ಸಾರಾಂಶ
ಗಂಗಾವತಿ:
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ವ್ಯಾಪ್ತಿಯ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ 7 ರೆಸಾರ್ಟ್ ಹಾಗೂ ಕಟ್ಟಡಗಳನ್ನು ತಾಲೂಕು ಆಡಳಿತ ಬುಧವಾರ ನೆಲಸಮ ಮಾಡಿದೆ.ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಆನೆಗೊಂದಿ-ಹಂಪಿ ಪ್ರದೇಶದ ಸನೀಹದ ಹನುಮನಹಳ್ಳಿ, ಸಾಣಾಪುರ, ವಿರುಪಾಪುರಗಡ್ಡೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ರೆಸಾರ್ಟ್ ಮತ್ತು ಕಟ್ಟಡಗಳನ್ನು ತೆರವುಗೊಳಿಸಲು ಹಂಪಿ ಪ್ರಾಧಿಕಾರದಿಂದ ನೋಟಿಸ್ ಜಾರಿಗೊಳಿಸಲಾಗಿತ್ತು. ಅಲ್ಲದೇ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಬೇಕೆಂದು ಮೌಖಿಕ ಆದೇಶವನ್ನು ನೀಡಲಾಗಿತ್ತು. ಆದರೆ, ಸ್ವಯಂ ಪ್ರೇರಿತವಾಗಿ ತೆರವುಗೊಳಿಸದ ಕಾರಣ ತಾಲೂಕಾಡಳಿತ ಮತ್ತು ಹಂಪಿ ಪ್ರಾಧಿಕಾರದಿಂದ ಜೆಸಿಬಿ ಮೂಲಕ ತೆರವು ಮಾಡಲಾಗಿದೆ.
ಕಳೆದ 6 ತಿಂಗಳ ಹಿಂದೆ ಅನಧಿಕೃತವಾಗಿದ್ದ ರೆಸಾರ್ಟ್ ಮಾಲೀಕರಿಗೆ ತಾಲೂಕಾಡಳಿತ ಮತ್ತು ಹಂಪಿ ಪ್ರಾಧಿಕಾರ ನೋಟಿಸ್ ಜಾರಿ ಮಾಡಿತ್ತು. ಅಲ್ಲದೇ ಆ ಸಮಯದಲ್ಲಿ ಹಂಪಿ ಪ್ರಾಧಿಕಾರದ ನೋಟಿಸ್ ಆಧರಿಸಿ ಜೆಸ್ಕಾಂ ರೆಸಾರ್ಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಆದರೆ, ಮಾಲೀಕರು ರಾತ್ರೋರಾತ್ರಿ ತಾವೇ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದರು. ಇದರಿಂದ ಮಾಲೀಕರು ಹಂಪಿ ಪ್ರಾಧಿಕಾರದ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.ಸಾಣಾಪುರದಲ್ಲಿ 2 ರೆಸಾರ್ಟ್ ಮತ್ತು ವಿರೂಪಾಪುರಗಡ್ಡೆಯಲ್ಲಿ 5 ಕಟ್ಟಡ ತೆರುವುಗೊಳಿಸಿದರು. ನಗರಸಭೆಯ ಮೂರು ಜೆಸಿಬಿ ಯಂತ್ರಗಳಿಂದ ತೆರವು ಕಾರ್ಯಾಚರಣೆ ನಡೆಯಿತು. ರೆಸಾರ್ಟ್ ಮಾಲೀಕರು ತೆರವುಗೊಳಿಸದಂತೆ ಕೊಪ್ಪಳ ಮತ್ತು ಗಂಗಾವತಿ ಶಾಸಕರು, ಸಂಸದರ ಮುಂದೆ ಮನವಿ ಮಾಡಿದ್ದರು. ಆದರೆ, ಮನವಿಗೆ ಮನ್ನಣೆ ಸಿಗದೆ ಇರುವುದರಿಂದ ತೆರವು ಕಾರ್ಯಾಚರಣೆ ಅಧಿಕಾರಿಗಳಿಗೆ ಸರಳವಾಯಿತು.
ಪೊಲೀಸ್ ಬಿಗಿ ಭದ್ರತೆ:ಅಕ್ರಮ ರೆಸಾರ್ಟ್ ತೆರವುಗೊಳಿಸುವ ವೇಳೆ ಅಹಿತಕರ ಘಟನೆಗಳು ನಡೆಯಬಾರದೆಂಬ ಮುನ್ನೆಚ್ಚರಿಕೆ ಹಿನ್ನೆಲೆ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಪೊಲೀಸ್ ಅಧಿಕಾರಿಗಳು ಸೇರಿದಂತೆ 25ಕ್ಕೂ ಹೆಚ್ಚು ಪೊಲೀಸರು ಭದ್ರತೆಯಲ್ಲಿ ತೊಡಗಿದ್ದರು. ಈ ವೇಳೆ ಹಂಪಿ ಪ್ರಾಧಿಕಾರದ ಆಯುಕ್ತ ರಮೇಶ ವಟಗಲ್, ತಹಸೀಲ್ದಾರ್ ನಾಗರಾಜ್ ಹಾಗೂ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.