ಕೊಪ್ಪಳದಲ್ಲಿ ಬೀದಿನಾಯಿ ನಿಯಂತ್ರಣಕ್ಕೆ 3 ತಿಂಗಳ ಗಡುವು

| Published : Sep 12 2025, 12:06 AM IST

ಕೊಪ್ಪಳದಲ್ಲಿ ಬೀದಿನಾಯಿ ನಿಯಂತ್ರಣಕ್ಕೆ 3 ತಿಂಗಳ ಗಡುವು
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳದಲ್ಲಿ ಬೀದಿನಾಯಿ ನಿಯಂತ್ರಣ ಮತ್ತು ನಾಯಿ ಕಡಿತದ ಕುರಿತು ನಗರಸಭೆ ಅಧಿಕಾರಿಗಳು ಕ್ರಮಕೈಗೊಳ್ಳದೆ ಇರುವುದರ ವಿರುದ್ಧ ನಾಗರಿಕ ಹೋರಾಟಗಾರ ಎಂ.ಡಿ. ಶಫಿ ಅವರು ನೀಡಿದ ದೂರಿನ ಅನ್ವಯ ಬೆಂಗಳೂರಿನ ಉಪಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆ ನಡೆಯಿತು.

ಕೊಪ್ಪಳ:

ನಗರದಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದ್ದು, ವಿದ್ಯಾರ್ಥಿಗಳ ಮೇಲೆ ಸಾಕಷ್ಟು ಬಾರಿ ದಾಳಿ ಮಾಡಿವೆ. ಹೀಗಾಗಿ ಮೂರು ತಿಂಗಳೊಳಗಾಗಿ ಅವುಗಳನ್ನು ನಿಯಂತ್ರಿಸಬೇಕು ಹಾಗೂ ಸುಪ್ರೀಂಕೋರ್ಟ್ ನಿರ್ದೇಶನದಂತೆ ಕ್ರಮವಹಿಸಬೇಕೆಂದು ಉಪಲೋಕಾಯುಕ್ತ ಬಿ. ವೀರಪ್ಪ ಅವರು ಮಹತ್ವದ ಆದೇಶ ಮಾಡಿದ್ದಾರೆ.

ಕೊಪ್ಪಳದಲ್ಲಿ ಬೀದಿನಾಯಿ ನಿಯಂತ್ರಣ ಮತ್ತು ನಾಯಿ ಕಡಿತದ ಕುರಿತು ನಗರಸಭೆ ಅಧಿಕಾರಿಗಳು ಕ್ರಮಕೈಗೊಳ್ಳದೆ ಇರುವುದರ ವಿರುದ್ಧ ನಾಗರಿಕ ಹೋರಾಟಗಾರ ಎಂ.ಡಿ. ಶಫಿ ಅವರು ನೀಡಿದ ದೂರಿನ ಅನ್ವಯ ಬೆಂಗಳೂರಿನ ಉಪಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆ ನಡೆಸಿದ ಅವರು, ಗುರುವಾರ ಮಹತ್ವದ ಆದೇಶ ನೀಡಿದ್ದಾರೆ.

ಕೊಪ್ಪಳ ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್ (ಈಗ ಬೇರೆಯಾಗಿದ್ದಾರೆ), ಜೆ.ಇ. ಸೋಮಲಿಂಗಪ್ಪ ಹಳ್ಳಿ, ಮಧುರಾ ಮಗದೂರು ಅವರಿಗೆ ನೋಟಿಸ್ ಜಾರಿ ಮಾಡಿದ್ದರಿಂದ ಬೆಂಗಳೂರಿನ ಉಪಲೋಕಾಯುಕ್ತ ಕಚೇರಿಗೆ ಹಾಜರಾಗಿದ್ದರು. ಈ ವೇಳೆ ಉಪ ಲೋಕಾಯುಕ್ತರ ಬಿ. ವೀರಪ್ಪ ಅವರು, ಸುಪ್ರೀಂಕೋರ್ಟ್ ನಿರ್ದೇಶನದಂತೆ ಕ್ರಮವಹಿಸಬೇಕು ಮತ್ತು ಇನ್ನೆಂದು ನಾಯಿ ಕಡಿತದ ಪ್ರಕರಣ ನಡೆಯದಂತೆ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ. ನಗರದ ಹೊರವಲಯದಲ್ಲಿ ಪ್ರತ್ಯೇಕವಾಗಿ ಶೆಡ್ ನಿರ್ಮಿಸಿ ಅವುಗಳನ್ನು ಅಲ್ಲಿಗೆ ಸ್ಥಳಾಂತರಿಸುವ ಮೂಲಕ ನಿರ್ವಹಣೆ ಮಾಡಬೇಕು. ಈ ಮೂಲಕ ನಗರವನ್ನು ಬೀದಿನಾಯಿಗಳಿಂದ ಮುಕ್ತಗೊಳಿಸಲು ನಗರಸಭೆ ಮೂರು ತಿಂಗಳ ಗಡುವು ನೀಡಿದೆ.

ಇದಕ್ಕೂ ಮೊದಲು ಉಪಲೋಕಾಯುಕ್ತರು, ಎರಡು ತಿಂಗಳ ಕಾಲಾವಕಾಶ ನೀಡಿದ್ದರು. ಆದರೆ, ಗಣಪತಿ ಪಾಟೀಲ್ ಅವರು ನಾನು ವರ್ಗಾವಣೆಯಾಗಿದ್ದೇನೆ. ಹೀಗಾಗಿ, ಅಲ್ಲಿಗೆ ಬೇರೊಬ್ಬರು ಪೌರಾಯುಕ್ತರಾಗಿ ಬಂದಿದ್ದಾರೆ. ಅವರಿಗೆ ಮಾಹಿತಿ ನೀಡುತ್ತೇನೆ ಎಂದು ವಿವರಿಸಿದರು. ಇಷ್ಟರೊಳಗೆ ಏಕೆ ಬೀದಿನಾಯಿಗಳನ್ನು ನಿಯಂತ್ರಿಸಲಿಲ್ಲ ಎನ್ನುವ ಪ್ರಶ್ನೆಗೆ, ಈಗಾಗಲೇ ಲಸಿಕೆ ಹಾಕಿ ನಿಯಂತ್ರಣ ಮಾಡುವ ದಿಸೆಯಲ್ಲಿ ಅಗತ್ಯ ಕ್ರಮವಹಿಸಲಾಗಿದೆ ಎಂದು ಹೇಳಿದರು.

ಜೆಇ ಸೋಮಲಿಂಗಪ್ಪ ಹಾಗೂ ಮಧುರಾ ಮಗದೂರು ಅವರಿಗೆ ನೀವಾದರೂ ಕ್ರಮವಹಿಸಿ ಎಂದರು. ಪೌರಾಯುಕ್ತರು ಇದನ್ನು ಮಾಡಲು ಆಗುವುದಿಲ್ಲ ಎಂದಾಗ, ಆರೋಗ್ಯ ನಿರೀಕ್ಷಕರಿಗೆ ಈ ಜವಾಬ್ದಾರಿ ವಹಿಸಿ. ಮೂರು ತಿಂಗಳೊಳಗಾಗಿ ಮಾಡದಿದ್ದರೇ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.ಬೀದಿನಾಯಿ ಹಾವಳಿ ಕುರಿತು ದೂರಿನ ವಿಚಾರಣೆ ನಡೆಸಿದ ರಾಜ್ಯ ಉಪಲೋಕಾಯುಕ್ತರು ಮೂರು ತಿಂಗಳೊಳಗಾಗಿ ಕ್ರಮವಹಿಸುವಂತೆ ಸೂಚಿಸಿದ್ದಾರೆ.

ಎಂ.ಡಿ. ಶಫಿ ಹೋರಾಟಗಾರ ಉಪಲೋಕಾಯುಕ್ತರು ಮೂರು ತಿಂಗಳ ಗಡುವು ನೀಡಿದ್ದು, ಸುಪ್ರೀಂಕೋರ್ಟ್ ನಿರ್ದೇಶನದಂತೆ ಬೀದಿನಾಯಿಗಳನ್ನು ನಿರ್ವಹಣೆ ಮಾಡುವಂತೆ ಸೂಚಿಸಿದ್ದಾರೆ. ಶೆಡ್ ನಿರ್ಮಿಸಿ ಅವುಗಳನ್ನು ಸ್ಥಳಾಂತರ ಮಾಡಲು ಸೂಚಿಸಿದ್ದಾರೆ.

ಸೋಮಲಿಂಗಪ್ಪ ಜೆಇ ಕೊಪ್ಪಳ ನಗರಸಭೆ