ಸಾರಾಂಶ
ಸಮಾಜದಲ್ಲಿ ದಲಿತ ಸಂಘಟನೆಗಳ ಜವಾಬ್ದಾರಿ ಮಹತ್ತರವಾಗಿದೆ. ಸಂಘಟನೆಗಳನ್ನು ಸ್ಥಾಪಿಸುವುದು ಸುಲಭ. ಆದರೆ ತತ್ವ, ಸಿದ್ಧಾಂತದ ಜೊತೆಗೆ ನಿರಂತರವಾಗಿ ಮುನ್ನಡೆಸುವುದು ಸುಲಭವಲ್ಲ. ದಲಿತ ಸಂಘಟನೆಗಳ ಸ್ಥಾಪನೆ ಉತ್ತಮ ಬೆಳವಣಿಗೆ. ದಲಿತ ಸಂಘಟನೆಗಳಿಗೆ ಎಲ್ಲ ಜನಾಂಗದ ಪ್ರೋತ್ಸಾಹ ಸಿಗಬೇಕು. ಅಂಬೇಡ್ಕರ್ ಸೇನೆಗೆ ಸದಾ ಸ್ಪಂದಿಸಲು ಸಿದ್ಧ ಎಂದು ಭದ್ರಾವತಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ, ಭದ್ರಾವತಿ
ಸಮಾಜದಲ್ಲಿ ದಲಿತ ಸಂಘಟನೆಗಳ ಜವಾಬ್ದಾರಿ ಮಹತ್ತರವಾಗಿದೆ. ಸಂಘಟನೆಗಳನ್ನು ಸ್ಥಾಪಿಸುವುದು ಸುಲಭ. ಆದರೆ ತತ್ವ, ಸಿದ್ಧಾಂತದ ಜೊತೆಗೆ ನಿರಂತರವಾಗಿ ಮುನ್ನಡೆಸುವುದು ಸುಲಭವಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್ ಅಭಿಪ್ರಾಯಪಟ್ಟರು.ನಗರದ ಬಸವೇಶ್ವರ ವೃತ್ತ, ಮಾಚಿದೇವ ಕಲ್ಯಾಣ ಮಂಟಪದಲ್ಲಿ ರಾಜ್ಯ ಅಂಬೇಡ್ಕರ್ ಸೇನೆ ವತಿಯಿಂದ ಭಾನುವಾರ ಜಿಲ್ಲಾ ಘಟಕ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ದಲಿತ ಸಂಘಟನೆಗಳ ಸ್ಥಾಪನೆ ಉತ್ತಮ ಬೆಳವಣಿಗೆ. ದಲಿತ ಸಂಘಟನೆಗಳಿಗೆ ಎಲ್ಲ ಜನಾಂಗದ ಪ್ರೋತ್ಸಾಹ ಸಿಗಬೇಕು. ಅಂಬೇಡ್ಕರ್ ಸೇನೆಗೆ ಸದಾ ಸ್ಪಂದಿಸಲು ಸಿದ್ಧ ಎಂದರು.
ಪ್ರಸ್ತುತ ಸಂದರ್ಭದಲ್ಲಿ ಬಸವಣ್ಣ, ಛತ್ರಪತಿ ಶಿವಾಜಿ, ಅಂಬೇಡ್ಕರ್ ಹೀಗೆ ಒಬ್ಬೊಬ್ಬ ಮಹಾನೀಯರು, ದಾರ್ಶನಿಕರನ್ನು ಒಂದೊಂದು ಸಮಾಜಕ್ಕೆ ಸೀಮಿತಗೊಳಿಸುವಂತಹ ಪರಿಸ್ಥಿತಿ ಎದುರಾಗಿದೆ. ಆದರೆ, ಯಾವುದೇ ಮಹಾನೀಯರನ್ನು ಕೇವಲ ಜಾತಿಗೆ ಸೀಮಿತಗೊಳಿಸಬಾರದು. ಬದಲಿಗೆ ಎಲ್ಲ ವರ್ಗದವರು ನಮ್ಮವರೆಂದು ಭಾವಿಸುವುದು ಮುಖ್ಯ ಎಂದು ತಿಳಿಸಿದರು.ದಲಿತ ಸಂಘಟನೆಗಳಿಗೆ ಎಲ್ಲ ಸಮಾಜದವರ ನೈತಿಕ ಬೆಂಬಲ ಅಗತ್ಯ. ನೈತಿಕ ಬೆಂಬಲ ದೊರೆತಾಗ ಮಾತ್ರ ದಲಿತಪರ ಹೋರಾಟಗಳು ಯಶಸ್ವಿಯಾಗುತ್ತವೆ. ದಲಿತರ ಏಳಿಗಾಗಿ ಸರ್ಕಾರ ಮಾತ್ರವಲ್ಲದೇ, ಸಮಾಜದ ಇತರ ವರ್ಗಗಳು ಸಹ ಕೈಜೋಡಿಸಬೇಕು. ಇಂದಿನ ಸಮಾನತೆಗೆ ಅಂಬೇಡ್ಕರ್ ಕಾರಣ ಎಂಬುದನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಬಿ.ಕೆ. ಜಗನ್ನಾಥ್, ಉಪನ್ಯಾಸಕ ಡಾ. ಬಿ.ಜಿ. ಧನಂಜಯ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಸದಸ್ಯರಾದ ಚನ್ನಪ್ಪ, ಜಾರ್ಜ್, ಮಾಜಿ ಅಧ್ಯಕ್ಷೆ ಸುಧಾಮಣಿ, ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ.ಮೂರ್ತಿ, ಜಿಲ್ಲಾಧ್ಯಕ್ಷ ಟಿ.ಎಂ. ಮಂಜುನಾಥ್, ರಾಜ್ಯ ಕಾರ್ಯದರ್ಶಿ ರಾಕೇಶ್, ಮುಖಂಡರಾದ ನರಸಿಂಹಮೂರ್ತಿ, ಗಣೇಶ್, ರುಕ್ಷ್ಮಿಣಿಯಮ್ಮ, ಸೆಲ್ವರಾಜ್, ಅಂತೋಣಿ ವಿಲ್ಸನ್, ಅಬ್ದುಲ್ ಖದೀರ್, ಶಿವಣ್ಣ, ತೀರ್ಥ, ಕರಿಸ್ವಾಮಿ, ಆಂಜನಪ್ಪ, ಇಂದ್ರೇಶ್, ನಾರಾಯಣ್ ಐಹೊಳೆ ಹಲವರು ಹಾಜರಿದ್ದರು. ಡಾ. ಬಿ.ಜಿ.ಧನಂಜಯ ಉಪನ್ಯಾಸ ನೀಡಿದರು.- - - -ಡಿ25-ಬಿಡಿವಿಟಿ2:
ಭದ್ರಾವತಿಯ ಮಾಚಿದೇವ ಕಲ್ಯಾಣ ಮಂಟಪದಲ್ಲಿ ಅಂಬೇಡ್ಕರ್ ಸೇನೆ ಜಿಲ್ಲಾ ಘಟಕವನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್ ಉದ್ಘಾಟಿಸಿದರು.