ಜೀವ ಕೊಟ್ಟೇವು, ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಹರಿಹರದ ಪ್ರತಿಭಟನಾ ಸಮಾವೇಶದಲ್ಲಿ ಪೋಷಕರು ಘೋಷಣೆ ಕೂಗುವ ಮೂಲಕ ಕೆಪಿಎಸ್‌ ಮ್ಯಾಗ್ನೆಟ್‌ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ

ಜೀವ ಕೊಟ್ಟೇವು, ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಹರಿಹರದ ಪ್ರತಿಭಟನಾ ಸಮಾವೇಶದಲ್ಲಿ ಪೋಷಕರು ಘೋಷಣೆ ಕೂಗುವ ಮೂಲಕ ಕೆಪಿಎಸ್‌ ಮ್ಯಾಗ್ನೆಟ್‌ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಮಂಗಳವಾರ ನಗರದ ಹರಪನಹಳ್ಳಿ ವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು. ಕಾರ್ಯಕ್ರಮದಲ್ಲಿ ನೆರೆದಿದ್ದ ಸಾರ್ವಜನಿಕರು ಶಿಕ್ಷಣ ಉಳಿಸಿ ಸಮಿತಿಯ ನಾಯಕರು, ನಾಗರಿಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ಕಿಡಿಕಾರಿದರು.

ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಸಮಾವೇಶದಲ್ಲಿ ಮಾತನಾಡಿ, ಕಳೆದ ಅ.15 ಹಾಗೂ ಡಿ.30ರಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಆದೇಶಗಳ ಪ್ರಕಾರ, ರಾಜ್ಯಾದ್ಯಂತ 5900 ಗ್ರಾಮ ಪಂಚಾಯಿತಿಗಳ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ ಎಂದರು.

ಈ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ 5 ಕಿಲೋ ಮೀಟರ್ ವ್ಯಾಪ್ತಿಯ ಉಳಿದ ಎಲ್ಲ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಹುನ್ನಾರವಾಗಿದೆ. ಈಗಾಗಲೇ 15 ವರ್ಷಗಳಲ್ಲಿ ರಾಜ್ಯ ಸರ್ಕಾರದ ಪ್ರಕಾರ 17 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಯೋಜನೆ ಪ್ರಕಾರ ನಮ್ಮ ರಾಜ್ಯದ ಲಕ್ಷಾಂತರ ರೈತ-ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಹೋಗುವ ಮಕ್ಕಳಿಗೆ 6ನೇ ತರಗತಿಯಿಂದಲೇ ಮಣ್ಣಿನ ಹಣತೆ ಮಾಡುವ, ಅಡಕೆ ಸುಲಿಯುವ ಕೌಶಲ್ಯಗಳನ್ನು ಕಲಿಸುವುದಾಗಿ ಶಿಕ್ಷಣ ಮಂತ್ರಿಗಳು ಬಹಿರಂಗಪಡಿಸಿದ್ದಾರೆ. ಕಾರ್ಮಿಕರ ಮಕ್ಕಳನ್ನು ಕಾರ್ಮಿಕರನ್ನಾಗಿಯೇ ಉಳಿಸುವುದು ಸರ್ಕಾರದ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷ ಅಪೂರ್ವ ಸಿ.ಎಂ. ಮಾತನಾಡಿ, ಕಾಂಗ್ರೆಸ್ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಒಂದು ಕೆಲವರನ್ನು ಒಲಿಸುವ ರಾಜಕೀಯ ಮಾಡುತ್ತದೆ. ಇನ್ನೊಂದು, ದ್ವೇಷ ಹುಟ್ಟುಹಾಕುತ್ತದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಲ್ಲಿ ಎರಡು ಪಕ್ಷಗಳು ಒಟ್ಟಿಗಿದ್ದಾರೆ ಎಂದರು.

ವೈದ್ಯ ಡಾ.ನಸೀರ್ ಆಗಮಿಸಿ ಪ್ರಜಾಪ್ರಭುತ್ವವನ್ನು ಮತ್ತೆ ಮತ್ತೆ ಉಲ್ಲೇಖಿಸುವ ರಾಜ್ಯ ಸರ್ಕಾರವು ಈ ನೀತಿ ತರುವಾಗ ಯಾವುದೇ ಪ್ರಜಾತಾಂತ್ರಿಕ ಮೌಲ್ಯಗಳನ್ನು ಅನುಸರಿಸಿಲ್ಲ ಎಂದರು.

ಸಮಾವೇಶದ ಅಧ್ಯಕ್ಷತೆಯನ್ನು ಎಐಡಿಎಸ್‌ಒ ದಾವಣಗೆರೆ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ, ಸುಮನ್ ಟಿ.ಎಸ್. ಮಾತನಾಡಿದರು.

ಬೀದಿಬದಿ ವ್ಯಾಪಾರಸ್ಥರ ಸಂಘದ ರಾಜ್ಯ ಮುಖಂಡೆ ಮಂಜುಳಾ ಡಿ., ಆಶ್ರಯ ಕಾಲೋನಿಯ ಸಾರ್ವಜನಿಕ ಶಿಕ್ಷಣ ಉಳಿಸಿ ಪೋಷಕರ ಸಮಿತಿ ಅಧ್ಯಕ್ಷ ಡಿ.ಹನುಮಂತಪ್ಪ, ಹರಿಹರದ ಸರ್ಕಾರಿ ಶಾಲೆಗಳ ಸಾರ್ವಜನಿಕ ಶಿಕ್ಷಣ ಉಳಿಸಿ ಪೋಷಕರ ಸಮಿತಿಯ ನಾಯಕರಾದ ರೇಣುಕಾ, ಕಲೀಮುಲ್ಲಾ, ಪೂರ್ಣಿಮಾ, ಸಲ್ಮಾಬಾನು, ಲಕ್ಷ್ಮೀ, ಗುತ್ಯಮ್ಮ, ಒಳಗೊಂಡಂತೆ, ಹರಿಹರ ನಗರದ, ಹರ್ಲಾಪುರ, ಹಳೇ ಹರ್ಲಾಪುರ, ಆಶ್ರಯ ಕಾಲೋನಿ, ನೀಲಕಂಠ ನಗರ, ಜೈ ಭೀಮ್ ನಗರ, ಹೊಸಪೇಟೆ ಬೀದಿ, ವಿವಿಧ ಬಡಾವಣೆಗಳ ಪಾಲಕರು, ನಾಗರಿಕರು ಪಾಲ್ಗೊಂಡಿದ್ದರು.