ಮಣ್ಣು ಸುರಿಯುವ ವಿಚಾರವಾಗಿ ಗಲಾಟೆ; ಜೆಸಿಬಿ ಮಾಲಿಕನಿಗೆ ಪರಿಚಯಸ್ಥನಿಂದಲೇ ಚಾಕು ಇರಿತ

| Published : Mar 31 2024, 02:02 AM IST

ಮಣ್ಣು ಸುರಿಯುವ ವಿಚಾರವಾಗಿ ಗಲಾಟೆ; ಜೆಸಿಬಿ ಮಾಲಿಕನಿಗೆ ಪರಿಚಯಸ್ಥನಿಂದಲೇ ಚಾಕು ಇರಿತ
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆ ನಿರ್ಮಾಣಕ್ಕೆ ಮಣ್ಣು ಸುರಿಯುವ ವಿಚಾರವಾಗಿ ಗಲಾಟೆ ನಡೆದು ಜೆಸಿಬಿ ಮಾಲಿಕನಿಗೆ ಚಾಕುವಿನಿಂದ ಇರಿದು ಆತನ ಪರಿಚಯಸ್ಥರು ಕೊಲೆ ಮಾಡಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಸ್ತೆ ನಿರ್ಮಾಣಕ್ಕೆ ಮಣ್ಣು ಸುರಿಯುವ ವಿಚಾರವಾಗಿ ಗಲಾಟೆ ನಡೆದು ಜೆಸಿಬಿ ಮಾಲಿಕನಿಗೆ ಚಾಕುವಿನಿಂದ ಇರಿದು ಆತನ ಪರಿಚಯಸ್ಥರು ಕೊಲೆ ಮಾಡಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೆಮ್ಮಿಗೆಪುರದ ನಿವಾಸಿ ಎಚ್.ಎಸ್‌. ಲಿಂಗಮೂರ್ತಿ (38) ಕೊಲೆಯಾದ ದುರ್ದೈವಿ. ಹತ್ಯೆ ಸಂಬಂಧ ಮೃತನ ಸ್ನೇಹಿತ ಚಿರಂಜೀವಿನನ್ನು ಬಂಧಿಸಲಾಗಿದೆ. ಹೆಮ್ಮಿಗೆಪುರದ ಐರಾ ಶಾಲೆ ಬಳಿ ರಸ್ತೆ ನಿರ್ಮಾಣಕ್ಕೆ ಜೆಸಿಬಿಯಲ್ಲಿ ಶುಕ್ರವಾರ ರಾತ್ರಿ ಲಿಂಗಮೂರ್ತಿ ಮಣ್ಣು ಸುರಿಯುವಾಗ ಈ ಗಲಾಟೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಧೂಳಿಗೆ ನೀರು ಹಾಕಲ್ಲ ಎಂದಿದ್ದಕ್ಕೆ ಚಾಕು:

ಲಿಂಗಮೂರ್ತಿ ಎರಡು ಜೆಸಿಬಿಗಳನ್ನು ಹೊಂದಿದ್ದು, ರಸ್ತೆ ನಿರ್ಮಾಣ ಹೀಗೆ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರು. ಹೆಮ್ಮಿಗೆಪುರದ ಐರಾ ಶಾಲೆ ಬಳಿ ರಸ್ತೆ ನಿರ್ಮಾಣಕ್ಕೆ ಮಣ್ಣು ಸುರಿದು ಸಮತಟ್ಟು ಮಾಡುವ ಕೆಲಸದಲ್ಲಿ ಶುಕ್ರವಾರ ರಾತ್ರಿ ಅವರು ನಿರತರಾಗಿದ್ದರು. ಆಗ ಅಲ್ಲಿಗೆ ಬಂದ ಚಿರಂಜೀವಿ, ಮಣ್ಣು ಸುರಿಯುವುದರಿಂದ ಧೂಳು ಎದ್ದು ತೊಂದರೆಯಾಗುತ್ತಿದೆ. ಹೀಗಾಗಿ ಮಣ್ಣು ಸುರಿಯುವ ಮುನ್ನ ನೀರು ಹಾಕುವಂತೆ ಹೇಳಿದ್ದ. ಇದಕ್ಕೆ ಲಿಂಗಮೂರ್ತಿ ಆಕ್ಷೇಪಿಸಿದ್ದರು. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇದರಿಂದ ಕೆರಳಿದ ಆರೋಪಿ, ಲಿಂಗಮೂರ್ತಿರವರ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.