ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮಿಮ್ಸ್ ಆಸ್ಪತ್ರೆಯಲ್ಲಿ ದಿನವೂ ಭೂರಿ ಭೋಜನ..! ವಾರದಲ್ಲಿ ಏಳೂ ದಿನವೂ ಶುಚಿ ಮತ್ತು ರುಚಿಯಾದ ಆಹಾರ ವಿತರಣೆ, ದಿನಕ್ಕೊಂದು ಮಾದರಿಯ ತಿಂಡಿ-ಊಟ. ಊಟದ ಜೊತೆಗೆ ಮೊಟ್ಟೆ, ಮೊಳಕೆ ಕಾಳು, ವಿವಿಧ ಹಣ್ಣುಗಳನ್ನು ನೀಡುವ ಮೂಲಕ ರೋಗಿಗಳಿಗೆ ಸುಲಭವಾಗಿ ಜೀರ್ಣವಾಗುವ, ಪೌಷ್ಟಿಕಾಂಶದಿಂದ ಕೂಡಿದ ಮತ್ತು ದೇಹಕ್ಕೆ ಶಕ್ತಿ ನೀಡುವ ಹಗುರವಾದ ಆಹಾರವನ್ನು ಉಚಿತವಾಗಿ ಕೊಡುವ ಮೂಲಕ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.

ರೋಗಿಗಳ ಊಟಕ್ಕಾಗಿಯೇ ವಾರ್ಷಿಕ ೧.೭೫ ಕೋಟಿ ರು. ಹಣವನ್ನು ಖರ್ಚು ಮಾಡಲಾಗುತ್ತಿದೆ. ಒಳರೋಗಿಗಳಾಗಿ ದಾಖಲಾಗುವವರಿಗೆ ಮಾತ್ರ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ನೀಡಲಾಗುತ್ತಿದೆ. ಜೊತೆಗೆ ಕಾಫಿ, ಬ್ರೆಡ್‌ನ್ನೂ ಸಹ ನೀಡುತ್ತಿರುವುದರಿಂದ ರೋಗಿಗಳು ಕೂಡ ಹೊರಗಿನ ಊಟಕ್ಕೆ ಕಾಯದೆ ಆಸ್ಪತ್ರೆಯಲ್ಲಿ ನೀಡುವ ಊಟವನ್ನೇ ಸವಿಯುತ್ತಾ ಖುಷಿಯಿಂದ ಇದ್ದಾರೆ.

ಒಂದು ದಿನಕ್ಕೆ ಒಬ್ಬ ರೋಗಿಗೆ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ೧೬೮ ರು. ಖರ್ಚು ಮಾಡಲಾಗುತ್ತಿದೆ. ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡುವುದಕ್ಕೆ ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಜಿ.ಶಿವಕುಮಾರ್ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ.


ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ನಿತ್ಯದ ಮೆನು ಚಾರ್ಟ್ ಸಿದ್ಧಪಡಿಸಿದ್ದಾರೆ. ಆ ಪ್ರಕಾರವೇ ನಿತ್ಯ ಅಡುಗೆ ತಯಾರಿಸಿ ರೋಗಿಗಳಿಗೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರತಿದಿನ ತಯಾರಿಸುವ ಆಹಾರವನ್ನು ನಿರ್ದೇಶಕರು ಮತ್ತು ವೈದ್ಯಕೀಯ ಅಧೀಕ್ಷಕರು ಪರೀಕ್ಷಿಸಿ ನಂತರವೇ ರೋಗಿಗಳಿಗೆ ನೀಡಲಾಗುತ್ತಿದೆ. ತಿಂಡಿ ಮತ್ತು ಊಟ ಶುಚಿ-ರುಚಿಯಾಗಿರುವುದರಿಂದ ವ್ಯರ್ಥವಾಗುತ್ತಿಲ್ಲ.

ರೋಗಿಗಳಿಗೆ ನೀಡುವ ಆಹಾರವೇನು?

ಬೆಳಗಿನ ಉಪಾಹಾರಕ್ಕೆ ಸೋಮವಾರ ಪೊಂಗಲ್, ಚಟ್ನಿ, ಮಂಗಳವಾರ ೩ ರವಾ ಇಡ್ಲಿ, ಬುಧವಾರ ಉಪ್ಪಿಟ್ಟು, ಗುರುವಾರ ೩ ರವಾ ಇಡ್ಲಿ, ಶುಕ್ರವಾರ ಮೆಂತ್ಯಾ ಪಲಾವ್, ಶನಿವಾರ ಪೊಂಗಲ್, ಭಾನುವಾರ ತರಕಾರಿ ಬಾತ್. ಇದರೊಂದಿಗೆ ಬಾಳೆಹಣ್ಣು, ಪರಂಗಿಹಣ್ಣು, ಖರಬೂಜ, ಕಲ್ಲಂಗಡಿ ಸೇರಿದಂತೆ ಎಲ್ಲಾ ಹಣ್ಣುಗಳನ್ನು ನೀಡಲಾಗುತ್ತದೆ. ಜೊತೆಗೆ ಹಾಲು-ಕಾಫಿ ಇರುತ್ತದೆ.

ಊಟಕ್ಕೆ ಚಪಾತಿ, ಗೋಧಿ ದೋಸೆ, ಅನ್ನ, ಸಾಂಬರ್, ಪಲ್ಯ, ಮೊಸರು, ಸೊಪ್ಪು, ವಿವಿಧ ತರಕಾರಿಗಳ ಸಾಂಬಾರ್, ಮೊಳಕೆ ಕಾಳುಗಳು, ಮೊಟ್ಟೆ ನೀಡಲಾಗುತ್ತದೆ. ಸಂಜೆ ಕಾಫಿ, ಟೀ, ಹಾಲು ಗೋಧಿ ಬ್ರೆಡ್‌ನ್ನು ರೋಗಿಗಳಿಗೆ ನೀಡಲಾಗುವುದು.

ರಾತ್ರಿ ಚಪಾತಿ, ಸಾಂಬಾರ್, ಅನ್ನ, ರಸಂ, ಹಣ್ಣುಗಳ ಸಲಾಡ್, ತರಕಾರಿಗಳಾದ ಸೌತೆಕಾಯಿ, ಕ್ಯಾರೆಟ್, ಟಮೋಟ ಸಲಾಡ್, ಮೊಳಕೆ ಕಾಳುಗಳು, ಮಿಶ್ರ ಹಣ್ಣುಗಳ ಸಲಾಡ್‌ನ್ನು ತಯಾರಿಸಿ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿರುವ ಕ್ಷಯ ರೋಗಿಗಳಿಗೆ ಮತ್ತು ಗರ್ಭಿಣಿಯರಿಗೆ ಮೊಳಕೆ ಕಾಳು ಮತ್ತು ಮೊಟ್ಟೆಯನ್ನು ಕೊಡಲಾಗುತ್ತಿದೆ.

ಆಹಾರದಲ್ಲಿ ಗುಣಮಟ್ಟವಿರಲಿಲ್ಲ

ಈ ಹಿಂದೆ ಆಸ್ಪತ್ರೆ ಸಿಬ್ಬಂದಿಗಳಿಂದ ಅಡುಗೆ ತಯಾರಿಸಲಾಗುತ್ತಿತ್ತು. ರೋಗಿಗಳಿಗೆ ಅನ್ನ, ಸಾಂಬಾರ್, ಬ್ರೆಡ್ ಮಾತ್ರ ನೀಡಲಾಗುತ್ತಿತ್ತು. ಜೊತೆಗೆ ಆಸ್ಪತ್ರೆಗಳಲ್ಲಿ ಅಡುಗೆ ತಯಾರಿಸಲು ಪ್ರತ್ಯೇಕ ಅಡುಗೆಯವರು ಇರಲಿಲ್ಲವಾದ್ದರಿಂದ ಗುಣಮಟ್ಟದ ಆಹಾರ ರೋಗಿಗಳಿಗೆ ಸಿಗುತ್ತಿರಲಿಲ್ಲ. ಅಡುಗೆ ಸಿಬ್ಬಂದಿ ಮತ್ತು ಊಟ ಬಡಿಸುವವರೂ ಇರಲಿಲ್ಲ. ಹೆಚ್ಚಿನ ರೋಗಿಗಳು ಆಸ್ಪತ್ರೆ ಸಿಬ್ಬಂದಿ ತಯಾರಿಸಿದ ಊಟವನ್ನೇ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ರೋಗಿಗಳಿಗೆ ತಯಾರಿಸಿದ ಆಹಾರವೆಲ್ಲವೂ ವ್ಯರ್ಥವಾಗುತ್ತಿತ್ತು.

ಡಾ.ಪಿ.ನರಸಿಂಹಸ್ವಾಮಿ ಅವರು ನಿರ್ದೇಶಕರಾದ ಬಳಿಕ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿದರು. ಈಗ ರೋಗಿಗಳಿಗೆ ತಯಾರಿಸುವ ಆಹಾರವನ್ನು ಹೊರಗಿನವರಿಗೆ ಗುತ್ತಿಗೆ ನೀಡಲಾಗಿದೆ. ಆಸ್ಪತ್ರೆಯ ಆಂತರಿಕ ಸಂಪನ್ಮೂಲಗಳಿಂದ ಊಟದ ಖರ್ಚನ್ನು ಭರಿಸಲಾಗುತ್ತಿದೆ. ಪ್ರತಿ ತಿಂಗಳು ೮೦ ಲಕ್ಷ ರು.ನಿಂದ ೧ ಕೋಟಿ ರು.ವರೆಗೆ ಆಂತರಿಕ ಸಂಪನ್ಮೂಲ ಸಂಗ್ರಹವಾಗುತ್ತಿದೆ. ಈ ಹಣದಲ್ಲಿ ಆಸ್ಪತ್ರೆಯ ದುರಸ್ತಿ ಕಾಮಗಾರಿ, ಔಷಧ ಖರೀದಿ, ಸಣ್ಣಪುಟ್ಟ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.

ರೋಗಿಗಳಿಗೆ ನಾವು ನೀಡುವ ಆಹಾರ ಗುಣಮಟ್ಟದಿಂದ ಕೂಡಿರಬೇಕು. ಪೌಷ್ಟಿಕಾಂಶದಿಂದ ಕೂಡಿದ ದೇಹದ ಶಕ್ತಿಯನ್ನು ಹೆಚ್ಚಿಸುವ ಆಹಾರ ನೀಡುವುದಕ್ಕಾಗಿ ಪ್ರತ್ಯೇಕ ಮೆನು ಚಾರ್ಟ್ ರೂಪಿಸಿದ್ದೇವೆ. ಅದರಂತೆಯೇ ಊಟ ನೀಡಲಾಗುತ್ತಿದೆ. ರೋಗಿಗಳ ಕಡೆಯವರು ಹೊರಗಿನಿಂದ ಊಟ ತರುವ ಅವಶ್ಯಕತೆಯೇ ಇಲ್ಲ. ಪ್ರತಿಯೊಬ್ಬರೂ ಊಟ ಪಡೆದು ಖುಷಿಯಿಂದ ಸೇವಿಸುತ್ತಿದ್ದಾರೆ.

-ಡಾ.ಪಿ.ನರಸಿಂಹಸ್ವಾಮಿ, ನಿರ್ದೇಶಕರು, ಮಿಮ್ಸ್

ರೋಗಿಗಳ ಒಳ್ಳೆಯ ಆಹಾರ ನೀಡಬೇಕೆನ್ನುವುದು ನಮ್ಮ ಧ್ಯೇಯ. ಅದಕ್ಕಾಗಿ ನಿತ್ಯವೂ ಮಿಶ್ರ ತರಕಾರಿ, ಕಾಳು, ಬೇಳೆ, ಸೊಪ್ಪಿನಿಂದ ಕೂಡಿದ ಸಾಂಬಾರ್, ಪಲ್ಯ, ಮೊಟ್ಟೆ, ಮೊಳಕೆ ಕಾಳುಗಳನ್ನು ನೀಡಲಾಗುತ್ತಿದೆ. ಗುಣಮಟ್ಟದಲ್ಲಿ ರಾಜಿ ಇಲ್ಲ. ನಿತ್ಯ ತಯಾರಾಗುವ ಆಹಾರವನ್ನು ನಿರ್ದೇಶಕರ ಸಮ್ಮುಖದಲ್ಲಿ ಪರೀಕ್ಷಿಸಿ ಶುಚಿ-ರುಚಿಯನ ನು ಖಚಿತಪಡಿಸಿಕೊಂಡು ನೀಡುತ್ತಿದ್ದೇವೆ.

- ಡಾ.ಜಿ.ಶಿವಕುಮಾರ್, ವೈದ್ಯಕೀಯ ಅಧೀಕ್ಷಕರು, ಮಿಮ್ಸ್

ನಾವು ಮೂರು ದಿನದಿಂದ ಆಸ್ಪತ್ರೆಯಲ್ಲಿದ್ದೇವೆ. ತಿಂಡಿ-ಊಟ ಚೆನ್ನಾಗಿದೆ. ಸಮಯಕ್ಕೆ ಸರಿಯಾಗಿ ಊಟ ಸಿಗುತ್ತಿದೆ. ಹೊರಗಿನಿಂದ ಊಟ ತರಿಸಿಕೊಳ್ಳುವುದಿಲ್ಲ. ಇಲ್ಲಿ ಕೊಡುವುದನ್ನೇ ತಿನ್ನುತ್ತಿದ್ದೇವೆ.

- ವನಿತಾ, ರೋಗಿ

ಆಸ್ಪತ್ರೆಯಲ್ಲಿ ಊಟ-ತಿಂಡಿಗೆ ತೊಂದರೆ ಇಲ್ಲ. ದಿನಾ ಒಂದೊಂದು ರೀತಿ ತಯಾರಿಸಿ ನೀಡುತ್ತಿದ್ದಾರೆ. ಮೊಳಕೆಕಾಳು, ಮೊಟ್ಟೆಯನ್ನೂ ಕೊಡುತ್ತಿದ್ದಾರೆ. ಸಂಬಂಧಿಕರು ಊಟ ತರುವುದಾಗಿ ಹೇಳಿದರೂ ನಾವೇ ಬೇಡ ಎನ್ನುತ್ತಿದ್ದೇವೆ.

- ಅನಿತಾ, ರೋಗಿ