ಪರ್ತಗಾಳಿ ಮಠದ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ಧೂರಿ ಸ್ವಾಗತ

| Published : Nov 16 2025, 02:30 AM IST

ಪರ್ತಗಾಳಿ ಮಠದ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ಧೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವತಿಯಿಂದ ಬದರಿನಾಥಧಾಮದಿಂದ ಅ.೧೯ರಂದು ಹೊರಟ ಶ್ರೀರಾಮ ದಿಗ್ವಿಜಯ ರಥಯಾತ್ರೆ ಶನಿವಾರ ಸಂಜೆ ಪಟ್ಟಣದ ರಾಘವೇಂದ್ರ ಸ್ವಾಮಿ ಮಠದ ಎದುರು ಆಗಮಿಸಿದ್ದು, ರಥಯಾತ್ರೆಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಭಟ್ಕಳ

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವತಿಯಿಂದ ಬದರಿನಾಥಧಾಮದಿಂದ ಅ.೧೯ರಂದು ಹೊರಟ ಶ್ರೀರಾಮ ದಿಗ್ವಿಜಯ ರಥಯಾತ್ರೆ ಶನಿವಾರ ಸಂಜೆ ಪಟ್ಟಣದ ರಾಘವೇಂದ್ರ ಸ್ವಾಮಿ ಮಠದ ಎದುರು ಆಗಮಿಸಿದ್ದು, ರಥಯಾತ್ರೆಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಸ್ಥಾಪನೆಯ ೫೫೦ನೇ ವರ್ಷದ ಆಚರಣೆಯ ಅಂಗವಾಗಿ ಹಮ್ಮಿಕೊಂಡ ೫೫೦ ಕೋಟಿ ಶ್ರೀ ರಾಮ ಜಪ ಯಜ್ಞ ಪೂರ್ಣಗೊಂಡಿದ್ದು, ಇದರ ಅಂಗವಾಗಿ ಶ್ರೀ ಮಠದ ಶ್ರೀರಾಮ ದಿಗ್ವಿಜಯ ರಥ ಯಾತ್ರೆ ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಸಂಚರಿಸಿ ಭಟ್ಕಳಕ್ಕೆ ಆಗಮಿಸುತ್ತಿರುವಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಬಳಿ ಆಗಮಿಸಿದ ರಥಕ್ಕೆ ಮೆರವಣಿಗೆಯ ಮೂಲಕ ಪುಷ್ಪಾಂಜಲಿ ಸರ್ಕಲ್‌ ಬಳಿಯಿಂದ ವಡೇರ ಮಠಕ್ಕೆ ಆಗಮಿಸಿತು. ವಡೇರ ಮಠದಲ್ಲಿ ರಥಕ್ಕೆ ಪೂಜೆ ಸಲ್ಲಿಸಿ ಅಲ್ಲಿಂದ ವಡೇರ ಮಠದ ಆವರಣದಲ್ಲಿ ರಥಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾತ್ರಿ ೮ ಗಂಟೆಯಿಂದ ರಾಮಲೀಲಾ ಕಥಾ, ಝೇಂಕಾರ ಮೆಲೋಡಿಸ್ ತಂಡದಿಂದ ಭರತನಾಟ್ಯ, ಸೌಮ್ಯ ಹಾಗೂ ರಿತಿಕಾ ಕಿಣಿ ಸಂಗಡಿಗರಿಂದ ರಾಮನ ಕುರಿತ ನೃತ್ಯ ರೂಪಕ ಗಮನ ಸೆಳೆಯಿತು. ಸಾಂಪ್ರದಾಯಿಕ ಉಡುಗೆ, ಭಜನೆಯೊಂದಿಗೆ ರಥಾರೂಢ ಮಾರುತಿ ಲಕ್ಷ್ಮಣ ಸಹಿತ ಶ್ರೀ ಸೀತಾಪತಿ ರಾಮಚಂದ್ರರ ಮೆರವಣಿಗೆ ಪಟ್ಟಣದಲ್ಲಿ ಗಮನ ಸೆಳೆಯಿತು. ಗಿಂಡಿ ನೃತ್ಯ, ಭಜನೆ, ಕೀರ್ತನೆ, ಪುಟ್ಟ ಮಕ್ಕಳ ಸಹಿತರಾಗಿ ರಾಮ ಲಕ್ಷಣ ಹನುಮಂತ ದೇವರ ಉಡುಗೆ ತೊಡುಗೆಯ ಟ್ಯಾಬ್ಲೊಗಳು ಆಕರ್ಷಕವಾಗಿತ್ತು. ನಂತರ ನಡೆದ ಸುಡುಮದ್ದು ಪ್ರದರ್ಶನ ಜನರ ಆಕರ್ಷಣೆಯಾಗಿತ್ತು. ಭಟ್ಕಳ ತಾಲೂಕಿನಲ್ಲಿ ೮ ಜಪಕೇಂದ್ರಗಳಿದ್ದು ಎಲ್ಲಾ ಜಪಕೇಂದ್ರಕ್ಕೂ ರಥ ತೆರಳಿ ಪೂಜೆ ಸ್ವೀಕರಿಸಲಿದೆ. ಭಾನುವಾರ ಬೆಳಗ್ಗೆ ತಿರುಮಲ ದೇವಸ್ಥಾನ, ಕಾಮಾಕ್ಷಿ ದೇವಸ್ಥಾನ, ರಘುನಾಥ ದೇವಸ್ಥಾನಕ್ಕೆ ಬಂದು ಅಲ್ಲಿ ಪೂಜೆ ಸ್ವೀಕರಿಸಿ ಬಳಿಕ ವೆಂಕಟಾಪುರಕ್ಕೆ ತೆರಳಲಿದೆ. ಹಿಮಾಲಯದ ಬದರಿಕಾಶ್ರಮದಿಂದ ಪ್ರಾರಂಭಗೊಂಡ ಶ್ರೀ ರಾಮ ದಿಗ್ವಿಜಯ ರಥ ಯಾತ್ರೆಗೆ ಸಮಾಜ ಬಾಂಧವವರು ಅದ್ಧೂರಿಯಾಗಿಯೇ ಸ್ವಾಗತಿಸಿದರು. ರಾತ್ರಿ ಶ್ರೀ ರಾಮದೇವರ ಪೂಜೆ ನಡೆದ ಬಳಿಕ ಅನ್ನಸಂತರ್ಪಣೆ ಸೇವೆಯಲ್ಲಿ ಸಾವಿರಾರು ಜನರ ಪಾಲ್ಗೊಂಡಿದ್ದರು.