ಸುಂದರ ಬದುಕಿಗೆ ಉತ್ತಮ ಹವ್ಯಾಸ ಸಹಕಾರಿ: ಗವಿಸಿದ್ದೇಶ್ವರ ಶ್ರೀ

| Published : Aug 19 2024, 12:47 AM IST

ಸಾರಾಂಶ

ಪ್ರಪಂಚಕ್ಕೆ ಬಂದ ನಾವು ಯಾತ್ರಿಗಳು. ಜೀವನದ ವಿಕಾಸಕ್ಕೆ ಸಹಕಾರ ಅಗತ್ಯವಾಗಿದೆ.

ಹೊಸಪೇಟೆ: ಈ ಜೀವನ ಭಗವಂತ ನೀಡಿದ ಆಶೀರ್ವಾದ. ನಾವು ಸುಂದರ ಬದುಕು ಸಾಗಿಸಲು ಉತ್ತಮ ಹವ್ಯಾಸ ಹಾಗೂ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಅನುಕರಣೀಯವಾಗಿ ಬದುಕಬೇಕು ಎಂದು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದ ಗೃಹ ನಿರ್ಮಾಣ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಭಾನುವಾರ ಮಾತನಾಡಿದ ಅವರು, ಪ್ರಪಂಚಕ್ಕೆ ಬಂದ ನಾವು ಯಾತ್ರಿಗಳು. ಜೀವನದ ವಿಕಾಸಕ್ಕೆ ಸಹಕಾರ ಅಗತ್ಯವಾಗಿದೆ. ಆ ಭಗವಂತ ನೀಡಿದ ಸಹಕಾರ ಒಮ್ಮೆ ಸ್ಮರಣೆ ಮಾಡಿದರೆ ಸಾಕು. ನಾವು ಸುಂದರವಾಗಿ ಬದುಕಬಹುದು. ನಮ್ಮ ಹವ್ಯಾಸ, ಸಂಸ್ಕಾರ ನಮ್ಮ ಮುಂದಿನ ಪೀಳಿಗೆಗೆ ಅನುಕರಿಸುವುದರಿಂದ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.

ಮಾಜಿ ಸಚಿವ ಆನಂದ ಸಿಂಗ್ ಮಾತನಾಡಿ, ಸಮಾಜದ ಪ್ರತಿಯೊಬ್ಬರು ತಮ್ಮ ಬೆಳವಣಿಗೆಯ ಸಹಕಾರ ಪಡೆದು ಬೆಳೆದ ಮೇಲೆ ಸಮಾಜಕ್ಕೆ ನಾವು ಕೊಡುಗೆ ನೀಡಬೇಕು. ನಾವು ಬೆಳೆಯತ್ತಿದ್ದಂತೆ ನಮ್ಮ ಕಾಲೆಳೆಯುವವರು ಹೆಚ್ಚಾಗುತ್ತಾರೆ. ಆದರೂ ನಾವು ಧೃತಿಗೆಡದೇ ಮುನ್ನುಗ್ಗಿ ಸಮಾಜಮುಖಿ ಕಾರ್ಯ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ, ಇಂದು ಮನೆ ಕಟ್ಟುವುದು ಸುಲಭವಾಗಿದೆ. ಆದರೆ ಮನಸ್ಸು ಕಟ್ಟುವುದು ಕಷ್ಟವಾಗಿದೆ. ಸದ್ಯ ನಾವು ಮನಸ್ಸು ಕಟ್ಟುವ ಕೆಲಸ ಮಾಡಬೇಕಿದೆ ಎಂದರು.

ಶತಮಾನ ಕಂಡ ಸಹಕಾರಿ ಚಳವಳಿ ಕುರಿತು ಹಿರಿಯ ಸಹಕಾರಿ ವಿಶ್ವನಾಥ ಚ.ಹಿರೇಮಠ ಮಾತನಾಡಿ, ಸಹಕಾರಿ ಚಳವಳಿ ತನ್ನದೇ ಆದ ಮಹತ್ವವಿದೆ. ಸನ್ನಿವೇಶಕ್ಕೆ ತಕ್ಕಂತೆ ನಮ್ಮ ಆಲೋಚನೆ ಬದಲಾಯಿಸುವ ಮಾರ್ಗದರ್ಶನ ಮಾಡಬೇಕಾಗಿದೆ. ಇಲವಾದರೆ ನಮ್ಮ ಅಸ್ತಿತ್ವವೇ ಇಲ್ಲವಾಗುತ್ತದೆ. ನಮ್ಮ ಭಾಗದ ಹೊಸಪೇಟೆಯ ಸಿಟಿ ಕೋ ಆಪರೇಟಿವ್ ಬ್ಯಾಂಕ್, ಬಿಡಿಸಿಸಿ ಬ್ಯಾಂಕ್ ಹಾಗೂ ಗೃಹ ನಿರ್ಮಾಣ ಸಹಕಾರಿ ಸಂಘ ಸ್ಥಾಪನೆಯ ಹಿಂದೆ ಒಂದು ದೂರದೃಷ್ಟಿ ಇತ್ತು. ಇದು ನಿಜಕ್ಕೂ ಅನುಕರಣೀಯವಾಗಿದೆ ಎಂದರು.

ಸಂಘದ ಅಧ್ಯಕ್ಷ ಗೊಗ್ಗ ವಿಶ್ವನಾಥ ಮಾತನಾಡಿ, ಹೊಸಪೇಟೆ ಗೃಹ ನಿರ್ಮಾಣ ಸಹಕಾರಿ ಸಂಘ ರಾಜ್ಯದಲ್ಲಿ ಪ್ರಥಮ ಗೃಹ ನಿರ್ಮಾಣ ಸಹಕಾರ ಸಂಘವಾಗಿದೆ. ಈ ಸಂಘ ಸಾಮಾನ್ಯ ಜನರ ಕನಸನ್ನು ನನಸು ಮಾಡಲು ಅನೇಕ ಹಿರಿಯರು ಶ್ರಮಿಸಿದ್ದಾರೆ. ನಮ್ಮ ಅವಧಿಯಲ್ಲಿ ಶತಮಾನೋತ್ಸವ ಆಚರಣೆಯಾಗುತ್ತಿರುವುದು ಸಂತಸ ತಂದಿದೆ. ನಾವು ಸಮಾಜಮುಖಿ ಕಾರ್ಯಗಳ ಮೂಲಕ ಮುನ್ನಡೆಸುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಹೊಸಪೇಟೆಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರನ್ನು, ಸಹಕಾರಿಯಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಸನ್ಮಾನಿಸಲಾಯಿತು. ಸಮಾರಂಭದ ವೇದಿಕೆಯಲ್ಲಿ ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೇಸರಿಮಠ, ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಅಶ್ವಿನ್ ಕೊತ್ತಂಬರಿ, ಉಪಾಧ್ಯಕ್ಷ ಕಾಕುಬಾಳ ರಾಜೇಂದ್ರ ಮತ್ತಿತರರಿದ್ದರು. ಕಲಾವಿದ ಅಭಿನಂದನ್‌ ನಿಂದ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಶ್ರಾವಣಿ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಸಹಕಾರಿ ಧುರೀಣರು, ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು.