ಇಂದು ಭಾರತ vs ದ.ಆಫ್ರಿಕಾ ಐತಿಹಾಸಿಕ ಫೈನಲ್‌

| N/A | Published : Nov 02 2025, 03:00 AM IST / Updated: Nov 02 2025, 04:17 AM IST

Team India historic world cup

ಸಾರಾಂಶ

ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಭಾನುವಾರ ಹೊಸ ಚಾಂಪಿಯನ್‌ನ ಉದಯವಾಗಲಿದೆ. ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಟೂರ್ನಿಯಲ್ಲಿ ಹಲವು ಏಳು-ಬೀಳುಗಳನ್ನು ಕಂಡ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಚೊಚ್ಚಲ ವಿಶ್ವಕಪ್‌ ಗೆಲ್ಲುವ ಹೊಸ್ತಿಲಲ್ಲಿ 

  ನವಿ ಮುಂಬೈ: ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಭಾನುವಾರ ಹೊಸ ಚಾಂಪಿಯನ್‌ನ ಉದಯವಾಗಲಿದೆ. ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಟೂರ್ನಿಯಲ್ಲಿ ಹಲವು ಏಳು-ಬೀಳುಗಳನ್ನು ಕಂಡ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಚೊಚ್ಚಲ ವಿಶ್ವಕಪ್‌ ಗೆಲ್ಲುವ ಹೊಸ್ತಿಲಲ್ಲಿದ್ದು, ದಶಕಗಳ ನೋವು, ನಿರಾಸೆಗಳನ್ನು ಮರೆಯಲು ಕಾತರಿಸುತ್ತಿವೆ.

ಈ ಟೂರ್ನಿಯನ್ನಷ್ಟೇ ಮುಂದಿಟ್ಟು ಹೇಳುವುದಾದರೆ, ಭಾರತ ಹಾಗೂ ದಕ್ಷಿಣ ಆಫ್ರಿಕಾ ಎರಡೂ ಹಲವು ಸಲ ಮುಖಭಂಗಕ್ಕೊಳಗಾದವು. ಭಾರತ, ರೌಂಡ್‌ ರಾಬಿನ್‌ ಹಂತದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್‌ ವಿರುದ್ಧ ಸೇರಿ ಸತತ 3 ಪಂದ್ಯಗಳಲ್ಲಿ ಸೋಲು ಅನುಭವಿಸಿತು. ತಂಡದ ಸಂಯೋಜನೆ ಬಗ್ಗೆ ಭಾರೀ ಟೀಕೆ ಎದುರಿಸಿತು. ಬ್ಯಾಟಿಂಗ್ ವಿಭಾಗದ ಕುಸಿತ, ಬೌಲಿಂಗ್‌ ವೈಫಲ್ಯ, ಕಳಪೆ ಫೀಲ್ಡಿಂಗ್‌ ಎಲ್ಲವೂ ಚರ್ಚೆಗೆ ದಾರಿ ಮಾಡಿಕೊಟ್ಟವು.

ಇನ್ನು, ದ.ಆಫ್ರಿಕಾ ಮೊದಲ ಪಂದ್ಯದಲ್ಲೇ ಇಂಗ್ಲೆಂಡ್‌ ವಿರುದ್ಧ 69ಕ್ಕೆ ಆಲೌಟ್‌ ಆಯಿತು. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧ 97ಕ್ಕೆ ಕುಸಿಯಿತು. ಆದರೀಗ ಟೂರ್ನಿಯಲ್ಲಿ 7 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾ, 4 ಬಾರಿಯ ಚಾಂಪಿಯನ್‌ ಇಂಗ್ಲೆಂಡ್‌ ಉಳಿದುಕೊಂಡಿಲ್ಲ. ಇದೇ ಮೊದಲ ಬಾರಿಗೆ ಮಹಿಳಾ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್‌ ತಂಡವಿಲ್ಲ.

ಆರಂಭದಲ್ಲಿ ತನಗೆ ಅಡ್ಡಿಯಾದ ಇಂಗ್ಲೆಂಡನ್ನು ಸೆಮೀಸ್‌ನಲ್ಲಿ ದ.ಆಫ್ರಿಕಾ ಹೊಸಕಿ ಹಾಕಿದರೆ, ಆಸ್ಟ್ರೇಲಿಯಾ ವಿರುದ್ಧ ದಾಖಲೆ ರನ್‌ ಚೇಸ್‌ ಮಾಡಿ ಭಾರತ ಫೈನಲ್‌ಗೇರಿದೆ. ಈ ಪಂದ್ಯ ಎರಡೂ ದೇಶಗಳಲ್ಲಿ ಮಹಿಳಾ ಕ್ರಿಕೆಟ್‌ನ ದಿಕ್ಕನ್ನೇ ಬದಲಿಸುವ ಪಂದ್ಯವಾಗಬಹುದು.

ತಂಡದಲ್ಲಿಲ್ಲ ಬದಲಾವಣೆ?: ಭಾರತ ಕೊನೆಗೂ ತನ್ನ ತಂಡ ಸಂಯೋಜನೆಯಲ್ಲಿ ಪರಿಪೂರ್ಣತೆ ಕಂಡುಕೊಂಡಂತೆ ಕಾಣುತ್ತಿದೆ. 8ನೇ ಕ್ರಮಾಂಕದ ವರೆಗೂ ಬ್ಯಾಟರ್‌ಗಳಿದ್ದಾರೆ. 6 ಬೌಲಿಂಗ್‌ ಆಯ್ಕೆಗಳಿವೆ. ಸೆಮಿಫೈನಲ್‌ನಲ್ಲಿ ಆಡಿಸಿದ ತಂಡವನ್ನೇ ಫೈನಲ್‌ನಲ್ಲೂ ಮುಂದುವರಿಸುವ ಸಾಧ್ಯತೆ ಹೆಚ್ಚು. ಒಂದು ವೇಳೆ ಬದಲಾವಣೆ ಮಾಡಿದರೆ, ಎಡಗೈ ಸ್ಪಿನ್ನರ್‌ ರಾಧಾ ಯಾದವ್‌ ಬದಲು ಆಲ್ರೌಂಡರ್‌ ಸ್ನೇಹ್‌ ರಾಣಾ ಆಡಬಹುದು. ಆದರೆ, ದ.ಆಫ್ರಿಕಾದ ಬ್ಯಾಟಿಂಗ್‌ ವಿಭಾಗ ಸಂಪೂರ್ಣವಾಗಿ ಬಲಗೈ ಬ್ಯಾಟರ್‌ಗಳಿಂದ ಕೂಡಿರುವ ಕಾರಣ, ಸ್ನೇಹ್‌ರನ್ನು ಆಡಿಸುವ ಸಾಧ್ಯತೆ ಕಡಿಮೆ.

ಇನ್ನು, ದ.ಆಫ್ರಿಕಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯಬಹುದು. ಅನ್ನೆಕ್‌ ಬಾಷ್‌ ಅಥವಾ ಅ್ಯನೆರಿ ಡೆರ್ಕ್‌ಸೆನ್‌ ಬದಲು ಬೌಲರ್‌ ಮಸಬಾಟ ಕ್ಲಾಸ್‌ರನ್ನು ಆಡಿಸಬಹುದು.ಸಂಭವನೀಯ ಆಟಗಾರ್ತಿಯರ ಪಟ್ಟಿ

ಭಾರತ: ಸ್ಮೃತಿ ಮಂಧನಾ, ಶಫಾಲಿ, ಜೆಮಿಮಾ, ಹರ್ಮನ್‌ಪ್ರೀತ್‌ (ನಾಯಕಿ), ದೀಪ್ತಿ ಶರ್ಮಾ, ರಿಚಾ ಘೋಷ್, ಅಮನ್‌ಜೋತ್‌, ರಾಧಾ/ಸ್ನೇಹ್‌ ರಾಣಾ, ಕ್ರಾಂತಿ ಗೌಡ್‌, ಶ್ರೀ ಚರಣಿ, ರೇಣುಕಾ ಸಿಂಗ್‌. ದ.ಆಫ್ರಿಕಾ: ವೂಲ್ವಾರ್ಟ್‌(ನಾಯಕಿ), ತಜ್ಮಿನ್‌ ಬ್ರಿಟ್ಸ್‌, ಬಾಷ್‌/ಕ್ಲಾಸ್‌, ಸುನೆ ಲುಸ್, ಮಾರಿಝಾನ್‌ ಕಾಪ್‌, ಸಿನಾಲಿ ಜಾಫ್ಟಾ, ಡೆರ್ಕ್‌ಸೆನ್‌, ಕ್ಲೊಯಿ ಟ್ರಯೊನ್‌, ನದಿನ್‌ ಡೆ ಕ್ಲೆಕ್‌, ಅಯಬೊಂಗಾ ಖಾಕ, ಎಂಲಾಬಾ.

ಪಂದ್ಯ ಆರಂಭ: 

ಮಧ್ಯಾಹ್ನ 3ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌/ಜಿಯೋ ಹಾಟ್‌ ಸ್ಟಾರ್‌ ಪಿಚ್‌ ರಿಪೋರ್ಟ್‌

ನವಿ ಮುಂಬೈನ ಪಿಚ್‌ ಸಾಮಾನ್ಯವಾಗಿ ಬ್ಯಾಟರ್‌ ಸ್ನೇಹಿಯಾಗಿರಲಿದೆ. ಸೆಮಿಫೈನಲ್‌ ಪಂದ್ಯದಂತೆ ಈ ಪಂದ್ಯವೂ ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗಬಹುದು. ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಸಂಜೆ 5 ಗಂಟೆ ಬಳಿಕ ಮಳೆ ಮುನ್ಸೂಚನೆ ಇದೆ. ==

ಮಳೆ ಬಂದರೆ ಏನಾಗುತ್ತೆ?

ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯಾಗಿ, ಭಾನುವಾರ ಪಂದ್ಯ ಮುಕ್ತಾಯಗೊಳಿಸಲು ಸಾಧ್ಯವಾಗದೆ ಇದ್ದರೆ ಪಂದ್ಯ ಮೀಸಲು ದಿನಕ್ಕೆ ಕಾಲಿಡಲಿದೆ. ಭಾನುವಾರ ಪಂದ್ಯ ಎಲ್ಲಿ ಸ್ಥಗಿತಗೊಂಡಿರುತ್ತದೆಯೋ, ಸೋಮವಾರ ಅಲ್ಲಿಂದಲೇ ಮುಂದುವರಿಯಲಿದೆ. ಒಂದು ವೇಳೆ ಮೀಸಲು ದಿನದಂದೂ ಪಂದ್ಯ ಮುಗಿಸಲು ಸಾಧ್ಯವಾಗದೆ ಇದ್ದರೆ, ಆಗ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.

 ಭಾರತಕ್ಕೆ 3ನೇ, ದ.ಆಫ್ರಿಕಾಕ್ಕೆಮೊದಲ ವಿಶ್ವಕಪ್‌ ಫೈನಲ್‌!

ಭಾರತ ತಂಡ 3ನೇ ಬಾರಿಗೆ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಆಡಲಿದೆ. ತಂಡ ಈ ಹಿಂದೆ 2005, 2017ರ ವಿಶ್ವಕಪ್‌ ಫೈನಲ್‌ಗಳಲ್ಲಿ ಸೋತಿತ್ತು. ಇನ್ನು 2020ರ ಟಿ20 ವಿಶ್ವಕಪ್‌ ಫೈನಲ್‌ನಲ್ಲೂ ಮುಗ್ಗರಿಸಿತ್ತು. ಮತ್ತೊಂದೆಡೆ ದ.ಆಫ್ರಿಕಾ ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ ಫೈನಲ್‌ಗೇರಿದೆ. ಆದರೆ ತಂಡ ಕಳೆದೆರಡು ಆವೃತ್ತಿಗಳ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಸೋತು ರನ್ನರ್-ಅಪ್‌ ಆಗಿತ್ತು. ಹೀಗಾಗಿ, ಎರಡೂ ತಂಡಗಳು ಯಾವುದೇ ಮಾದರಿಯಲ್ಲಿ ಚೊಚ್ಚಲ ವಿಶ್ವಕಪ್‌ ಗೆಲ್ಲುವ ತವಕದಲ್ಲಿವೆ.

ಗೆಲ್ಲುವ ತಂಡಕ್ಕೆ ₹40 ಕೋಟಿ,

ರನ್ನರ್‌-ಅಪ್‌ಗೆ ₹20 ಕೋಟಿ!

ಅಂ.ರಾ. ಕ್ರಿಕೆಟ್‌ ಸಮಿತಿ (ಐಸಿಸಿ) ಈ ವರ್ಷ ಮಹಿಳಾ ವಿಶ್ವಕಪ್‌ನ ಬಹುಮಾನ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಭಾನುವಾರ ಗೆಲ್ಲುವ ತಂಡಕ್ಕೆ 4.48 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು 39.77 ಕೋಟಿ ರು.), ರನ್ನರ್‌-ಅಪ್‌ ತಂಡಕ್ಕೆ 2.24 ಮಿಲಿಯನ್‌ ಯುಎಸ್‌ಡಿ (ಅಂದಾಜು 19.88 ಕೋಟಿ ರು.) ಬಹುಮಾನ ಮೊತ್ತ ಸಿಗಲಿದೆ. ವಿಶ್ವಕಪ್‌ ಇತಿಹಾಸದಲ್ಲೇ (ಪುರುಷ, ಮಹಿಳಾ) ಇದು ಗರಿಷ್ಠ ಬಹುಮಾನ ಮೊತ್ತ ಎನಿಸಿದೆ.

ಭಾರತ ಗೆದ್ದರೆ ಬಿಸಿಸಿಐನಿಂದ

₹125 ಕೋಟಿ ಬಹುಮಾನ?

2024ರಲ್ಲಿ ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಬರೋಬ್ಬರಿ 125 ಕೋಟಿ ರು. ಬಹುಮಾನ ನೀಡಿತ್ತು. ವೇತನ ಸಮಾನತೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿರುವ ಬಿಸಿಸಿಐ, ಮಹಿಳಾ ತಂಡ ಏಕದಿನ ವಿಶ್ವಕಪ್‌ ಗೆದ್ದರೆ ಪುರುಷರ ತಂಡಕ್ಕೆ ನೀಡಿದಂತೆ 125 ಕೋಟಿ ರು. ಬಹುಮಾನ ನೀಡಲು ನಿರ್ಧರಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಪಂದ್ಯದ ಟಿಕೆಟ್‌ಗಾಗಿ ಭಾರೀ

ಬೇಡಿಕೆ: ಕಾಳಸಂತೆಯಲ್ಲಿ

₹1.3 ಲಕ್ಷ ವರೆಗೂ ಮಾರಾಟ!

ಫೈನಲ್‌ ಪಂದ್ಯದ ಟಿಕೆಟ್‌ಗಳನ್ನು ಐಸಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅವು ಸೋಲ್ಡ್‌ಔಟ್‌ ಆಗಿವೆ. ಈಗ ಥರ್ಡ್‌ ಪಾರ್ಟಿ (ಅನಧಿಕೃತ) ವೆಬ್‌ಸೈಟ್‌ಗಳು ಪಂದ್ಯದ ಟಿಕೆಟ್‌ಗಳನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿವೆ. ವರದಿಯೊಂದರ ಪ್ರಕಾರ, ವೆಬ್‌ಸೈಟ್‌ವೊಂದು ಟಿಕೆಟ್‌ಗಳ ದರವನ್ನು ₹6500ರಿಂದ ₹136000 ವರೆಗೂ ನಿಗದಿ ಮಾಡಿದೆ ಎನ್ನಲಾಗಿದೆ.

ಟಿಕೆಟ್‌ಗಾಗಿ ಭಾರೀ ಬೇಡಿಕೆಯಿದ್ದು, ಶನಿವಾರವೂ ಡಿ.ವೈ.ಪಾಟೀಲ್‌ ಕ್ರೀಡಾಂಗಣದ ಎದುರು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಟಿಕೆಟ್‌ ಖರೀದಿಸಲು ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನು, ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ಭಾರತದ ನಾಯಕಿ ಹರ್ಮನ್‌ಪ್ರೀತ್‌ ತಾವು ತಮ್ಮವರಿಗೆ ಟಿಕೆಟ್‌ಗಳನ್ನು ಹೊಂದಿಸಲು ಹರಸಾಹಸ ಮಾಡುತ್ತಿರುವುದಾಗಿ ಹೇಳಿದ್ದು, ಈ ಪಂದ್ಯ ಕ್ರಿಕೆಟ್‌ ಅಭಿಮಾನಿಗಳಲ್ಲಿ ಎಷ್ಟರ ಮಟ್ಟಿಗೆ ಆಸಕ್ತಿ ಮೂಡಿಸಿದೆ ಎನ್ನುವುದಕ್ಕೆ ಉದಾಹರಣೆ.

1 ವರ್ಷದಲ್ಲಿ ದ.ಆಫ್ರಿಕಾ

ವಿರುದ್ಧ 3ನೇ ಫೈನಲ್‌: ಈ

ಪಂದ್ಯದಲ್ಲೂ ಗೆಲ್ಲುತ್ತಾ ಭಾರತ?

ಕಳೆದೊಂದು ವರ್ಷದಲ್ಲಿ ಭಾರತ ಹಾಗೂ ದ.ಆಫ್ರಿಕಾ ನಡುವೆ ಐಸಿಸಿ ಟೂರ್ನಿಗಳಲ್ಲಿ ಇದು 3ನೇ ಫೈನಲ್‌. 2024ರ ಪುರುಷರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ದ.ಆಫ್ರಿಕಾವನ್ನು 7 ರನ್‌ಗಳಿಂದ ರೋಚಕವಾಗಿ ಸೋಲಿಸಿದ್ದ ಭಾರತ 2ನೇ ಬಾರಿಗೆ ವಿಶ್ವಕಪ್‌ ಎತ್ತಿಹಿಡಿದಿತ್ತು. ಇನ್ನು 2025ರಲ್ಲಿ ನಡೆದ 2ನೇ ಆವೃತ್ತಿಯ ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 9 ವಿಕೆಟ್‌ ಗೆಲುವು ಸಾಧಿಸಿ, ಸತತ 2ನೇ ಟ್ರೋಫಿ ಗೆದ್ದಿತ್ತು. ಮಹಿಳಾ ಏಕದಿನ ವಿಶ್ವಕಪ್‌ ಫೈನಲ್‌ನಲ್ಲೂ ದ.ಆಫ್ರಿಕಾವನ್ನು ಭಾರತ ಸೋಲಿಸುತ್ತಾ ಎನ್ನುವ ಕುತೂಹಲ ಅಭಿಮಾನಿಗಳದ್ದು.

ಗೆಲುವಿನ ಖುಷಿ ಹೇಗಿರಲಿದೆಎಂದು ತಿಳಿಯಲು ಉತ್ಸುಕ!

‘ಸೋತಾಗ ಎಷ್ಟು ನೋವಾಗುತ್ತದೆ ಎನ್ನುವುದು ನಮಗೆ ಚೆನ್ನಾಗಿ ತಿಳಿದಿದೆ. ಆದರೆ ಗೆಲುವಿನ ಖುಷಿ ಹೇಗಿರಲಿದೆ ಎನ್ನುವುದನ್ನು ತಿಳಿಯಲು ನಾವೆಲ್ಲರೂ ಉತ್ಸುಕರಾಗಿದ್ದೇವೆ. ನಮ್ಮ ತಂಡದ ಪಾಲಿಗೆ ಇದು ವಿಶೇಷವಾದ ದಿನ. ನಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವ ನಂಬಿದೆ ಇದೆ.

- ಹರ್ಮನ್‌ಪ್ರೀತ್‌ ಕೌರ್‌, ಭಾರತ ತಂಡದ ನಾಯಕಿ

Read more Articles on