ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಇಲ್ಲಿನ ಪ್ರಸಿದ್ಧ ಗಣಪತಿ ಮಹೋತ್ಸವವನ್ನು ಸುಮಾರು ೭೪ ವರ್ಷಗಳಿಂದ ಭಕ್ತಿಭಾವದಿಂದ ಸಮಿತಿಯವರು ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಹೆಸರಾಂತ ಕಲಾವಿದ ರವೀಂದ್ರ ಅವರಿಂದ ಧರ್ಮಸ್ಥಳ ಮಾದರಿಯ ಮಂಟಪವನ್ನು ವಿಶೇಷ ವಿನ್ಯಾಸ ಮಾಡಿ ಗಣಪತಿಯನ್ನು ಪ್ರತಿಷ್ಠಾಪಿಸಿರುವುದು ವಿಶೇಷವಾಗಿದೆ.ಪ್ರತಿನಿತ್ಯವೂ ಪೂಜೆ, ಸಂಜೆ ಸಾಂಸ್ಕೃತಿಕ ವೈಭವದ ಮೆರುಗನ್ನು ಭಕ್ತರಿಗೆಲ್ಲ ತೋರಿಸುವ ಮೂಲಕ ಹಾಸನ ಜಿಲ್ಲೆಯಲ್ಲಿಯೇ ಪ್ರಸಿದ್ಧ ಗಣಪತಿ ಮಹೋತ್ಸವವೆಂದು ಹೆಸರು ಮಾಡಿರುವ ಹಾಗೂ ಭಗವಂತನನ್ನು ೪೮ ದಿನಗಳ ಕಾಲ ಮಂಟಪದಲ್ಲಿ ಕೂರಿಸಿ ನಂತರ ಭವ್ಯ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡುತ್ತಾರೆ. ಸುಮಾರು ೨೦ ವರ್ಷಗಳಿಂದ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ವಿಶೇಷ ವಿನ್ಯಾಸಗಳನ್ನು ಮಾಡಿಕೊಂಡು ಬರುತ್ತಿರುವ ಲಿಮ್ಕಾ ದಾಖಲೆ ಕಲಾವಿದ, ಜಿಲ್ಲೆಯಾದ್ಯಂತ ಹೆಸರು ಮಾಡಿರುವ ರವೀಂದ್ರ. ಇವರು ಜಿಲ್ಲೆಯಲ್ಲಿ ನಡೆಯುವ ಎಲ್ಲಾ ರೀತಿಯ ಸಾಂಸ್ಕೃತಿಕ ಉತ್ಸವಗಳ ವೈಭವ ವೇದಿಕೆ ವಿನ್ಯಾಸವನ್ನು ತನ್ನದೇ ಆದಂತಹ ವಿಶಿಷ್ಟ ಶೈಲಿ ಮೂಲಕ ವೇದಿಕೆ ನಿರ್ಮಿಸುತ್ತಾರೆ.
೨೦೨೫ನೇ ಸಾಲಿನ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯವರ ಸಹಕಾರದಿಂದ ಪ್ರತಿಯೊಬ್ಬ ಭಕ್ತನ ಮನ ಸೆಳೆಯುವಂತೆ ವಿಶ್ವವಿಖ್ಯಾತ ಅನ್ನದಾನ ಪ್ರಭು ಶ್ರೀ ಕ್ಷೇತ್ರ ಧರ್ಮಸ್ಥಳದ ಕ್ಷೇತ್ರದಲ್ಲಿ ಶ್ರೀ ಪ್ರಸನ್ನ ಗಣಪತಿಯನ್ನು ಕೂರಿಸಿರುವಂತೆ ಧರ್ಮಸ್ಥಳ ಮಾದರಿಯ ಭವ್ಯ ಮಂಟಪವು ಹಾಸನ ಜಿಲ್ಲೆಯ ಸಮಸ್ತ ಭಕ್ತರನ್ನು ಆಕರ್ಷಣೀಯವಾಗಿ ಸೆಳೆಯುತ್ತಿದೆ. ಈ ವಿನ್ಯಾಸವನ್ನು ರಾಮನಗರ ಸಂಸದ ಡಾ. ಸಿ. ಎನ್. ಮಂಜುನಾಥ್ ಅವರು ಉದ್ಘಾಟಿಸಿ ರವೀಂದ್ರರಂಥ ವಿನ್ಯಾಸಕಾರರು ಕಲೆಯಲ್ಲಿ ಉತ್ತುಂಗದ ಸಾಧನೆ ಮಾಡಲಿ ಎಂದು ಅಭಿನಂದಿಸಿದ್ದರು.ಈ ಬಗ್ಗೆ ಪತ್ರಿಕೆಯು ಕಲಾವಿದ ರವೀಂದ್ರರನ್ನು ಮಾತನಾಡಿಸಿದಾಗ, ನಾನು ಚಿಕ್ಕ ವಯಸ್ಸಿನಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದು, ಬೋರ್ಡ್ ಬರೆಯುವುದು, ರಸ್ತೆ ಬದಿಯಲ್ಲಿರುವ ಕಾಂಪೌಂಡ್‌ಗಳ ಮೇಲೆ ಚಿತ್ರಗಳನ್ನು ಬಿಡಿಸುವುದು ಇಷ್ಟವಾದ ಕೆಲಸವಾಗಿತ್ತು, ನನಗೆ ಇಷ್ಟದ ದೇವರಾದ ಶ್ರೀ ಗಣಪತಿಯ ಸೇವೆಯನ್ನು ಸುಮಾರು ವರ್ಷಗಳಿಂದ ನನ್ನ ಮನಸ್ಸಿಗೆ ಗೋಚರವಾಗುವಂತಹ ವಿನ್ಯಾಸವನ್ನು ಮಾಡಿಕೊಂಡು ಬರುತ್ತಿದ್ದೇನೆ. ಈ ಕಲಾ ಸಮರ್ಪಣೆ ನನಗೆ ನೆಮ್ಮದಿ ತಂದಿದೆ. ಚನ್ನರಾಯಪಟ್ಟಣ ಶ್ರೀ ಪ್ರಸನ್ನ ಗಣಪತಿಯ ಸಮಿತಿಯವರು ನನ್ನ ಕಲೆಯನ್ನು ಪ್ರೋತ್ಸಾಹಿಸುವ ಮೂಲಕ ಪ್ರತಿ ವರ್ಷವೂ ನಮ್ಮ ಕಲೆಗೆ ಅಭಿನಂದಿಸುತ್ತಾ ಬರುತ್ತಿದ್ದಾರೆ ಎಂದರು.
ಸ್ಥಳೀಯ ಭಕ್ತರು ಹಾಗೂ ಜಿಲ್ಲೆಯ ಸಾರ್ವಜನಿಕರು ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪಕ್ಕೆ ಭವ್ಯ ಧರ್ಮಸ್ಥಳ ಮಾದರಿ ವಿನ್ಯಾಸವನ್ನು ನೋಡಲು ಸಾಗರೋಪಾದಿಯಲ್ಲಿ ಆಗಮಿಸುತ್ತಿರುವುದು ವಿಶೇಷವಾಗಿದೆ.-----
* ಹೇಳಿಕೆಇತ್ತೀಚೆಗೆ ಧರ್ಮಸ್ಥಳ ಕ್ಷೇತ್ರ ಹೆಚ್ಚು ಚರ್ಚೆಯಲ್ಲಿರುವ ಹಿನ್ನೆಲೆಯಲ್ಲಿ ಕೆಲ ಸ್ನೇಹಿತರು ಧರ್ಮಸ್ಥಳ ಮಾದರಿಯ ಮಂಟಪ ಮಾಡಿ ಎಂದು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ತೆರಳಿ ಅಲ್ಲಿಯ ಕಂಬಗಳು ಹಾಗೂ ಕಲೆಯನ್ನು ನೋಡಿ ಬಂದು ನಮ್ಮ ಗಣಪತಿ ಪೆಂಡಾಲಿನಲ್ಲಿ ಸ್ಥಾಪನೆ ಇದೇ ಮೊದಲ ಬಾರಿಗೆ ಮಾಡಿದ್ದೇವೆ.
- ರವೀಂದ್ರ, ಕಲಾವಿದ