ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ: ರೈತರಿಗೆ ಭರ್ಜರಿ ಪರಿಹಾರ

| Published : Sep 17 2025, 02:07 AM IST

ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ: ರೈತರಿಗೆ ಭರ್ಜರಿ ಪರಿಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗಾಗಿ ಸ್ವಾಧೀನಗೊಂಡ ಭೂಮಿಗೆ ಕೊನೆಗೂ ಪರಿಹಾರ ನಿಗದಿ ಮಾಡಿ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಮಾಡಿದ್ದು, ಮುಳುಗಡೆಯಾಗುವ 75,563 ಎಕರೆ ಪ್ರದೇಶದಲ್ಲಿ ಪ್ರತಿ ಎಕರೆ ನೀರಾವರಿ ಭೂಮಿಗೆ 40 ಲಕ್ಷ ರು. ಹಾಗೂ ಒಣ ಭೂಮಿಗೆ 30 ಲಕ್ಷ ರು. ಪರಿಹಾರ ನೀಡಲು ತೀರ್ಮಾನಿಸಲಾಗಿದೆ.
- ನೀರಾವರಿ ಜಮೀನಿಗೆ ಪ್ರತಿ ಎಕರೆಗೆ 40 ಲಕ್ಷ ರು., ಒಣ ಜಮೀನಿಗೆ 30 ಲಕ್ಷ ರು.

- ಕಾಲುವೆ ನಿರ್ಮಾಣಕ್ಕೆ ನೀರಾವರಿ ಭೂಮಿಗೆ 30 ಲಕ್ಷ, ಒಣ ಜಮೀನಿಗೆ ₹25 ಲಕ್ಷ

- 3 ವರ್ಷದಲ್ಲಿ ಪರಿಹಾರ ಹಂಚಿಕೆ: ಸಂಪುಟ ಅಸ್ತು । ಇದಕ್ಕೆ ಬೇಕು ₹70000 ಕೋಟಿ

===

ಸಂಪುಟ ಸಭೆ ಮುಖ್ಯಾಂಶ

- ಆಲಮಟ್ಟಿ ಜಲಾಶಯ 519ರಿಂದ 524 ಮೀ.ಗೆ ಎತ್ತರ ಹೆಚ್ಚಿಸಲಿರುವ ರಾಜ್ಯ ಸರ್ಕಾರ

- ಇದರಿಂದ ಜಮೀನು ಮುಳುಗಡೆ । ಒಂದೇ ಹಂತದಲ್ಲಿ 1,33,867 ಎಕ್ರೆ ಭೂಸ್ವಾಧೀನ

- ರೈತರ ಪುನರ್ವಸತಿ ಹಾಗೂ ಪುನರ್‌ ವ್ಯವಸ್ಥೆಗೆ 6469 ಎಕರೆ ಜಮೀನು ಅವಶ್ಯಕತೆ

- ಇದರಿಂದ ಸುಮಾರು 20 ಗ್ರಾಮಗಳು, ಕೆಲ ಪಟ್ಟಣ ವಾರ್ಡ್‌ಗಳು ಮುಳುಗಡೆ

- ಮರುವಸತಿಗೆ 6,469 ಎಕರೆ ಬೇಕು. ಪ್ರತಿ ಎಕರೆಗೆ ತಲಾ 30 ಲಕ್ಷ ರು. ಪರಿಹಾರ

- ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರೋಧಿಸಿ ಮಹಾರಾಷ್ಟ ಈಗಾಗಲೇ ಸುಪ್ರೀಂಗೆ

- ಈ ವಿಚಾರವಾಗಿ ಕರ್ನಾಟಕದಿಂದಲೂ ಪ್ರತ್ಯೇಕ ಹೋರಾಟ: ಸಂಪುಟ ಸಭೆ ನಿರ್ಣಯ

----

ಸಿದ್ದರಾಮಯ್ಯ ಕೋಟ್

ಇದು ಐತಿಹಾಸಿಕ ಹೆಜ್ಜೆ

ಹಿಂದಿನ ಬಿಜೆಪಿ ಸರ್ಕಾರ 20 ಲಕ್ಷ, 25 ಲಕ್ಷ ರು.ಗಳಷ್ಟು ಕಡಿಮೆ ಪರಿಹಾರ ನಿಗದಿ ಮಾಡಿತ್ತು. ಹೀಗಾಗಿ ರೈತರು ಒಪ್ಪಿರಲಿಲ್ಲ. ಕಾಂಗ್ರೆಸ್ ಎಂದೆಂದಿಗೂ ನುಡಿದಂತೆ ನಡೆಯುತ್ತದೆ. ಯುಕೆಪಿ ಹಂತ-3 ತ್ವರಿತ ಜಾರಿಗೆ ಆದ್ಯತೆ ನೀಡಿದೆ. ಈ ದಿಸೆಯಲ್ಲಿ ರಾಜ್ಯಕ್ಕೆ ಸಮೃದ್ಧಿ ತರಬಲ್ಲ ಐತಿಹಾಸಿಕ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

--

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗಾಗಿ ಸ್ವಾಧೀನಗೊಂಡ ಭೂಮಿಗೆ ಕೊನೆಗೂ ಪರಿಹಾರ ನಿಗದಿ ಮಾಡಿ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಮಾಡಿದ್ದು, ಮುಳುಗಡೆಯಾಗುವ 75,563 ಎಕರೆ ಪ್ರದೇಶದಲ್ಲಿ ಪ್ರತಿ ಎಕರೆ ನೀರಾವರಿ ಭೂಮಿಗೆ 40 ಲಕ್ಷ ರು. ಹಾಗೂ ಒಣ ಭೂಮಿಗೆ 30 ಲಕ್ಷ ರು. ಪರಿಹಾರ ನೀಡಲು ತೀರ್ಮಾನಿಸಲಾಗಿದೆ.

ಅದೇ ರೀತಿ ಕಾಲುವೆಗಳ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುತ್ತಿರುವ 51,837 ಎಕರೆಗೆ ಸಂಬಂಧಿಸಿ ನೀರಾವರಿ ಜಮೀನಿಗೆ ಎಕರೆಗೆ 30 ಲಕ್ಷ ರು, ಒಣ ಜಮೀನಿಗೆ 25 ಲಕ್ಷ ರು. ನಿಗದಿ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ತನ್ಮೂಲಕ ಒಂದೇ ಹಂತದಲ್ಲಿ 1,33,867 ಎಕರೆ ಭೂಸ್ವಾಧೀನಕ್ಕೆ ತೀರ್ಮಾನಿಸಲಾಗಿದೆ. ಇದಕ್ಕೆ 70,000 ಕೋಟಿಗೂ ಹೆಚ್ಚು ಪರಿಹಾರ ನೀಡಬೇಕಾಗಿದ್ದು, ಮುಂದಿನ ಮೂರು ಆರ್ಥಿಕ ವರ್ಷಗಳಲ್ಲಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ಕೃಷ್ಣ ಮೇಲ್ದಂಡೆ 3ನೇ ಹಂತದ ಯೋಜನೆ ಕುರಿತು ಮಂಗಳವಾರ ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಎಂದೆಂದಿಗೂ ನುಡಿದಂತೆ ನಡೆಯುತ್ತದೆ. ಯುಕೆಪಿ ಹಂತ-3 ಯೋಜನೆಯ ತ್ವರಿತ ಅನುಷ್ಠಾನಕ್ಕೆ ಸರ್ಕಾರದ ಆದ್ಯತೆ ನೀಡಿದೆ. ಈ ದಿಸೆಯಲ್ಲಿ ರಾಜ್ಯಕ್ಕೆ ಸಮೃದ್ಧಿ ತರಬಲ್ಲ ಐತಿಹಾಸಿಕ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ’ ಎಂದು ಹೇಳಿದರು.

ನೀರಾವರಿ ಜಮೀನಿಗೆ 40 ಲಕ್ಷ ರು.:

ಯೋಜನೆ ಅಡಿ ಮುಳುಗಡೆಯಾಗುವ 75,563 ಎಕರೆ ಜಮೀನು ಪೈಕಿ ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ 40 ಲಕ್ಷ ರು, ಖುಷ್ಕಿ ಒಣಭೂಮಿಯ ಎಕರೆಯೊಂದಕ್ಕೆ 30 ಲಕ್ಷ ಪರಿಹಾರ ನೀಡಲು ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ.

ಕಾಲುವೆ ನಿರ್ಮಿಸಲು ಸುಮಾರು 51,837 ಎಕರೆ ಬೇಕಾಗಿದ್ದು, ಇದರಲ್ಲಿ 23631 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ನಡೆಸಿ ಕಾಮಗಾರಿ ಕೈಗೊಳ್ಳಲಾಗಿದೆ. ಕಾಲುವೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಸಂಬಂಧಿಸಿ ಒಣಭೂಮಿಯ ಎಕರೆಯೊಂದಕ್ಕೆ 25 ಲಕ್ಷ ಹಾಗೂ ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ 30 ಲಕ್ಷ ಪರಿಹಾರ ಒದಗಿಸಲು ತೀರ್ಮಾನಿಸಲಾಗಿದೆ.

ಕಾಲುವೆ ನಿರ್ಮಾಣದಲ್ಲಿ ಜಮೀನು ಕಳೆದುಕೊಂಡವರು ಯೋಜನೆಯ ಫಲಾನುಭವಿಗಳಾಗುತ್ತಾರೆ. ಹೀಗಾಗಿ ಅವರಿಗೆ ಸ್ವಲ್ಪ ಕಡಿಮೆ ಪರಿಹಾರ ನಿಗದಿ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಸಮರ್ಥಿಸಿದರು.

ಪುನರ್‌ವಸತಿ ಪ್ರದೇಶಕ್ಕೆ ಎಕ್ರೆಗೆ 30 ಲಕ್ಷ ರು.:

ಇನ್ನು ರೈತರ ಪುನರ್ವಸತಿ ಹಾಗೂ ಪುನರ್‌ ವ್ಯವಸ್ಥೆ ಕಾರ್ಯಗಳಿಗೆ 6469 ಎಕರೆ ಜಮೀನು ಅವಶ್ಯಕತೆಯಿದೆ. ಇದರಿಂದ ಸುಮಾರು 20 ಗ್ರಾಮಗಳು, ಕೆಲ ಪಟ್ಟಣ ವಾರ್ಡ್‌ಗಳು ಮುಳುಗಡೆಯಾಗಲಿದೆ. ಈ 6,469 ಎಕರೆಗೆ ಪ್ರತಿ ಎಕರೆಗೆ ತಲಾ 30 ಲಕ್ಷ ರು. ಪರಿಹಾರ ನಿಗದಿ ಮಾಡಲಾಗಿದೆ. ಕಟ್ಟಡಗಳಿಗೆ ಪ್ರತ್ಯೇಕ ಮಾನದಂಡಗಳ ಅಡಿ ಪರಿಹಾರ ನಿಗದಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.

ಯುಕೆಪಿ ಹಂತ-3-ರೈತರ ಜೀವನಮಟ್ಟ ಸುಧಾರಣೆ:

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3, ನ್ಯಾಯಾಧಿಕರಣದ ತೀರ್ಪಿನಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀ. ನಿಂದ 524.256 ಮೀಗೆ ಏರಿಸಲು ಅನುಮತಿ ನೀಡಲಾಗಿದೆ. ಜಲಾಶಯದ ಎತ್ತರ ಹೆಚ್ಚಿಸುವುದರಿಂದ 5.94 ಲಕ್ಷ ಹೆಕ್ಟೇರ್‌ಗೂ (ಸುಮಾರು 14 ರಿಂದ 15 ಲಕ್ಷ ಎಕರೆ) ಹೆಚ್ಚು ಭೂಮಿ ನೀರಾವರಿ ಕಲ್ಪಿಸಬಹುದಾಗಿದೆ. ಇದರಿಂದ ರೈತರ ಜೀವನ ಮಟ್ಟದ ಸುಧಾರಣೆಯಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಅವಧಿಯಲ್ಲಿ ನೆನೆಗುದಿಗೆ:

2023ರಲ್ಲಿ ಹಿಂದಿನ ಬಿಜೆಪಿ ಸರ್ಕಾರ ತಲಾ 20 ಲಕ್ಷ, 25 ಲಕ್ಷ ರು.ಗಳಷ್ಟು ಕಡಿಮೆ ಪರಿಹಾರ ನಿಗದಿ ಮಾಡಿದ್ದರಿಂದ ಯಾವ ರೈತರೂ ಭೂಮಿ ನೀಡಲು ಒಪ್ಪಲಿಲ್ಲ ಹಾಗೂ ಯೋಜನೆಗೆ ಚಾಲನೆಯೂ ದೊರೆಯದೆ ನೆನೆಗುದಿಗೆ ಬಿದ್ದಿತ್ತು ಎಂದು ಸಿದ್ದರಾಮಯ್ಯ ದೂರಿದರು.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ಎಚ್.ಕೆ.ಪಾಟೀಲ್‌,ಎಂ.ಬಿ. ಪಾಟೀಲ್‌, ಶಿವಾನಂದ ಪಾಟೀಲ್‌ ಸೇರಿದಂತೆ ಹಲವರು ಹಾಜರಿದ್ದರು.

---- ಬಾಕ್ಸ್-

ಅಧಿಸೂಚನೆ ಹೊರಡಿಸುವಂತೆ

ಕೇಂದ್ರಕ್ಕೆ ರಾಜ್ಯ ಸರ್ಕಾರ ಒತ್ತಾಯ

ಯೋಜನೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ಇದುವರೆಗೂ ಗೆಜೆಟ್‌ ಅಧಿಸೂಚನೆ ಹೊರಡಿಸಿಲ್ಲ. 2011ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದರೂ 2013 ರಿಂದಲೂ ಗೆಜೆಟ್‌ ಅಧಿಸೂಚನೆ ಬಾಕಿ ಉಳಿಸಿಕೊಳ್ಳಲಾಗಿದೆ. ಯೋಜನೆಯ ತ್ವರಿತ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಅಧಿಸೂಚನೆ ಹೊರಡಿಸಲು ಕೇಂದ್ರದ ಸಚಿವರನ್ನು ಹಲವು ಬಾರಿ ಭೇಟಿ ಮಾಡಿ ಒತ್ತಾಯಿಸಲಾಗಿದೆ. ಆದರೂ ಅವರು ಮನಸ್ಸು ಮಾಡಿಲ್ಲ. ಈಗಲಾದರೂ ಕೂಡಲೇ ಗೆಜೆಟ್‌ ಅಧಿಸೂಚನೆ ಹೊರಡಿಸುವಂತೆ ಕೇಂದ್ರವನ್ನು ಒತ್ತಾಯಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

==

- ಬಾಕ್ಸ್-

ಕೋರ್ಟಲ್ಲಿ 20,000 ಕೇಸ್‌ ಬಾಕಿ,

ರಾಜಿ ಮೂಲಕ ಇತ್ಯರ್ಥ: ಡಿಕೆಶಿ

ಭೂಸ್ವಾಧೀನಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಅನೇಕ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಸುಮಾರು 20 ಸಾವಿರ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಪ್ರಕರಣಗಳನ್ನು ರಾಜೀ ಸಂಧಾನ ಕಾನೂನು ಪ್ರಕಾರ ಇತ್ಯರ್ಥ ಮಾಡಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಜಲಸಂಪನ್ಮೂಲ ಸಚಿವರೂ ಆದ ಶಿವಕುಮಾರ್‌, ನ್ಯಾಯಾಲಯದಲ್ಲಿ ಪ್ರಕರಣವಿಲ್ಲದ ಜಮೀನುಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಲಾಗುವುದು ಎಂದು ಹೇಳಿದರು.

ಪ್ರತ್ಯೇಕ ಪ್ರಾಧಿಕಾರ ರಚನೆ:

ಭೂಸ್ವಾಧೀನ ಹಾಗೂ ಪುನಶ್ಚೇತನ ಕಾರ್ಯಕ್ಕೆ ಸಂಬಂಧಿಸಿ ಪ್ರಮುಖ ಪ್ರಕರಣಗಳಿರುವ ಕಾರಣ ನಾವು ನ್ಯಾಯಯುತ ಪರಿಹಾರ, ಭೂಸ್ವಾಧೀನ ಪಾರದರ್ಶಕತೆ ಹಕ್ಕು ಕಾಯ್ದೆಯಡಿ ಹೊಸ ನೀತಿ ರೂಪಿಸಲು ತೀರ್ಮಾನಿಸಿದ್ದೇವೆ. ಕಾಯ್ದೆಯಡಿ ಪುನಶ್ಚೇತನ ಹಾಗೂ ಪರಿಹಾರ ಪ್ರಾಧಿಕಾರ ರಚಿಸಲು ಅವಕಾಶವಿದ್ದು, ರಾಜ್ಯ ಸರ್ಕಾರ ಮೊದಲ ಬಾರಿಗೆ ಈ ಪ್ರಾಧಿಕಾರ ರಚಿಸಲಿದೆ. ಮುಖ್ಯನ್ಯಾಯಮೂರ್ತಿಗಳು ನೇಮಕ ಮಾಡುವ ನ್ಯಾಯಾಧೀಶರ ನೇತೃತ್ವದಲ್ಲಿ ಈ ಪ್ರಾಧಿಕಾರ ರಚಿಸಲಾಗುವುದು ಎಂದು ತಿಳಿಸಿದರು.

-ಬಾಕ್ಸ್-

ಮಹಾರಾಷ್ಟ್ರ ವಿರುದ್ಧ ಪ್ರತ್ಯೇಕ ಹೋರಾಟ

ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿದ್ದಾರೆ. ಈ ವಿಚಾರವಾಗಿ ನಾವು ಪ್ರತ್ಯೇಕವಾಗಿ ಹೋರಾಟ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

2010ರ ಡಿ.30 ರಂದು ಕೃಷ್ಣಾ ನೀರು ವಿವಾದ ನ್ಯಾಯಾಧಿಕರಣದಲ್ಲಿ ಕರ್ನಾಟಕಕ್ಕೆ ತನ್ನ ಪಾಲಿನ ನೀರು ಹಂಚಿಕೆಯಾಗಿದ್ದು, ಇದರ ಅಂತಿಮ ವರದಿ 2013ರಲ್ಲಿ ನೀಡಲಾಗಿತ್ತು. ಆದರೂ ಇವತ್ತಿನವರೆಗೂ ಕೇಂದ್ರ ಸರ್ಕಾರ ಈ ವಿಚಾರವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಈಗ ಬಂದಿರುವ ತೀರ್ಪಿನ ಪ್ರಕಾರ ನಮ್ಮ ಪಾಲಿನ ನೀರು ಪಡೆಯುವುದು ನಮ್ಮ ಹಕ್ಕು. ಈ ವಿಚಾರದಲ್ಲಿ ಮಹಾರಾಷ್ಟ್ರ ರಾಜ್ಯ ಹಿಂದೆಯೇ ಹೆಚ್ಚುವರಿ ನೀರು ಬಳಕೆಗೆ ಸಮ್ಮತಿಸಿದೆ. ಇನ್ನು ತೆಲಂಗಾಣ ಹಾಗೂ ಆಂಧ್ರಪ್ರದೇಶ ಈ ವಿಚಾರದಲ್ಲಿ ಒಪ್ಪಿಗೆ ನೀಡುವ ವಿಶ್ವಾಸವಿದೆ ಎಂದು ಹೇಳಿದರು.+++++

ಯುಕೆಪಿ-2 ಕುರಿತು ಸಂಪುಟದ ಪ್ರಮುಖ ತೀರ್ಮಾನ