2027ರಲ್ಲಿ ಜನಗಣತಿ ನಡೆಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, 11,718 ಕೋಟಿ ರು. ಅನುದಾನಕ್ಕೆ ಅನುಮೋದನೆ ನೀಡಿದೆ. ವಿಶೇಷವೆಂದರೆ ಈ ಸಲ ಜನಗಣತಿ ಜತೆ ಜಾತಿಗಣತಿ ಕೂಡ ನಡೆಯಲಿದೆ.
ನವದೆಹಲಿ : 2027ರಲ್ಲಿ ಜನಗಣತಿ ನಡೆಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, 11,718 ಕೋಟಿ ರು. ಅನುದಾನಕ್ಕೆ ಅನುಮೋದನೆ ನೀಡಿದೆ. ವಿಶೇಷವೆಂದರೆ ಈ ಸಲ ಜನಗಣತಿ ಜತೆ ಜಾತಿಗಣತಿ ಕೂಡ ನಡೆಯಲಿದೆ.
‘ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಜನಗಣತಿ ಪ್ರಸ್ತಾವನೆಗೆ ಅನುಮೋದನೆ ನೀಡಲಾಯಿತು. ಇದು ಮೊದಲ ಡಿಜಿಟಲ್ ಗಣತಿಯಾಗಲಿದೆ’ ಎಂದು ಮಾಹಿತಿ ಮತ್ತು ಪ್ರಸಾರ ಸಚಿವೆ ಅಶ್ವಿನಿ ವೈಷ್ಣವ್ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2021ರಲ್ಲೇ ಗಣತಿ ನಡೆಯಬೇಕಿತ್ತಾದರೂ ಕೋವಿಡ್ ಕಾರಣ ಪದೇ ಪದೇ ಮುಂದೂಡಿಕೆ ಆಗಿತ್ತು.
2 ಹಂತ:
ಜನಗಣತಿಯನ್ನು 2 ಹಂತಗಳಲ್ಲಿ ನಡೆಸಲಾಗುವುದು. ಮನೆ ಪಟ್ಟಿ ಮತ್ತು ವಸತಿ ಗಣತಿ ಏಪ್ರಿಲ್ 2026ರಿಂದ ಸೆಪ್ಟೆಂಬರ್ 2027 ರವರೆಗೆ ನಡೆಯಲಿದೆ. ಬಳಿಕ ಜನಸಂಖ್ಯಾ ಎಣಿಕೆ (ಪಿಎ) ಫೆಬ್ರವರಿ 2027ರಲ್ಲಿ ನಡೆಯಲಿದೆ. ಜನಸಂಖ್ಯೆ ಎಣಿಕೆ ಜತೆಗೆ ಜಾತಿ ಗಣತಿ ಕೂಡ ನಡೆಯಲಿದೆ.
‘ಲಡಾಖ್ ಮತ್ತು ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಮತ್ತು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಹಿಮಚ್ಛಾದಿತ ಪ್ರದೇಶಗಳಿಗೆ, ಜನಸಂಖ್ಯೆ ಎಣಿಕೆ ಪ್ರಕ್ರಿಯೆಯನ್ನು 2027ರ ಬದಲು ಸೆಪ್ಟೆಂಬರ್ 2026ರಲ್ಲಿ ನಡೆಸಲಾಗುವುದು. ಒಟ್ಟಾರೆ ಜನಗಣತಿಯು ಜನಸಂಖ್ಯಾ ಎಣಿಕೆ ಹಂತದಲ್ಲಿ ಜಾತಿ ಡೇಟಾವನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸೆರೆಹಿಡಿಯುತ್ತದೆ’ ಎಂದು ವೈಷ್ಣವ್ ಹೇಳಿದರು.
30 ಲಕ್ಷ ಜನಗಣತಿ ಸಿಬ್ಬಂದಿ
‘ರಾಷ್ಟ್ರೀಯ ಮಹತ್ವದ ಈ ಬೃಹತ್ ಕಾರ್ಯವನ್ನು ಸುಮಾರು 30 ಲಕ್ಷ ಜನಗಣತಿ ಸಿಬ್ಬಂದಿ ಪೂರ್ಣಗೊಳಿಸಲಿದ್ದಾರೆ. ದತ್ತಾಂಶ ಸಂಗ್ರಹಣೆಗಾಗಿ ಮೊಬೈಲ್ ಆ್ಯಪ್ ಮತ್ತು ಮೇಲ್ವಿಚಾರಣಾ ಉದ್ದೇಶಗಳಿಗಾಗಿ ಕೇಂದ್ರೀಯ ಪೋರ್ಟಲ್ ಅನ್ನು ಬಳಸಲಾಗುತ್ತದೆ. ಇದು ಉತ್ತಮ ಗುಣಮಟ್ಟದ ದತ್ತಾಂಶವನ್ನು ಖಚಿತಪಡಿಸುತ್ತದೆ. ಎಲ್ಲ ಅಂಶಗಳು ಒಂದು ಬಟನ್ ಕ್ಲಿಕ್ ಮೂಲಕ ಲಭ್ಯವಾಗುತ್ತವೆ. ಹೀಗಾಗಿ ಇದು ಬಳಕೆದಾರ ಸ್ನೇಹಿ ರೀತಿಯಲ್ಲಿ ಇರುತ್ತದೆ’ ಎಂದು ಅವರು ಹೇಳಿದರು.
ಇದಲ್ಲದೆ, ‘ಗಣತಿ ಸಿಬ್ಬಂದಿ ಮನೆಗೆ ಬಂದಾಗ ಭೇಟಿ ಸಾಧ್ಯವಾಗದೇ ಇದ್ದರೆ, ಸ್ವಯಂ ಆಗಿ ಕೂಡ ಆನ್‌ಲೈನ್‌ನಲ್ಲಿ ಜನತೆ ತಮ್ಮ ವಿವರ ದಾಖಲಿಸಬಹುದು. ಈ ಮೂಲಕ ಮೊದಲ ಬಾರಿ ಸ್ವಯಂ ಗಣತಿಗೂ ಅವಕಾಶ ನೀಡಲಾಗುತ್ತದೆ’ ಎಂದರು.
- ದೇಶದಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ನಡೆಯುತ್ತದೆ ಜನಗಣತಿ. 2021ರಲ್ಲಿ ನಡೆಯಬೇಕಿತ್ತು
- ಕೋವಿಡ್ ಕಾರಣ ಆಗ ನಡೆದಿರಲಿಲ್ಲ. ಬಳಿಕ ಜನಗಣತಿ ನಡೆಸುವ ಬಗ್ಗೆ ಚರ್ಚೆ ಆಗಿದ್ದವು
- ಈಗ 2026ರ ಏಪ್ರಿಲ್‌ನಿಂದ 2027ರ ಸೆಪ್ಟೆಂಬರ್‌ವರೆಗೆ ಜನಗಣತಿ ನಡೆಸಲು ನಿರ್ಧಾರ
- ಸಚಿವ ಸಂಪುಟ ಸಭೆ ಒಪ್ಪಿಗೆ.
- ಗಣತಿ ಕಾರ್ಯಕ್ಕೆ 30 ಲಕ್ಷ ಮಂದಿ ನಿಯೋಜನೆ: ಸರ್ಕಾರ
- ಗಣತಿ ಸಿಬ್ಬಂದಿ ಬಂದಾಗ ಮನೆಯಲ್ಲಿರದಿದ್ದರೆ ಆನ್‌ಲೈನ್ ಮೂಲಕವೂ ವಿವರ ನೀಡಬಹುದು