ಸಾರಾಂಶ
ನವದೆಹಲಿ : ಅದಾನಿ ಹಗರಣ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಬಿಕ್ಕಟ್ಟಿಗೆ ಒಳಗಾಗಿದ್ದ ಸಂಸತ್ತಿನ ಚಳಿಗಾಲದ ಅಧಿವೇಶನದ ಕಲಾಪಗಳು ಮಂಗಳವಾರದಿಂದ ಸುಗಮವಾಗಿ ಆರಂಭವಾಗುವ ನಿರೀಕ್ಷೆ ಇದೆ. ಸಭಾಧ್ಯಕ್ಷರೊಂದಿಗಿನ ಸರ್ವಪಕ್ಷ ಸಭೆಯ ಬಳಿಕ ಈ ಮಹತ್ವದ ಬೆಳವಣಿಗೆ ನಡೆದಿದೆ.
‘ಡಿ.13 ಮತ್ತು 14ರಂದು ಲೋಕಸಭೆಯಲ್ಲಿ ಮತ್ತು 16 ಮತ್ತು 17ರಂದು ರಾಜ್ಯಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಗೆ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷಗಳು ಒಪ್ಪಿಕೊಂಡಿವೆ. ಸಂವಿಧಾನ ಸ್ವೀಕರಿಸಿ 75 ವರ್ಷ ಆದ ನಿಮಿತ್ತ ಈ ಚರ್ಚೆಗೆ ಸಮ್ಮತಿ ಸೂಚಿಸಲಾಗಿದೆ. ಇದೇ ವೇಳೆ, ಮಂಗಳವಾರದಿಂದ ಸಾಮಾನ್ಯ ಕಲಾಪಗಳು ಕೂಡ ಸುಗಮವಾಗಿ ಆರಂಭವಾಗುವ ನಿರೀಕ್ಷೆ ಇದೆ’ ಎಂದು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
‘ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದು ಒಳ್ಳೆಯದಲ್ಲ. ನಾಳೆಯಿಂದ ಸಂಸತ್ತಿನ ಕಾರ್ಯಚಟುವಟಿಕೆಗಳು ಸುಗಮವಾಗಿ ನಡೆಯುವುದನ್ನು ನಾವೆಲ್ಲರೂ ಖಚಿತಪಡಿಸಿಕೊಳ್ಳುತ್ತೇವೆ. ವಿಪಕ್ಷಗಳೂ ಸಹಕರಿಸಬೇಕು’ ಎಂದು ರಿಜಿಜು ಹೇಳಿದರು.ಈ ನಡುವೆ, ‘ಅದಾನಿ ವಿಷಯವನ್ನು ಪ್ರತ್ಯೇಕವಾಗಿ ಚರ್ಚಿಸುವ ಬದಲು, ಅನ್ಯ ಚರ್ಚೆಗಳ ವೇಳೆ ಪ್ರಸ್ತಾಪಿಸಲು ಕಾಂಗ್ರೆಸ್ ಒಪ್ಪಿಕೊಂಡಿದೆ. ಇನ್ನು ಸಂಭಲ್ ಕೋಮುಗಲಭೆ ವಿಷಯದ ಬಗ್ಗೆ ಚರ್ಚಿಸಲು ಸಮಾಜವಾದಿ ಪಕ್ಷಕ್ಕೆ ಹಾಗೂ ಬಾಂಗ್ಲಾದೇಶ ಅಶಾಂತಿ ಬಗ್ಗೆ ಚರ್ಚಿಸಲು ತೃಣಮೂಲ ಕಾಂಗ್ರೆಸ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ. ಆದರೆ ಈ ಬಗ್ಗೆ ನೇರವಾಗಿ ಉತ್ತರಿಸದ ರಿಜಿಜು, ‘ಸಂಸದೀಯ ನಿಯಮಾವಳಿ ಪ್ರಕಾರ ಸರ್ಕಾರ ನಡೆದುಕೊಳ್ಳಲಿದೆ’ ಎಂದರು.
ಸಂಸತ್ತಿನ ಚಳಿಗಾಲದ ಅಧಿವೇಶನ ನ.25ರಂದು ಪ್ರಾರಂಭವಾಗಿತ್ತು. ಅಂದಿನಿಂದ ಕಲಾಪ ಸುಗಮವಾಗಿ ನಡೆದಿಲ್ಲ. ಡಿ. 20ರವರೆಗೆ ಅಧಿವೇಶನ ನಡೆಯಲಿದೆ.
ಇಂಡಿಯಾ ಕೂಟದಲ್ಲಿ ಒಡಕು: ಖರ್ಗೆ ಕರೆದ ಸಭೆಗೆ ಟಿಎಂಸಿ ಗೈರು
ನವದೆಹಲಿ: ಸಂಸತ್ತಿನಲ್ಲಿ ಉದ್ಯಮಿ ಗೌತಮ್ ಅದಾನಿ ಸೌರ ವಿದ್ಯುತ್ ಹಗರಣದ ಬಗ್ಗೆ ಚರ್ಚಿಸಲು ಏರ್ಪಡಿಸಲಾಗಿದ್ದ ಇಂಡಿಯಾ ಕೂಟದ ಸಭೆಗೆ ತೃಣಮೂಲ ಕಾಂಗ್ರೆಸ್ ಗೈರು ಹಾಜರಾಗಿದೆ. ಇದರಿಂದ ಇಂಡಿಯಾ ಕೂಟದಲ್ಲಿ ಒಡಕು ಮತ್ತೊಮ್ಮೆ ಬಯಲಿಗೆ ಬಂದಿದೆ.ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಸಭೆ ಕರೆದಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಎಂಸಿ ಸಂಸದರು, ‘ಕಾಂಗ್ರೆಸ್ ಕೇವಲ ಅದಾನಿ ವಿಷಯದಲ್ಲಿ ಆಸಕ್ತಿ ಹೊಂದಿದೆ. ಆದರೆ ಬೆಲೆ ಏರಿಕೆ, ನಿರುದ್ಯೋಗ, ಮಣಿಪುರದ ಅಶಾಂತಿ ಸೇರಿದಂತೆ 6 ಪ್ರಮುಖ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಬಯಸಿದ್ದೇವೆ. ಹೀಗಾಗಿ ಸಭೆಗೆ ಹೋಗಲಿಲ್ಲ’ ಎಂದಿದ್ದಾರೆ.
ಸಿಗರೆಟ್, ತಂಪುಪಾನೀಯದ ಮೇಲಿನ ಜಿಎಸ್ಟಿ ಶೇ.35ಕ್ಕೆ ಹೆಚ್ಚಳ ಸಂಭವ
ನವದೆಹಲಿ: ಜಿಎಸ್‌ಟಿ ದರ ನಿಗದಿಪಡಿಸುವ ಕುರಿತಾದ ಸಚಿವರ ಸಮೂಹವು ತಂಪು ಪಾನೀಯಗಳು, ಸಿಗರೆಟ್, ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಈಗಿನ ಶೇ.28 ರಿಂದ ಶೇಕಡಾ ಶೇ.35ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರ ಅಂತಿಮ ನಿರ್ಧಾರ ಡಿ.21ರ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಆಗಲಿದೆ.
;Resize=(128,128))
;Resize=(128,128))
;Resize=(128,128))
;Resize=(128,128))