ಬಿಜೆಪಿ ಬ್ಯಾಡಗಿ ತಾಲೂಕಾಧ್ಯಕ್ಷ ಸ್ಥಾನಕ್ಕೆ 22 ಜನರಿಂದ ಅರ್ಜಿ

| Published : Feb 10 2024, 01:48 AM IST

ಬಿಜೆಪಿ ಬ್ಯಾಡಗಿ ತಾಲೂಕಾಧ್ಯಕ್ಷ ಸ್ಥಾನಕ್ಕೆ 22 ಜನರಿಂದ ಅರ್ಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಡಗಿ ಬಿಜೆಪಿ ತಾಲೂಕು ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರವಾಗಿ ಹೊಸ ಪದ್ಧತಿ ಅಳವಡಿಸಲಾಗಿದ್ದು, ಒಟ್ಟು 22 ಕಾರ್ಯಕರ್ತರು, ಮುಖಂಡರು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಬ್ಯಾಡಗಿ: ಬಿಜೆಪಿ ತಾಲೂಕಾಧ್ಯಕ್ಷ ಸ್ಥಾನಕ್ಕೆ ಒಟ್ಟು 22 ಕಾರ್ಯಕರ್ತರು ಹಾಗೂ ಮುಖಂಡರು ಗುರುವಾರ ಅರ್ಜಿ ಸಲ್ಲಿಸಿದರು.

ಅಧ್ಯಕ್ಷರ ಆಯ್ಕೆ ವಿಚಾರವಾಗಿ ಹೊಸ ಪದ್ಧತಿ ಅಳವಡಿಸಲಾಗಿದ್ದು, ಫೆ. 8ರಂದು ಅರ್ಜಿ ಸಲ್ಲಿಸಲು ಅಂತಿಮ ದಿನವಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಪಕ್ಷದ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಹಾಲಿ, ಮಾಜಿ ಜನಪ್ರತಿನಿಧಿಗಳು ತಾಲೂಕಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದರು.

ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ತಾಲೂಕು ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಶಿರೂರು, ಮೋಟೆಬೆನ್ನೂರಿನ ಶಿವಬಸಪ್ಪ ಕುಳೇನೂರ, ನಿಂಗಪ್ಪ ಬಟ್ಟಲಕಟ್ಟಿ, ಗುಂಡೇನಹಳ್ಳಿಯ ಮಲ್ಲಿಕಾರ್ಜುನ ವೀರಾಪುರ, ಬನ್ನಿಹಟ್ಟಿಯ ಮರಡೆಪ್ಪ ಹೆಡಿಯಾಲ, ಕದರಮಂಡಲಗಿಯ ಭೀಮಣ್ಣ ನಾಯ್ಕರ್, ಬೆಳಕೇರಿಯ ದ್ಯಾಮನಗೌಡ ಪಾಟೀಲ, ಕೂನಬೇವು ಗ್ರಾಮದ ಮಲ್ಲೇಶಪ್ಪ ಗಾಣಿಗೇರ, ಹೆಡಿಗ್ಗೊಂಡದ ಮಂಜುನಾಥ ತಳಮನಿ, ತಿಮ್ಮಾಪುರದ ರಾಜು ಹೊಸಕೇರಿ, ಕಬ್ಬೂರಿನ ಮಂಜುನಾಥ ಬಡಿಗೇರ, ಕೊಲ್ಲಾಪುರದ ಸಿದ್ದಯ್ಯ ಪಾಟೀಲ, ಗುಡ್ಡಗುಡ್ಡಾಪುರದ ಭರಮಪ್ಪ ಉರ್ಮಿ ಬ್ಯಾಡಗಿ ಪಟ್ಟಣದ ವೀರೇಂದ್ರ ಶೆಟ್ಟರ, ಸುಭಾಸ್ ಮಾಳಗಿ, ಸಂಜೀವ ಮಡಿವಾಳರ, ವಿದ್ಯಾಶೆಟ್ಟಿ, ಪ್ರದೀಪ್ ಜಾಧವ, ವೀರೇಶ ಅಂಗಡಿ ಸೇರಿ ಒಟ್ಟು 22 ಜನರು ಅರ್ಜಿಗಳನ್ನು ಸಲ್ಲಿಸಿದರು.ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಛತ್ರದ ಮಾತನಾಡಿ, ಪ್ರಸಕ್ತ ಲೋಕಸಭೆ ಚುನಾವಣೆ ಫಲಿತಾಂಶ ಮುಂಬರುವ ಸ್ಥಳೀಯ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಸ್ಥಾನ ಅತ್ಯಂತ ಮಹತ್ವ ಪಡೆದುಕೊಂಡಿದೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಸಾಮಾಜಿಕ ನ್ಯಾಯಕ್ಕೆ ಅದ್ಯತೆ ನೀಡುವ ಮೂಲಕ ಪಕ್ಷ ಬಲಗೊಳಿಸಬೇಕಾಗಿದೆ. ನೂತನ ಅಧ್ಯಕ್ಷರ ಆಯ್ಕೆ ವೇಳೆಯಲ್ಲಿ ಎಲ್ಲರ ಅಭಿಪ್ರಾಯ ಪಡೆಯುವುದು ಹೆಚ್ಚು ಸೂಕ್ತವಾಗಿದ್ದು, ಸಂಘಟನೆ ವಿಷಯದಲ್ಲಿ ಸ್ವಂತ ಶಕ್ತಿಯನ್ನು ಹೊಂದಿರುವ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ತೆರಳುವರಿಗೆ ಅವಕಾಶ ನೀಡಲಾಗುವುದು. ಅಲ್ಲದೇ ಪಕ್ಷವನ್ನು ಗ್ರಾಮಮಟ್ಟದಿಂದ ಬಲಪಡಿಸಬೇಕಿದ್ದು, ಸಂಘಟನೆ ಮುಖ್ಯವಾಗಿದೆ ಎಂದರು.

ಪುರಸಭೆ ಮಾಜಿ ಸದಸ್ಯ ಪ್ರಶಾಂತ ಯಾದವಾಡ, ಗಣೇಶ ಅಚಲಕರ, ಮುಖಂಡರಾದ ಲೋಕೇಶ ಕಡೇಮನಿ, ಪ್ರದೀಪ ಜಾಧವ, ನಿಂಗಪ್ಪ ಬಿದರಿ ಇನ್ನಿತರರಿದ್ದರು.