚಾ ಬಾಂಬ್ (ಐಇಡಿ) ತಯಾರಿಕೆಯಲ್ಲಿ ಮುಸಾವೀರ್ ಮತ್ತು ಮತೀನ್‌ಗೆ ಮುಜಾಮಿಲ್ ನೆರವು ನೀಡಿದ್ದಾನೆ ಎನ್ನಲಾಗಿದೆ. 

ತೀರ್ಥಹಳ್ಳಿ ತಾಲೂಕಿನಲ್ಲಿ ಶಿವಮೊಗ್ಗ ಐಸಿಸ್‌ ತಂಡ ಸಕ್ರಿಯವಾಗಿತ್ತು. ಆ ತಾಲೂಕಿನ ನದಿ ತೀರದಲ್ಲೇ ಕಚ್ಚಾ ಬಾಂಬ್ ತಯಾರಿಸಿ ಶಂಕಿತ ಉಗ್ರರು ಪ್ರಯೋಗ ಕೂಡಾ ನಡೆಸಿದ್ದರು. 

ಈಗ ಕೆಫೆ ಸ್ಫೋಟದ ಕಚ್ಚಾ ಬಾಂಬ್‌ ತಯಾರಿಕೆಯಲ್ಲಿ ಮುಸಾವೀರ್ ತಂಡಕ್ಕೆ ಮುಜಾಮಿಲ್‌ ನೆರವು ನೀಡಿದ್ದಾನೆ ಎಂದು ಮೂಲಗಳು ಹೇಳಿವೆ.