ಮತ್ತೊಮ್ಮೆ ಜೈಲಿಗೆ ಅಟ್ಟಿದರೆ ರಾಜ್ಯ ಹೊತ್ತಿ ಉರಿಯುತ್ತದೆ

| Published : Feb 25 2024, 01:55 AM IST

ಮತ್ತೊಮ್ಮೆ ಜೈಲಿಗೆ ಅಟ್ಟಿದರೆ ರಾಜ್ಯ ಹೊತ್ತಿ ಉರಿಯುತ್ತದೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಯಡಿಯೂರಪ್ಪ ಅವರೇ ನಾಡು, ನುಡಿ, ಭಾಷೆಗಾಗಿ ನಿಮ್ಮದೇನಾದರೂ ನಮ್ಮ ಹೋರಾಟದ ತರಹ ಕೊಡುಗೆ ಇದೆಯಾ ಎಂದು ಪ್ರಶ್ನಿಸಿದರೆ ಅದಕ್ಕೆ ಅವರ ಉತ್ತರ ಶೂನ್ಯ ಎಂದು ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕನ್ನಡ ಹೋರಾಟಗಾರ ಮೇಲೆ ಮತ್ತೊಂದು ಬಾರಿ ಇಲ್ಲ - ಸಲ್ಲದ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವ ಪ್ರಯತ್ನವನ್ನು ಸರ್ಕಾರ ಮಾಡಿದರೆ ಕರ್ನಾಟಕ ಹೊತ್ತಿ ಉರಿಯುತ್ತದೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಎಚ್ಚರಿಕೆ ನೀಡಿದರು.

ನಗರದ ಕನ್ನಡ ಭವನದಲ್ಲಿ ಶನಿವಾರ ಕರವೇ ರಾಜ್ಯ ಮಟ್ಟದ ಕಾರ್ಯಕಾರಣಿಯ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಾಡು, ನುಡಿ, ಭಾಷೆಗಾಗಿ ಏನು ತ್ಯಾಗ ಇದೆ ನಿಮ್ಮ (ಸರ್ಕಾರ)ದ್ದು, ಅಧಿಕಾರದಲ್ಲಿದ್ದುಕೊಂಡು ಬೇಕಾದನ್ನು ಮಾಡಬಹುದು. ಅಧಿಕಾರ ಇಲ್ಲದೆ, ಯಾವ ಆಮಿಷ ಪಡದೆ 25 ವರ್ಷಗಳ ಕಾಲ ಮನೆ, ಕುಟಂಬ ಬದಿಗೆ ಇಟ್ಟು, ಜೀವದ ಹಂಗು ತೊರೆದು ಕನ್ನಡಕ್ಕಾಗಿ ಹೋರಾಟ ಮಾಡಿದ್ದು ನಮ್ಮ ಕೊಡುಗೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಯಡಿಯೂರಪ್ಪ ಅವರೇ ನಾಡು, ನುಡಿ, ಭಾಷೆಗಾಗಿ ನಿಮ್ಮದೇನಾದರೂ ನಮ್ಮ ಹೋರಾಟದ ತರಹ ಕೊಡುಗೆ ಇದೆಯಾ ಎಂದು ಪ್ರಶ್ನಿಸಿದರೆ ಅದಕ್ಕೆ ಅವರ ಉತ್ತರ ಶೂನ್ಯ ಎಂದು ಹರಿಹಾಯ್ದರು.

ಬೆಳಗಾವಿ ಯಾರದೈತ್ತಿ ಎಂದು ಕೇಳುವವರಿಗೆ ಬೆಳಗಾವಿ ನಮ್ಮದೈತ್ತಿ ಎನ್ನುವ ತಾಕತ್ತು ಕರವೇ ಕಾರ್ಯಕರ್ತರು ಪ್ರದರ್ಶಿಸಿದ್ದಾರೆ. ಕರವೇ ಕಾರ್ಯಕರ್ತರು ನಡೆಸುತ್ತಿರುವ ಕಾರ್ಯಕಾರಣಿ ಸಭೆ ಅಪ್ಪಟ್ಟ ಕನ್ನಡಿಗರು ನಡೆಸುತ್ತಿರುವ ಸಚಿವ ಸಂಪುಟ ಸಭೆ ಎಂದರು.

ಸಿಎಂ ಸಿದ್ದರಾಮಯ್ಯ ನಮ್ಮೊಂದಿಗೆ ಚೆನ್ನಾಗಿಯೇ ಇದ್ದರು. ಆದರೆ, ಕನ್ನಡ ನಾಮಫಲಕ ಅಳವಡಿಸುವ ಕುರಿತು ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸಿದ ವೇಳೆ ಪೊಲೀಸರಿಗೆ ನಾರಾಯಣಗೌಡರಿಗೆ ಮೂರು ತಿಂಗಳು ಜೈಲಿನಿಂದ ಹೊರಗಡೆ ಬರದಂತೆ ನೋಡಿಕೊಳ್ಳಬೇಕೆಂದು ಎಂದು ಆದೇಶ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೆಂಗಳೂರಿನ ಪೊಲೀಸ್ ಆಯುಕ್ತ ದಯಾನಂದ ಅವರಿಗೆ ಸಿಎಂ ಸಿದ್ದರಾಮಯ್ಯನವರಿಗೆ ಇಲ್ಲ, ಸಲ್ಲದ ವಿಷಯ ಹೇಳಿ ಅವರ ದಿಕ್ಕು ತಪ್ಪಿಸಿದರು. ಈ ಹಿನ್ನೆಲೆಯಲ್ಲಿ ಅವರ ಕಡೆಯಿಂದ ಆದೇಶ ಮಾಡಿಸಿ ತರಾತುರಿಯಲ್ಲಿ ಡಿಸಿಪಿ ಲಕ್ಷ್ಮೀ ಪ್ರಸಾದ ಅವರನ್ನು ಕರೆದು ಪ್ರಕರಣ ದಾಖಲಿಸಿ ರಾತ್ರೋರಾತ್ರಿ ಬಂಧಿಸಿದ್ದರು. ನಮ್ಮ ಹೋರಾಟಗಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಹಾಕಿದರು. ಮೂರು ತಿಂಗಳು ಜೈಲಿನಲ್ಲಿಡಬೇಕು ಎಂದು ಷಡ್ಯಂತ್ರ ಮಾಡಿದ ಪೊಲೀಸರಿಗೆ ಪಾಠ ಕಲಿಸಿ 14ದಿನದಲ್ಲಿಯೇ ನಮ್ಮನ್ನು ಹೊರಗಡೆ ಕರೆದುಕೊಂಡು ಬಂದವರು ನಮ್ಮ ವಕೀಲರು ಎಂದರು.

ಈಗ ನಾಡಿನ ಹಲವು ಸಮಸ್ಯೆಗಳು ನಮ್ಮ ಮುಂದೆ ಇದೆ. ನಮ್ಮವರೆ ನಮ್ಮ ಧ್ವನಿ ಅಡಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಹೆದರಿ ಕುಳಿತುಕೊಂಡಿಲ್ಲ. ಕನ್ನಡ ಹೋರಾಟಕ್ಕೆ ನಾವು ಸದಾ ಸಿದ್ಧರಿದ್ದೇವೆ ಎಂದರು.

ನಾರಾಯಣಗೌಡರನ್ನು ಜೈಲಲ್ಲಿ ಇಟ್ಟರೆ ಅಲ್ಲಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಥೆ ಮುಗಿಯುತ್ತದೆ ಎಂದು ಭಾವಿಸಿದ್ದರು. ಆದರೆ, ಅದರ ಬೇರು ಭೂಗರ್ಭದಲ್ಲಿ ಗಟ್ಟಿಯಾಗಿದೆ. ಕರವೇಯ ಬೇರು ಅಷ್ಟು ಆಳವಾಗಿದೆ ಎಂದು ಗುಡುಗಿದರು.

ಈ ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಮಹಾದೇವ ತಳವಾರ, ಹೇಮಲತಾ, ಸುರೇಶ್ ಗವನ್ನವರ, ಸಹನಾ ಶೇಖರ ಸೇರಿದಂತೆ ನೂರಾರು ಪದಾಧಿಕಾರಿಗಳು ಭಾಗವಹಿಸಿದ್ದರು.