ಲೆಬನಾನ್‌ನ ಹಿಜ್ಬುಲ್ಲಾ ನಡುವಿನ ಸಂಘರ್ಷ ತೀವ್ರ - ಉಗ್ರರಿಂದ ಇಸ್ರೇಲ್‌ ಮೇಲೆ ಮತ್ತೆ 90 ರಾಕೆಟ್‌ ದಾಳಿ

| Published : Nov 11 2024, 11:48 PM IST / Updated: Nov 12 2024, 08:14 AM IST

ಸಾರಾಂಶ

ಇಸ್ರೇಲ್‌ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಉಗ್ರರು ಸೋಮವಾರ ಇಸ್ರೇಲ್‌ನ ಉತ್ತರ ಭಾಗದ ಮೇಲೆ 90 ರಾಕೆಟ್‌ ದಾಳಿ ನಡೆಸಿದೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಜೆರುಸಲೇಂ: ಇಸ್ರೇಲ್‌ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಉಗ್ರರು ಸೋಮವಾರ ಇಸ್ರೇಲ್‌ನ ಉತ್ತರ ಭಾಗದ ಮೇಲೆ 90 ರಾಕೆಟ್‌ ದಾಳಿ ನಡೆಸಿದೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ. ಇಸ್ರೇಲ್‌ನ ಉತ್ತರ ಭಾಗದ ಹೈಫಾ ನಗರ ಮತ್ತು ಇನ್ನಿತರ ಭಾಗಗಳನ್ನು ಗುರಿಯಾಗಿಸಿಕೊಂಡು ಎರಡು ಸುತ್ತಿನ ರಾಕೆಟ್‌ ದಾಳಿ ನಡೆಸಲಾಗಿದೆ. ಮೊದಲ ಸುತ್ತಿನಲ್ಲಿ 80 ರಾಕೆಟ್‌ ಹಾರಿಸಿದ್ದು, ಅವುಗಳಲ್ಲಿ ಬಹುತೇಕವನ್ನು ಏರ್‌ ಡಿಫೆನ್ಸ್‌ ಸಿಸ್ಟಂಗಳು ತಡೆದಿದೆ. ಮಿಕ್ಕಂತೆ ಕೆಲವು ಜನವಸತಿ ಮೇಲೆ ಬಿದ್ದಿವೆ. ಎರಡನೇ ಸುತ್ತಿನಲ್ಲಿ 10 ರಾಕೆಟ್‌ಗಳ ಪೈಕಿ ಕೆಲವುಗಳು ಖಾಲಿ ಜಾಗದಲ್ಲಿ ಸ್ಫೋಟಗೊಂಡಿವೆ. ಇನ್ನು ಕೆಲವನ್ನು ಏರ್‌ ಡಿಫೆನ್ಸ್‌ ಸಿಸ್ಟಂ ಹೊಡೆದುರುಳಿಸಿದೆ. ಇದರಿಂದಾಗಿ ನಾಲ್ವರು ಗಾಯಗೊಂಡಿದ್ದು, ಕಾರುಗಳು, ವಸತಿ ಜಖಂಗೊಂಡಿವೆ ಎಂದು ಸೇನೆ ಹೇಳಿದೆ.

‘ಉಳಗ ನಾಯಗನ್‌’ ಅಂತ ನನ್ನ ಕರೆಯಬೇಡಿ: ಕಮಲ್‌ಹಾಸನ್‌

ಚೆನ್ನೈ : ಸಿನಿಮಾ ಎಂಬುದು ಯಾವುದೇ ವ್ಯಕ್ತಿಗಿಂತಲೂ ದೊಡ್ಡದು. ನಾನಿನ್ನೂ ವಿದ್ಯಾರ್ಥಿ. ಹೀಗಾಗಿ ‘ಉಳಗ ನಾಯಗನ್‌’(ವಿಶ್ವ ನಾಯಕ) ಎಂಬ ಬಿರುದಿನಿಂದ ನನ್ನನ್ನು ಕರೆಯಬೇಡಿ ಎಂದು ಪ್ರಸಿದ್ಧ ಚಿತ್ರನಟ ಕಮಲ್‌ಹಾಸನ್‌ ಅವರು ಮನವಿ ಮಾಡಿದ್ದಾರೆ.ಬಿರುದುಗಳನ್ನು ನೀಡಿದಾಗ ನಾನು ಕೃತಜ್ಞನಾಗುತ್ತೇನೆ. ಆದರೆ ಕಲಾವಿದರನ್ನು ಕಲೆಗಿಂತ ಮೇಲೆ ಇಡಬಾರದು ಎಂಬುದು ನನ್ನ ವಿನಮ್ರ ಮನವಿ. ನಾನು ತಳಮಟ್ಟದಲ್ಲೇ ಇರಬೇಕು ಎಂದು ಬಯಸುತ್ತೇನೆ. ಹೀಗಾಗಿ ನನಗೆ ನೀಡಲಾದ ಬಿರುದುಗಳನ್ನು ಗೌರವಯುತವಾಗಿ ನಿರಾಕರಿಸುತ್ತೇನೆ. ಹೀಗಾಗಿ ನನ್ನನ್ನು ಸರಳವಾಗಿ ಕಮಲಹಾಸನ್‌ ಅಥವಾ ಕಮಲ್‌ ಅಥವಾ ಬೇರೆ ಹೆಸರಿನಿಂದ ಕರೆಯಿರಿ ಎಂದು ಹೇಳಿಕೆಯಲ್ಲಿ ಕೋರಿದ್ದಾರೆ.

ಉಳಗ ನಾಯಗನ್‌ ಮಾತ್ರವಲ್ಲದೆ ಕಲಾಜ್ಞಾನಿ, ಸಕಲಕಲಾವಲ್ಲಭ, ನಮ್ಮವರ್‌ ಎಂಬ ಬಿರುದುಗಳು ಕೂಡ ಕಮಲ್‌ಹಾಸನ್‌ ಅವರಿಗೆ ಇವೆ. ಆ ಪೈಕಿ ಉಳಗ ನಾಯಗನ್‌ ಜನಪ್ರಿಯವಾಗಿದೆ.

ಬೈಡೆನ್‌ ರಾಜೀನಾಮೆ ಕೊಟ್ಟು ಕಮಲಾರ ಅಧ್ಯಕ್ಷೆ ಮಾಡಲಿ: ಕಮಲಾ ಹ್ಯಾರಿಸ್‌ ಆಪ್ತ ಸಲಹೆ

ವಾಷಿಂಗ್ಟನ್: ‘ಜೋ ಬೈಡೆನ್ ಮುಂದಿನ 30 ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಮಲಾ ಹ್ಯಾರಿಸ್‌ರನ್ನು ಅಮೆರಿಕದ ಮುಂದಿನ ಅಧ್ಯಕ್ಷರನ್ನಾಗಿ ಮಾಡಲಿ’ ಎಂದು ಕಮಲಾ ಹ್ಯಾರಿಸ್‌ ಆಪ್ತ ಮತ್ತು ಮಾಜಿ ಸಂವಹನ ನಿರ್ದೇಶಕ ಜಮಲಾ ಸಿಮ್ರಾನ್‌ ಹೇಳಿದ್ದಾರೆ. ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿದ ಜಮಲಾ, ‘ಬೈಡೆನ್‌ ಅದ್ಭುತ ವ್ಯಕ್ತಿ. ಈ ಹಿಂದೆ ನೀಡಿದ ಹಲವು ಭರವಸೆ ಈಡೇರಿಸಿದ್ದಾರೆ. ಆದರೆ ಅವರು ಕೊನೆಯದಾಗಿ ನೀಡಿದ ಭರವಸೆ ಪೂರ್ತಿಗೊಳಿಸಬೇಕು ಅವರು ಮುಂದಿನ 30 ದಿನಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಮಲಾರನ್ನು ಅಧ್ಯಕ್ಷೆ ಮಾಡಬಹುದು. ಇದು ಬೈಡೆನ್‌ ಕೈಯಲ್ಲಿದೆ. ಈ ರೀತಿ ಮಾಡಿದರೆ ಅವರು ನೀಡಿದ ಕೊನೆಯ ಭರವಸೆ ಈಡೇರುತ್ತದೆ’ಎಂದಿದ್ದಾರೆ.

ಮದ್ಯದಂಗಡಿಗಳಲ್ಲಿ ಕಡ್ಡಾಯ ವಯಸ್ಸು ಪರಿಶೀಲನೆ ಜಾರಿ: ಕೇಂದ್ರಕ್ಕೆ ಸುಪ್ರೀಂ ನೋಟಿಸ್‌

ನವದೆಹಲಿ: ಮದ್ಯದಂಗಡಿಗಳಲ್ಲಿ ಕಡ್ಡಾಯವಾಗಿ ಗ್ರಾಹಕರ ವಯಸ್ಸನ್ನು ಪರಿಶೀಲಿಸುವುದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ಸಲ್ಲಿಸಲಾದ ಅರ್ಜಿಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ. ಸರ್ಕಾರೇತರ ಸಂಸ್ಥೆಯಾದ ಕಮ್ಯುನಿಟಿ ಅಗೆನ್ಸ್ಟ್‌ ಡ್ರಂಕನ್‌ ಡ್ರೈವಿಂಗ್‌ ಸಲ್ಲಿಸಿರುವ ಅರ್ಜಿಯಲ್ಲಿ, ‘ಹಲವು ರಾಜ್ಯಗಳಲ್ಲಿ ಮದ್ಯ ಸೇವನೆಗೆ ವಯಸ್ಸನ್ನು ನಿಗದಿಪಡಿಸಲಾಗಿದ್ದರೂ, ಮಾರಾಟದ ಸ್ಥಳಗಳಲ್ಲಿ ಗ್ರಾಹಕರ ವಯಸ್ಸನ್ನು ಪರಿಶೀಲಿಸುವ ವ್ಯವಸ್ಥೆಯಿಲ್ಲ. ಮನೆಬಾಗಿಲಿಗೆ ಮದ್ಯ ಸರಬರಾಜು ಮಾಡುವುದರಿಂದ ಕಡಿಮೆ ವಯಸ್ಸಿನವರಿಗೂ ಅದರ ಚಟ ತಗುಲುವ ಸಂಭವವಿದೆ’ ಎಂದು ಕಳವಳ ವ್ಯಕ್ತಪಡಿಸಲಾಗಿದೆ. ಜೊತೆಗೆ, ಅಪ್ರಾಪ್ತರಿಗೆ ಮದ್ಯ ಮಾರುವವರಿಗೆ 5 ಸಾವಿರ ರು. ದಂಡ, ಸೆರೆವಾಸ ಅಥವ ಎರಡೂ ಶಿಕ್ಷೆ ವಿಧಿಸುವಂತೆ ವಿನಂತಿಸಲಾಗಿದೆ.