ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ ಭ್ರಷ್ಟಚಾರಿ, ಕ್ರಿಮಿನಲ್ ವ್ಯಕ್ತಿತ್ವ ಉಳ್ಳವರಾಗಿದ್ದು ವೈಯಕ್ತಿಕ ದ್ವೇಷ ಸಾಧನೆಗೆ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬು ವಾಲಿ ಆರೋಪಿಸಿದರು.ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿಯವರ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಕಾಮಗಾರಿ, ಕಾರ್ಯ ಯೋಜನೆಗಳ ತನಿಖೆ ನಡೆದು ಅಕ್ರಮದ ಮೇಲ್ನೋಟದ ಹಿನ್ನೆಲೆಯಲ್ಲಿ ಪ್ರಾಧಿಕಾರದ ಅಂದಿನ ಆಯುಕ್ತರನ್ನು ಅಮಾನತು ಮಾಡಿ ಅಧ್ಯಕ್ಷ ಬಾಬು ವಾಲಿ ವಿರುದ್ಧ ತನಿಖೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರ ಉತ್ತರ ನೀಡಿತ್ತು.
ಈ ವಿಷಯವಾಗಿ ಗುರುವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಾಬು ವಾಲಿ, ವೈಯಕ್ತಿಕ ದ್ವೇಷ ಹಾಗೂ ಹಗೆತನ ಸಾಧಿಸಲು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದಾರೆ ಅದು ಅಸಾಧ್ಯದ ಮಾತು, ನಾನು ಎಳ್ಳಷ್ಟೂ ತಪ್ಪು ಮಾಡಿಲ್ಲ ಮತ್ತು ವೈಯಕ್ತಿಕ ಆದೇಶಗಳನ್ನು ಎಂದಿಗೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.ಕಳೆದ 2021ರಿಂದ 2023ರ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಯಾರಿಗೂ ಗೊತ್ತಿಲ್ಲದ ಬುಡಾ ಬಗ್ಗೆ ಜನರು ಸಾಕಷ್ಟು ತಿಳಿದುಕೊಳ್ಳುವಂಥ ಪಾರದರ್ಶಕ ಆಡಳಿತವನ್ನು ಜಾರಿಗೆ ತಂದಿದ್ದೇನೆ. ಆದರೆ, ಅರಳಿ ಅವರು ಅದನ್ನು ದುರುಪಯೋಗ ಪಡಿಸಿಕೊಂಡು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದಿನ ಬೆಳಗಾದರೆ ಬುಡಾ ಬುಡಾ ಎಂದು ಮನವಿ ಸಲ್ಲಿಸುತ್ತಲೇ ಇದ್ದಾರೆ. ನಾನು ಅಧ್ಯಕ್ಷನಾಗಿದ್ದ ಸಮಯದಲ್ಲಿ ಅರಳಿ ಕೂಡ ಪ್ರಾಧಿಕಾರದ ಪದನಿಮಿತ್ತ ಸದಸ್ಯರಾಗಿದ್ದು ಎಲ್ಲ ನಿರ್ಣಯಗಳನ್ನು ಪ್ರಾಧಿಕಾರದ ಸಭೆಯಲ್ಲಿ ಪ್ರಸ್ತಾಪಿಸಿ ಬಹುಮತದ ಮೇಲೆ ನಿರ್ಣಯ ಕೈಗೊಂಡಿದ್ದೇನೆ ಹೊರತು ಏಕ ಪಕ್ಷೀಯ ನಿರ್ಧಾರ ನನ್ನ ಅವಧಿಯಲ್ಲಿ ನಡೆದಿಲ್ಲ. ಅರಳಿ ಅವರೂ 10 ಸಭೆಗಳ ಪೈಕಿ 6-7ರಲ್ಲಿ ಹಾಜರಿದ್ದರು. 2 ಸಭೆಗೆ ಗೈರು ಆದರೆ ಮತ್ತೊಂದು ಸಭೆಗೆ ಬಂದರೂ ಸಹಿ ಹಾಕದೆ ವಾಪಸ್ಸಾಗಿದ್ದಾರೆ ಎಂದರು.ನಾನು ಅಧಿಕಾರಕ್ಕೇರುವಾಗ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಆದಾಯ 1.48 ಕೋಟಿ ರು. ಇದ್ದದ್ದು ನಾನು ಅಧಿಕಾರ ಬಿಟ್ಟು ಬರುವ ಸಮಯದಲ್ಲಿ 23ಕೋಟಿ ರು.ಗೆ ತಲುಪಿದೆ. ಬಿಎಸ್ ಯಡಿಯೂರಪ್ಪ ಬಡಾವಣೆ ನಿರ್ಮಿಸಿ, ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರದೊಂದಿಗೆ ಲಾಟರಿ ಎತ್ತುವ ಮೂಲಕ ಸಂಪೂರ್ಣ ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸ್ಥಾಪಿಸಲಾದ ಸಿದ್ಧರಾಮಯ್ಯ ಲೇಔಟ್‌ನಲ್ಲಿ ನಿವೇಶನ ಪಡೆದವರು ಇಂದಿಗೂ ದಾಖಲೆಗಾಗಿ ಓಡಾಡುತ್ತಿದ್ದಾರೆ ಎಂದರು.
ಅರಳಿ ಸಹೋದರರಿಂದ ಕೋಟ್ಯಂತರ ರು. ಆಸ್ತಿ ಗಳಿಕೆ, ಅಕ್ರಮ ತನಿಖೆಯಾಗಲಿ: ಅರಳಿ ಅವರ ಹಿರಿಯ ಸಹೋದರ ಸೂರ್ಯಕಾಂತ ಅರಳಿ ಕೋಟ್ಯಂತರ ಹಣದಿಂದ ಚಿದ್ರಿ ರಸ್ತೆಯಲ್ಲಿ ಬಾರ್ ನಿರ್ಮಿಸಿದ್ದಾರೆ. ಅವರ ಕಿರಿಯ ಸಹೋದರ ಡಾ. ಗೌತಮ ಅರಳಿ 14 ವರ್ಷಗಳಿಂದ ಒಂದೇ ಜಿಲ್ಲೆಯಲ್ಲಿ ನಾಲ್ಕೈದು ಇಲಾಖೆಗಳ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲ ಅರಳಿ ಅವರು ತಮ್ಮ ಪ್ರಭಾವ ಬಳಿಸಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಅರಳಿ ಹಾಗೂ ಅವರ ಸಹೋದರರು ಎಷ್ಟು ಆಕ್ರಮ ಆಸ್ತಿ ಗಳಿಸಿದ್ದಾರೆ ಎಂಬುವದರ ಲೋಕಾಯುಕ್ತ ತನಿಖೆಯಾಗಲಿ ಹಾಗೆಯೇಕಾ ಆಡಳಿತಾತ್ಮಕ ತನಿಖೆ ಮಾಡಲು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಬಾಬು ವಾಲಿ ಹೇಳಿದರು.