ದಾವಣಗೆರೆ ಕ್ಷೇತ್ರದಲ್ಲಿ ಶೇ.77 ಮತದಾನ

| Published : May 08 2024, 01:07 AM IST

ಸಾರಾಂಶ

ಬಿಜೆಪಿ-ಕಾಂಗ್ರೆಸ್‌ ಪಾಲಿಗೆ ಪ್ರತಿಷ್ಟೆಯ ಕಣವಾಗಿದ್ದ ದಾವಣಗೆರೆ ಲೋಕಸಭಾ ಚುನಾವಣೆ-2024ಕ್ಕೆ ಬುಧವಾರ ರಾತ್ರಿ ಸುಮಾರು ಶೇ.77ರಷ್ಟು ಮತದಾನವಾಗಿದೆ. ಮಾಯಕೊಂಡದಲ್ಲಿ ಶೇ.82.96ರಷ್ಟು ಅತಿ ಹೆಚ್ಚು ಮತದಾನವಾದರೆ, ಅತಿ ಕಡಿಮೆ ಮತದಾನ ದಾವಣಗೆರೆ ಉತ್ತರದಲ್ಲಿ ಶೇ.69.60ರಷ್ಟು ಮತ ಚಲಾವಣೆಯಾಗಿವೆ.

- ಮಾಯಕೊಂಡದಲ್ಲಿ ಅತಿ ಹೆಚ್ಚಿನ ಶೇ.82.96 ಮತದಾನ, ದಾವಣಗೆರೆ ಉತ್ತರದಲ್ಲಿ ಅತಿ ಕಡಿಮೆಯ ಶೇ.69.60 ಮತದಾನ

- ಮತಗಟ್ಟೆಗಳಲ್ಲಿ ಸುರಕ್ಷತೆಗೆ ಡಿಸಿ, ಎಸ್‌ಪಿ, ಸಿಇಒ ತೀವ್ರ ನಿಗಾ । ಅಹಿತಕರ ಘಟನೆ ಇಲ್ಲ, ಶಾಂತಿ-ಸುವ್ಯವಸ್ಥಿತ ಚುನಾವಣೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಬಿಜೆಪಿ-ಕಾಂಗ್ರೆಸ್‌ ಪಾಲಿಗೆ ಪ್ರತಿಷ್ಟೆಯ ಕಣವಾಗಿದ್ದ ದಾವಣಗೆರೆ ಲೋಕಸಭಾ ಚುನಾವಣೆ-2024ಕ್ಕೆ ಬುಧವಾರ ರಾತ್ರಿ ಸುಮಾರು ಶೇ.77ರಷ್ಟು ಮತದಾನವಾಗಿದೆ. ಮಾಯಕೊಂಡದಲ್ಲಿ ಶೇ.82.96ರಷ್ಟು ಅತಿ ಹೆಚ್ಚು ಮತದಾನವಾದರೆ, ಅತಿ ಕಡಿಮೆ ಮತದಾನ ದಾವಣಗೆರೆ ಉತ್ತರದಲ್ಲಿ ಶೇ.69.60ರಷ್ಟು ಮತ ಚಲಾವಣೆಯಾಗಿವೆ.

ಕ್ಷೇತ್ರದಲ್ಲಿ 2019ರ ಚುನಾವಣೆಗಿಂತಲೂ ಹೆಚ್ಚು ಮತದಾನವಾಗಿದೆ. ಸದ್ಯಕ್ಕೆ ಲಭ್ಯ ಮಾಹಿತಿ ಪ್ರಕಾರ ಶೇ.77 ಮತದಾನವಾಗಿದ್ದು, ಇದರ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮತಗಟ್ಟೆಗಳಿಗೆ ಸಂಜೆ ಕಡೆಯ ಹಂತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಲವಾರು ಮತಗಟ್ಟೆಗಳಿಗೆ ಮತದಾನಕ್ಕೆಂದು ಲಗ್ಗೆ ಇಟ್ಟಿದ್ದರಿಂದ ಅಂತಿಮ ಕ್ಷಣಗಳ ಅಂಕಿ ಅಂಶಗಳ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಒಟ್ಟಾರೆ, ಜಿಲ್ಲೆಯ ಶೇಕಡವಾರು ಮತದಾನ ಶೇ.80 ತಲುಪಬಹುದು ಅಥವಾ ಅದಕ್ಕಿಂತ ಹೆಚ್ಚಾಗುವ ಸಾಧ್ಯತೆಯೂ ಇಲ್ಲದಿಲ್ಲ.

ಇಡೀ ಕ್ಷೇತ್ರಾದ್ಯಂತ ನವ ಮತದಾರರು, ಹಿರಿಯ ನಾಗರಿಕರು, ವಿಶೇಷಚೇತನರು, ಗರ್ಭಿಣಿ, ಬಾಣಂತಿಯರು, ಲಿಂಗತ್ವ ಅಲ್ಪಸಂಖ್ಯಾತರು ಹೀಗೆ ಸ್ವಯಂಪ್ರೇರಣೆಯಿಂದ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸುತ್ತಿದ್ದರು. ವಿಶೇಷಚೇತನರು, ಹಿರಿಯ ನಾಗರಿಕರಿಗೆ ಕುಟುಂಬ ಸದಸ್ಯರು, ಸ್ವಯಂ ಸೇವಕರು, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ಸ್ವಯಂ ಸೇವಕರು ಮತಗಟ್ಟೆಗೆ ಕರೆದೊಯ್ದು, ಹೊರಗೆ ಬಿಡುವವರೆಗೆ ಸಾಥ್ ನೀಡುವ ಮೂಲಕ ಗಮನ ಸೆಳೆದರು. ಎಲ್ಲ ಕಡೆ ಕಮಾಂಡೋಗಳು, ಡಿಎಆರ್. ನಾಗರಿಕ ಪೊಲೀಸರು, ಗೃಹ ರಕ್ಷಕ ದಳದ ಸಿಬ್ಬಂದಿ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದರು.

ಅಲ್ಲಲ್ಲಿ ಮತದಾನದ ಬಹಿಷ್ಕಾರದ ಕೂಗು ಕೇಳಿ ಬಂದರೂ ಉಪವಿಭಾಗಾಧಿಕಾರಿ, ತಹಸೀಲ್ದಾರರು ಸ್ಥಳಕ್ಕೆ ದೌಡಾಯಿಸಿ, ಮತದಾನ ಬಹಿಷ್ಕರಿಸದಂತೆ ಗ್ರಾಮಸ್ಥರು, ಜನರ ಮನವೊಲಿಸಿ, ಮತದಾನ ಪ್ರಕ್ರಿಯೆ ಸಾಗಲು ಕಾರಣರಾದರು.

ಹರಿಹರ ತಾ. ಬೆಳ್ಳೂಡಿ ಗ್ರಾಮದ ಮತಗಟ್ಟೆಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ವರ್ಷಿಣಿ ತನ್ನ ಗೆಳೆತಿಯರೊಂದಿಗೆ ಬಂದು, ಮೊದಲ ಸಲ ಮತ ಚಲಾಯಿಸಿ, ಸೆಲ್ಫೀ, ಗ್ರೂಫ್ ಫೋಟೋ ತೆಗೆದುಕೊಳ್ಳುವ ಮೂಲಕ ಸಂಭ್ರಮಿಸಿದರು. ಗ್ರಾಮೀಣ ಭಾಗಕ್ಕೆ ಹೆಚ್ಚಿನ ಸೌಕರ್ಯ ಕಲ್ಪಿಸಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ಸಿಗಬೇಕು. ಇದಕ್ಕಾಗಿ ಒಳ್ಳೆಯ ಅಭ್ಯರ್ಥಿಗಳು ಆಯ್ಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಭಾನುವಳ್ಳಿ ಗ್ರಾಮದ ಮತಗಟ್ಟೆಯಲ್ಲಿ 20 ತಿಂಗಳ ಬಾಣಂತಿ ನೇತ್ರಾವತಿ ತನ್ನ ತಾಯಿ ಸಮೇತ ಮತಗಟ್ಟೆಗೆ ಆಗಮಿಸಿ, ಮತ ಚಲಾಯಿಸಿದರು. ಇದೇ ಗ್ರಾಮದಲ್ಲಿ ವೃತ್ತ, ಮಹಾದ್ವಾರದ ವಿಚಾರಕ್ಕೆ ಎರಡು ಸಮುದಾಯಗಳ ಮಧ್ಯೆ ಗಲಾಟೆ, ಪ್ರತಿಭಟನೆ ನಡೆದಿತ್ತು. ಆದರೆ, ಮುನ್ನೆಚ್ಚರಿಕೆಯಾಗಿ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಲ್ಲದೇ, ಗ್ರಾಮಸ್ಥರಿಗೆ ಮನವೊಲಿಸಿದ್ದ ಪರಿಣಾಮ ಗ್ರಾಮಸ್ಥರು ಉತ್ಸಾಹದಿಂದಲೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಡೆ, ತಡೆಗಳಿಲ್ಲದೇ ಶಾಂತಿಯುತವಾಗಿ ಮತದಾನ ನಡೆಯಿತು. ಬಿಸಿಲೇರುವ ಮುನ್ನವೇ ಅನೇಕರು ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿ, ಎಂದಿನಂತೆ ತಮ್ಮ ದೈನಂದಿನ ಕಾಯಕ, ಕೆಲಸ, ಕಾರ್ಯಕ್ಕೆ ತೆರಳಿದರು. ಜಿಲ್ಲಾದ್ಯಂತ ಹಿರಿಯ ನಾಗರಿಕರು, ವಿಶೇಷಚೇತನರಿಗೆ ಪಕ್ಷ, ಅಭ್ಯರ್ಥಿಗಳು, ಗ್ರಾಮದ ಮುಖಂಡರು ವಾಹನಗಳ ವ್ಯವಸ್ಥೆ ಮಾಡಿದ್ದರು. ಅನೇಕ ಮತಗಟ್ಟೆಗಳಲ್ಲಿ ಸೆಲ್ಫೀ ಪಾಯಿಂಟ್ ಮಾಡಲಾಗಿತ್ತು. ಮತ ಚಲಾಯಿಸಿದ ನಂತರ ಸೆಲ್ಫೀ ಪಾಯಿಂಟ್ ಗೆ ಜನರು ಬಂದು ಫೋಟೋ ತೆಗೆಸಿಕೊಂಡು ತಮ್ಮ ಸಾಮಾಜಿಕ ಜಾಲತಾಣಗಳಿಗೆ ಹಂಚಿಕೊಂಡು, ಸಂಭ್ರಮಿಸಿದರು.

ಶಾಲೆ, ಕಾಲೇಜುಗಳು, ಅಂಗನವಾಡಿ ಕೇಂದ್ರಗಳು, ಸಂಘ-ಸಂಸ್ಥೆಗಳ ಭವನಗಳು, ವಿವಿಧ ಸರ್ಕಾರಿ ಕಚೇರಿಗಳು, ಹಾಸ್ಟೆಲ್‌ಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬೆಳಗ್ಗೆ 6ರಿಂದಲೇ ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಇವಿಎಂಗಳನ್ನು ಸಜ್ಜುಗೊಳಿಸಿ, ಪ್ರಾಯೋಗಿಕ ಪರೀಕ್ಷೆ ನಡೆಸಿದರು. ಅನಂತರ ಎಲ್ಲವೂ ಸರಿಯಾಗಿದೆಯೆಂಬುದು ಖಾತ್ರಿಯಾದ ನಂತರ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. ಚುನಾವಣೆ ಹಿನ್ನೆಲೆ ಜಿಲ್ಲಾ ಕೇಂದ್ರದಲ್ಲಿ ವಾಣಿಜ್ಯ, ವ್ಯಾಪಾರ ಕೇಂದ್ರಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚಿ, ವ್ಯಾಪಾರಸ್ಥರು ಮತಗಟ್ಟೆಗಳ ಬಳಿ ಸಾಗಿದರು. ಬೆಳಗ್ಗೆಯಿಂದಲೇ ಮತದಾರರು ತಮ್ಮ ಮತಗಟ್ಟೆ ಬಳಿ ಸರದಿಯಲ್ಲಿ ನಿಂತು ಮತ ಚಲಾವಣೆ ಮಾಡಿದರು.

ಒಂದೊಂದು ಕೇಂದ್ರಗಳ ಬಳಿ ಕನಿಷ್ಠ 2ರಿಂದ 3 ಮತಗಟ್ಟೆ ಸ್ಥಾಪಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗೆ ಆಸ್ಪದ ಇಲ್ಲದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮತಗಟ್ಟೆ ಸುತ್ತ 100 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿತ್ತು. ಇದರ ಸೂಚಕವಾಗಿ ಕೆಂಬಾವುಟಗಳನ್ನು ಅಳವಡಿಸಲಾಗಿತ್ತು. ಅಯಾ ಪಕ್ಷಗಳ ಏಜೆಂಟರು ಮತಗಟ್ಟೆ ಬಳಿ ಮತಪಟ್ಟಿಯಲ್ಲಿ ಮತದಾರರ ಹೆಸರು, ಕ್ರಮಸಂಖ್ಯೆ ಹುಡುಕುವ ಕೆಲಸ ಮಾಡಿ, ತಮ್ಮ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದರು.ಯಾವುದೇ ಮತಕೇಂದ್ರಗಳಲ್ಲಿ ಅಡೆತಡೆ ಅಷ್ಟಾಗಿ ಕಂಡುಬರಲಿಲ್ಲ. ಕೆಲವೆಡೆ ಮತದಾರರು ತಮ್ಮ ಹೆಸರು ಸಿಗದೇ ಅಕ್ಕಪಕ್ಕದಲ್ಲಿ ಇದ್ದ ಮತ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ಹುಡುಕಲು ಮುಂದಾಗಿದ್ದರು. ಕೆಲ ಮತಗಟ್ಟೆಗಳಿಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಬೆಳಗ್ಗೆಯಿಂದಲೇ ತೆರಳಿ ಮತದಾರರಿಗೆ, ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಿದರು. ಒಟ್ಟಾರೆ ಮಧ್ಯಾಹ್ನದವರೆಗೆ ಚುನಾವಣೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುಗಮವಾಗಿ ನಡೆದವು.

- - -

ಬಾಕ್ಸ್‌ ಎಲ್ಲೆಲ್ಲಿ, ಎಷ್ಟೆಷ್ಟು ಮತದಾನ? ಇಡೀ ಕ್ಷೇತ್ರದಲ್ಲಿ ರಾತ್ರಿ 8.10ರ ಸಮಯದಲ್ಲಿ ಸುಮಾರು ಶೇ.77ರಷ್ಟು ಮತದಾನವಾಗಿದ್ದು, ಕಳೆದ ಬಾರಿಗಿಂತಲೂ ಹೆಚ್ಚು ಮತದಾನವಾಗುವ ನಿರೀಕ್ಷೆ ಇಧೆ. ಜಗಳೂರು ಕ್ಷೇತ್ರದಲ್ಲಿ ಶೇ.77.23, ಹರಪನಹಳ್ಳಿಯಲ್ಲಿ ಶೇ.76.97, ದಾವಣಗೆರೆ ಉತ್ತರದಲ್ಲಿ ಶೇ.69.60, ದಾವಣಗೆರೆ ದಕ್ಷಿಣದಲ್ಲಿ ಶೇ.70.01, ಹರಿಹರ ಶೇ.79.45, ಮಾಯಕೊಂಡ ಶೇ.82.96, ಚನ್ನಗಿರಿ ಶೇ.79.05, ಹೊನ್ನಾಳಿ ಶೇ.81.90ರಷ್ಟು ಮತದಾನವಾಗಿದೆ.

- - - ಕೋಟ್‌

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ರಾತ್ರಿ 8 ಗಂಟೆವರೆಗೆ ಸುಮಾರು ಶೇ.77ರಷ್ಟು ಮತದಾನವಾದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಂತಿಮ ಹಂತದ ಮತದಾನದ ಅಂಕಿ ಅಂಶಗಳು ಲಭ್ಯವಾದ ನಂತರ ನಿಖರವಾಗಿ ಮಾಹಿತಿ ಸಿಗಲಿದೆ

- ಡಾ.ಎಂ.ವಿ. ವೆಂಕಟೇಶ, ಜಿಲ್ಲಾ ಚುನಾವಣಾಧಿಕಾರಿ

- - - -(ಫೋಟೋ ಕಳಿಸಲಾಗಿದೆ).