ಕನ್ನಡಪ್ರಭ ವಾರ್ತೆ ಮಂಡ್ಯ
ಗೂಡ್ಸ್ ವಾಹನ ಚಾಲಕನ ಮೇಲೆ ಆರೋಪಿಗಳು ನಡೆಸಿದ ಶೂಟೌಟ್ ಪ್ರಕರಣದಲ್ಲಿ ಪೊಲೀಸರ ನಡೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.ಶೂಟೌಟ್ ಪ್ರಕರಣದ ಪ್ರಮುಖ ಆರೋಪಿ ರೋಹನ್‌ಗೌಡ ಹಾಗೂ ಆತನ ಕುಟುಂಬದ ಜೊತೆಗಿನ ಪೊಲೀಸ್ ಅಧಿಕಾರಿಯೊಬ್ಬರು ಹೊಂದಿರುವ ಆತ್ಮೀಯ ಒಡನಾಟದಿಂದಾಗಿ ಇಡೀ ಪ್ರಕರಣದ ದಿಕ್ಕನ್ನೇ ತಪ್ಪಿಸಿ ಪ್ರಭಾವಿ ಪುತ್ರನ ಬೆನ್ನಿಗೆ ನಿಂತಿದ್ದಾರೆಂಬ ಬಗ್ಗೆ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಪ್ರಕರಣದ ತನಿಖೆಗೂ ಮೊದಲೇ ಆರೋಪಿಗಳಿಗೆ ಪೊಲೀಸರು ಕ್ಲೀನ್‌ಚಿಟ್ ಕೊಡುವ ಪ್ರಯತ್ನ ನಡೆಸಲಾಗಿರುವ ಅನುಮಾನಗಳು ವ್ಯಕ್ತವಾಗಿದ್ದು, ಎಫ್‌ಐಆರ್‌ನಲ್ಲಿ ಆರೋಪಿಗಳ ವಿರುದ್ಧ ಪ್ರಮುಖ ಸೆಕ್ಷನ್‌ಗಳನ್ನೇ ಕೈಬಿಟ್ಟಿರುವುದು ಇದಕ್ಕೆ ಸಾಕ್ಷಿ ಎನ್ನಲಾಗಿದೆ. ಆರೋಪಿ ಮತ್ತು ಕುಟುಂಬದ ನಡುವಿನ ಆತ್ಮೀಯತೆ ಪೊಲೀಸರ ಈ ನಡೆಗೆ ಕಾರಣ ಎಂದು ಹೇಳಲಾಗುತ್ತಿದೆ.ಜು.೨ರ ರಾತ್ರಿ ೮.೩೦ಕ್ಕೆ ಆರೋಪಿಗಳನ್ನು ಠಾಣೆಗೆ ಕರೆತಂದ ಪೊಲೀಸರು ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲು ಒಂದು ದಿನ ತಡ ಮಾಡಿದ್ದು ಏಕೆ?. ಆರೋಪಿಗಳು ಫನ್‌ಗಾಗಿ ಫೈಯರ್ ಮಾಡಿದ್ದಾರೆ ಎಂದಾಕ್ಷಣ ಹೆಚ್ಚಿನ ತನಿಖೆ ಮಾಡಲಿಲ್ಲವೇಕೆ?. ಒಂದೆಡೆ ಎಫ್‌ಎಸ್‌ಎಲ್ ವರದಿ ಬರಬೇಕು ಎಂದು ಹೇಳುವ ಪೊಲೀಸರು ವರದಿ ಬರುವ ಮುನ್ನವೇ ಏರ್‌ಗನ್ ವಶ ಎಂದು ಘೋಷಿಸಿದ್ದು ಏಕೆ ಎಂಬೆಲ್ಲಾ ಪ್ರಶ್ನೆಗಳನ್ನು ಸಾರ್ವಜನಿಕರು ಮುಂದಿಟ್ಟಿದ್ದಾರೆ.
ಗೂಡ್ಸ್ ವಾಹನವನ್ನು ವಶಕ್ಕೆ ಪಡೆದು ತನಿಖೆಯನ್ನೇ ಮಾಡದೆ ವಾಹನದ ಮೇಲೆ ಗುಂಡಿನ ದಾಳಿಯೇ ನಡೆದಿಲ್ಲವೆಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದು, ಶೂಟೌಟ್‌ನ್ನು ಗಂಭೀರವಾಗಿ ಪರಿಗಣಿಸದೆ ಮಂಡ್ಯ ಪೊಲೀಸರು ಅದನ್ನು ಮುಚ್ಚಿಹಾಕುವುದಕ್ಕೆ ಹರಸಾಹಸ ನಡೆಸಿ ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.ಆರೋಪಿ ರೋಹನ್‌ಗೌಡ ಕುಟುಂಬದೊಂದಿಗೆ ಆತ್ಮೀಯತೆ
ಕನ್ನಡಪ್ರಭ ವಾರ್ತೆ ಮಂಡ್ಯ
ಶೂಟೌಟ್ ಪ್ರಕರಣದ ಪ್ರಮುಖ ಆರೋಪಿ ರೋಹನ್‌ಗೌಡ ಕುಟುಂಬದೊಂದಿಗೆ ಪೊಲೀಸ್ ಅಧಿಕಾರಿಯೊಬ್ಬರು ಆತ್ಮೀಯತೆ ಹೊಂದಿರುವುದಲ್ಲದೆ, ರೋಹನ್‌ಗೌಡ ಜತೆಯೂ ಉತ್ತಮ ಬಾಂಧವ್ಯವನ್ನಿಟ್ಟುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.ಇನ್‌ಸ್ಟಾಗ್ರಾಂನಲ್ಲಿ ಆರೋಪಿಯನ್ನು ಆ ಅಧಿಕಾರಿ ಫಾಲೋ ಕೂಡ ಮಾಡುತ್ತಿದ್ದಾರೆ. ಪೊಲೀಸ್ ಅಧಿಕಾರಿ ಮಂಡ್ಯಕ್ಕೆ ವರ್ಗಾವಣೆಯಾದ ವೇಳೆ ಬೃಹತ್ ಗಾತ್ರದ ಗುಲಾಬಿ ಹಾರ ಹಾಕಿ ರೋಹನ್‌ಗೌಡ ಅದ್ಧೂರಿಯಾಗಿ ಸ್ವಾಗತಿಸಿದ್ದನು. ತಮ್ಮದೇ ವೆಲ್‌ಫೈರ್ ಕಾರಿನ ಮೂಲಕ ಅವರನ್ನು ಕರೆತಂದಿದ್ದನು ಎಂದು ಹೇಳಲಾಗಿದೆ.
ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕರು ಜಾಲತಾಣದಲ್ಲಿ ಪೊಲೀಸರ ನಡೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಎಲ್ಲರೂ ಫನ್‌ಗಾಗಿಯೇ ಮಾಡುತ್ತಾರೆ. ಸಾಮಾನ್ಯರಿಗೊಂದು ನ್ಯಾಯ, ನಿಮ್ಮ ಆತ್ಮೀಯರಿಗೊಂದು ನ್ಯಾಯವೇ?. ಸಮರ್ಥನೆಗೆ ಒಂದು ಮಿತಿ ಬೇಡವೇ ಎಂದೆಲ್ಲಾ ಆಕ್ರೋಶ ವ್ಯಕ್ತಪಡಿಸುತ್ತಾ, ಶೂಟೌಟ್ ಪ್ರಕರಣದ ವಿರುದ್ಧ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.