ಸಾರಾಂಶ
ಕನ್ನಡಪ್ರಭ ವಾರ್ತೆ ಹಳೇಬೀಡುನಡೆಯುವವರು ಜಾರದಂತೆ, ಜಾರುವವರು ಬೀಳದಂತೆ, ಬಿದ್ದವರನ್ನು ಎತ್ತುವುದೇ ಜನ ಜಾಗೃತಿಯ ಕಾಯಕ ಎಂದು ಪುಷ್ಪಗಿರಿ ಮಹಾಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಹಳೇಬೀಡಿನ ಶ್ರೀಬನಶಂಕರಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮ ಪಂಚಾಯಿತಿ ಹಳೇಬೀಡು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸಹಯೋಗದೊಂದಿಗೆ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದಾರೆ. ಇಂದು ಗಾಂಧಿ ಜಯಂತಿ ಪ್ರಯುಕ್ತ ಆ ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ. ಮನುಷ್ಯ ಸಹಜವಾಗಿ ದುಶ್ಚಟಕ್ಕೆ ಬಿದ್ದರೆ ಅವನ ಸಂಸಾರ ಬೀದಿ ಪಾಲು ಎಂದು ತಿಳಿಸಿದರು. ಬೇಲೂರು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡುತ್ತ ಮಹಿಳಾ ಸಬಲೀಕರಣಕ್ಕೆ ದೇಶ, ರಾಜ್ಯ ಹೆಚ್ಚು ಉತ್ತೇಜನ ನೀಡುತ್ತ ಬಂದಿದೆ. ಎಲ್ಲಾ ಗ್ರಾಮ ಪಂಚಾಯಿತಿ, ಗ್ರಾಮಾಂತರ ಪ್ರದೇಶದಲ್ಲಿ ಇದರ ಬಗ್ಗೆ ವಿವರ ಪಡೆದು ಸಾಲ ತೆಗೆದುಕೊಂಡು ಅಭಿವೃದ್ಧಿಯ ಕಾರ್ಯಗಳನ್ನು ನಡೆಸುತ್ತ ಬನ್ನಿ ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹಳೇಬೀಡು ಕೆಪಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜು ಬಸವರಾಜು ಗಾಂಧಿತತ್ವದ ವಿಚಾರಧಾರೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಗಾಂಧಿ ಹುಟ್ಟಿನಿಂದ ಅಂತ್ಯದವರಿಗೂ ಸವಿಸ್ತಾರವಾಗಿ ಪ್ರತಿ ಹಂತದಲ್ಲಿ ದೇಶದ ಎಲ್ಲಾ ಜಾಗದ, ಸ್ಥಳ, ದಿನಾಂಕದೊಂದಿಗೆ ಸೂಕ್ತವಾಗಿ ಮಾಹಿತಿ ನೀಡಿದರು.ಬೇಲೂರು ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಹಳೇಬೀಡು ರಘುನಾಥ್ ಮಾತನಾಡುತ್ತಾ, ಧರ್ಮಸ್ಥಳ ಧರ್ಮದ ಕ್ಷೇತ್ರ, ಈ ಕ್ಷೇತ್ರದ ಹಲವಾರು ಸುಳ್ಳಿನ ವಿಚಾರಗಳನ್ನು ಖಾಸಗಿ ವಾಹಿನಿಯಲ್ಲಿ ನಿರಂತವಾಗಿ ಪ್ರಸಾರ ಮಾಡಿದರು. ಆದರೆ ಕೊನೆಯಲ್ಲಿ ಧರ್ಮವನ್ನು ಕಾಪಾಡಿದ್ದು ಸತ್ಯ. ಈ ಸತ್ಯಕ್ಕೆ ಯಾವಾಗಲೂ ಜಯವಿದೆ. ಡಾ. ವೀರೇಂದ್ರ ಹೆಗಡೆಯವರು ತಮ್ಮ ಜೀವನದಲ್ಲಿ ಹಲವಾರು ಜನರಿಗೆ ದಾರಿ ದೀಪ ಆಗಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಧು, ಉಪಾಧ್ಯಕ್ಷ ಸುಮಾ ವೆಂಕಟೇಶ್, ಪಿಡಿಒ ವಿರೂಪಾಕ್ಷ, ಮಂಗಳೂರು ಪಬ್ಲಿಕ್ ಸ್ಕೂಲ್ ಚಂದ್ರಶೇಖರ್ ಜೈನ್, ಡಾ.ಎಂ.ಸಿ.ಕುಮಾರ್, ಎಲ್‌ಐಸಿ ಚಂದ್ರಶೇಖರ್, ಗಂಗೂರು ಶಿವಕುಮಾರ್, ಶಾರದ ವಿದ್ಯಾಸಂಸ್ಥೆಯ ಅಧ್ಯಕ್ಷ ಯತೀಶ್, ಮುಖ್ಯ ಶಿಕ್ಷಕಿ ನಂದಿನಿ, ಎಸ್ ಜಿ ಆರ್ ಶಾಲೆಯ ಮುಖ್ಯ ಶಿಕ್ಷಕಿ ಮಮತಾ, ರವಿಕುಮಾರ್, ತಾ.ಯೋ.ಅ. ಮಂಜುಳ, ರಂಜಿತ ಹಾಗೂ ಶಾಲೆಯ ಮಕ್ಕಳು ಹಾಜರಿದ್ದರು.