ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಹಾಲ್ಕುರಿಕೆ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್‌ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸೋಮವಾರ ರಾತ್ರಿ ಊಟ ಸೇವಿಸಿದ 9 ಮಕ್ಕಳು ವಾಂತಿ ಹಾಗೂ ಹೊಟ್ಟೆ ನೋವಿನಿಂದ ಅಸ್ವಸ್ಥಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ನಡೆದಿದೆ.ವಿದ್ಯಾರ್ಥಿಗಳು ಎಂದಿನಂತೆ ಸೋಮವಾರ ರಾತ್ರಿ ಊಟ ಮಾಡಿದ್ದು ಆದರಲ್ಲಿ ವಿದ್ಯಾರ್ಥಿಗಳಾದ ಪಾರ್ಥ, ಗಣೇಶ್, ಮಹಂತೇಶ್, ವಿನಯ್, ಪಂಪಣ್ಣ ಮತ್ತಿತರ ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡಿದ್ದರು. ಆದರೆ ವಾರ್ಡನ್ ಹಾಸ್ಟೆಲ್‌ನಲ್ಲಿ ಇರದ ಕಾರಣ ಚಿಕಿತ್ಸೆ ಕೊಡಿಸುವುದು ತಡವಾಗಿದೆ. ವಿಷಯ ತಿಳಿದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ವಿದ್ಯಾರ್ಥಿಗಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಂಡಿದ್ದರಿಂದ ಚಿಕಿತ್ಸೆ ಕೊಡಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸಿದ ವಿದ್ಯಾರ್ಥಿಗಳನ್ನು ಆಸ್ಪತ್ರೆಯಿಂದ ಮಂಗಳವಾರ ಬೆಳಿಗ್ಗೆ ಹಾಸ್ಟೆಲ್‌ಗೆ ಕರೆತಂದು ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕಿ ತ್ರಿವೇಣಿಯವರು ಇಲಾಖೆ ಹಾಗೂ ನಾಲ್ಕೈದು ಹಾಸ್ಟೆಲ್ ಜವಾಬ್ದಾರಿ ಹೊತ್ತಿದ್ದರೂ ಸ್ಥಳೀಯವಾಗಿ ಕೇಂದ್ರ ಸ್ಥಾನದಲ್ಲಿ ವಾಸವಿಲ್ಲದೆ ದೂರದ ಬೇರೆ ಊರಿನಲ್ಲಿ ವಾಸವಿದ್ದು ಅವರು ಸರಿಯಾದ ಸಮಯಕ್ಕೆ ಕಚೇರಿಗೂ ಬಾರದೆ ಹಾಸ್ಟೆಲ್‌ಗಳ ಬಗ್ಗೆ ನಿಗಾ ಸಹ ವಹಿಸದೆ ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿರುವುದೂ ಸಹ ಈ ಘಟನೆ ನಡೆಯಲು ಕಾರಣವಾಗಿದೆ ಎಂಬುದು ಪೋಷಕರು ಹಾಗೂ ವಿದ್ಯಾರ್ಥಿಗಳ ಆಕ್ರೋಶವಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಯಾವುದೇ ಹಾಸ್ಟೆಲ್‌ನ ವಾರ್ಡನ್‌ಗಳು ಹಾಸ್ಟೆಲ್‌ಗೆ ದಿನದಲ್ಲಿ ಒಂದೆರಡು ಸಲ ಬೇಜವಾಬ್ದಾರಿಯಾಗಿ ಬಂದು ಹೋಗುತ್ತಿರುವುದು ಮತ್ತು ಅಡುಗೆಯವರ ಮೇಲೆಯೇ ಎಲ್ಲಾ ಜವಾಬ್ದಾರಿ ವಹಿಸಿರುವುದು ಸಹ ಇಂತಹ ದುರ್ಘಟನೆಗಳು ನಡೆಯಲು ಕಾರಣವಾಗಿದೆ. ಎಂಬುದು ಪೋಷಕರು ಹಾಗೂ ವಿದ್ಯಾರ್ಥಿಗಳ ದೂರಾಗಿದೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಘಟನೆ ನಡೆದಿದ್ದು ವಿದ್ಯಾರ್ಥಿಗಳು ದೂರದ ಊರುಗಳಿಂದ ಬಂದು ಹಾಸ್ಟೆಲ್‌ನಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದು, ಇಂತಹ ಘಟನೆಗಳಿಂದ ಹೆತ್ತ ತಂದೆ ತಾಯಿಗಳಿಗೆ ಆತಂಕ ಉಂಟಾಗುತ್ತಿದೆ. ಮಕ್ಕಳು ಹಾಸ್ಟೆಲ್‌ಲ್ಲಿ ಊಟ ಮಾಡಿಲ್ಲ ಎಂದು ಸಬೂಬು ಹೇಳಿ ತಮ್ಮ ಜವಾಬ್ದಾರಿಯಿಂದ ನುಣಿಚಿಕೊಳ್ಳಲು ಪ್ರಯತ್ನಿಸುತ್ತಿರುವ ಅಧಿಕಾರಿಗಳು ಮಕ್ಕಳನ್ನು ಏಕೆ ಹೊರಗಡೆ ಬಿಟ್ಟಿರಿ. ಅವರು ಹೊರಗೆ ಊಟ ಮಾಡಲು ಏನು ಕಾರಣ ಎಂಬುದೂ ಸಹ ಪೋಷಕರ ಆಕ್ರೋಶವಾಗಿದೆ. ಸರ್ಕಾರ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿದ್ದರೂ ಇಲ್ಲಿನ ಅಧಿಕಾರಿಗಳ ಉದಾಸೀನತೆ, ಬೇಜವಾಬ್ದಾರಿತನ ಎದ್ದು ಕಾಣುತ್ತಿದ್ದು ಜಿಲ್ಲಾಧಿಕಾರಿಗಳು ಕೂಡಲೆ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಇಲ್ಲಿನ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಸ್ವಸ್ಥಗೊಂಡಿರುವ ಮಕ್ಕಳ ಪೋಷಕರು ಒತ್ತಾಯಿಸಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಡಾ. ರಾಧಿಕ ಹಾಗೂ ಕೃಷ್ಣಮೂರ್ತಿ ನೇತೃತ್ವದ ತಂಡ ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳ ರಕ್ತದ ಮಾದರಿ ಹಾಗೂ ಹಾಸ್ಟೆಲ್‌ನಲ್ಲಿ ತಯಾರಿಸಿದ ಆಹಾರದ ಮಾದರಿಗಳನ್ನ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದರು. ಈ ವೇಳೆ ಜಂಟಿ ನಿರ್ದೇಶಕ ಕೃಷ್ಣಪ್ಪ ಮಾತನಾಡಿ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಸ್ಥಳಕ್ಕೆ ಉಪವಿಭಾಗಾಧಿಕಾರಿ ಸಪ್ತಶ್ರೀ ಭೇಟಿ ನೀಡಿ ಪರಿಶೀಲಿಸಿ, ಸಮಾಜ ಕಲ್ಯಾಣ ಇಲಾಖೆಯ ಬೇಜವಾಬ್ದಾರಿ ಸಹಾಯಕ ನಿರ್ದೇಶಕಿ ತ್ರಿವೇಣಿಯವರಿಗೆ ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು.