ಸಾರಾಂಶ
ಹುಬ್ಬಳ್ಳಿ:
ಬೀದಿಬದಿ ವ್ಯಾಪಾರಸ್ಥರ ಕುಂದುಕೊರತೆ ಆಲಿಕೆ, ಮಳಿಗೆ ಹಂಚಿಕೆ ಕುರಿತಾಗಿ ಕರೆದಿದ್ದ ಸಭೆ ಪ್ರತಿಭಟನೆ ಸ್ವರೂಪ ಪಡೆದ ಪ್ರಸಂಗ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ನಡೆಯಿತು.8 ತಿಂಗಳು ಬಳಿಕ ಕರೆಯಲಾಗಿದ್ದ ಮಹಾನಗರದ ಬೀದಿಬದಿ ವ್ಯಾಪಾರಿಗಳನ್ನು ಪ್ರತಿನಿಧಿಸುವ ಪಟ್ಟಣ ಮಾರಾಟ ಸಮಿತಿ (ಟಿವಿಸಿ-ಟೌನ್ ವೆಂಡಿಂಗ್ ಕಮಿಟಿ)ಯ ಸಭೆಯಲ್ಲಿ ಮಹಾನಗರ ಪಾಲಿಕೆಯ ಉದಾಸೀನ, ಬೇಜವಾಬ್ದಾರಿ ಧೋರಣೆ ಖಂಡಿಸಲಾಯಿತು.
ಸಮಿತಿ ಸದಸ್ಯ ಜಾವೇದ್ ಟಿನ್ವಾಲೆ ಮಾತನಾಡಿ, ಧಾರವಾಡದ ಕಾಮತ್ ಹೊಟೇಲ್ ವೃತ್ತದ ಬಳಿ ಪುನರ್ವಸತಿ ಕಲ್ಪಿಸದೇ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ ಪ್ರಕರಣದಲ್ಲಿ ಹಿಂದಿನ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ನ್ಯಾಯಾಲಯದಲ್ಲಿ ಕ್ಷಮೆ ಕೋರಿದ್ದಾರೆ. ಆದರೆ, ಇದಕ್ಕೆ ಸಂಬಂಧಪಟ್ಟಂತೆ ವಲಯ ಕಚೇರಿ ನಂ. 2ರ ಅಂದಿನ ಸಹಾಯಕ ಆಯುಕ್ತ ಎಂ.ಬಿ. ಸಬರದ ವಿರುದ್ಧ ಕಾನೂನು ಕ್ರಮಕೈಗೊಂಡಿಲ್ಲ ಎಂದು ವಿಷಯ ಪ್ರಸ್ತಾಪಿಸಿ ಘೋಷಣೆ ಕೂಗುತ್ತ ಪ್ರತಿಭಟನೆಗೆ ಇಳಿದರು. ಆದಂಸಾಬ್ ಮುಲ್ಲಾನವರ, ಇಸ್ಮಾಯಿಲ್ ಬಿಳೇಪಸಾರ, ಇನ್ನಿತರ ಸದಸ್ಯರು ಸಾಥ್ ನೀಡಿದರು.ಇದೇ ವೇಳೆ ಹಠಾತ್ ಸಭೆಗೆ ಆಗಮಿಸಿದ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಇದು ಸಭೆ ನಡೆಸುವ ಪದ್ಧತಿ ಅಲ್ಲ. ಸಭೆ ಮುಂದುವರಿಸಬೇಕಾದರೆ ತಕ್ಷಣ ಪ್ರತಿಭಟನೆ ಬಿಟ್ಟು ನಿಮ್ಮ ಆಸನದಲ್ಲಿ ಹೋಗಿ ಕುಳಿತುಕೊಳ್ಳಿ ಎಂದು ಕಿವಿಮಾತು ಹೇಳಿದರು. ಬಳಿಕ ಟಿವಿಸಿ ಸದಸ್ಯರು ಪ್ರತಿಭಟನೆ ಕೈ ಬಿಟ್ಟು ಆಸನದಲ್ಲಿ ಕುಳಿತರು.
ಮಾರ್ಕಿಂಗ್ ಮಾಡುತ್ತೇವೆ:ಅವಳಿ ನಗರದಲ್ಲಿ 41 ವ್ಯಾಪಾರಿ ವಲಯ ಗುರುತಿಸಲಾಗಿದೆ. ವಲಯ ಕಚೇರಿ ಅಧಿಕಾರಿಗಳು ತಕ್ಷಣ ನಿರ್ದಿಷ್ಟ ವ್ಯಾಪಾರಿ ವಲಯಗಳಲ್ಲಿ ಮಾರ್ಕಿಂಗ್ ಮಾಡಿ ಫಲಕ ಅಳವಡಿಸಬೇಕು. ಕೆಲವೊಂದು ವ್ಯಾಪಾರಿ ವಲಯಗಳ ಸ್ಥಳ ನಿಗದಿ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕಿದೆ. ಪಾರ್ಕಿಂಗ್‌ಗೆ ಸ್ಥಳ ಬಿಡಬೇಕಾಗುತ್ತದೆ. ಈ ಕುರಿತು ಮತ್ತೊಮ್ಮೆ ಸಭೆ ಕರೆದು ಇತ್ಯರ್ಥ ಪಡಿಸೋಣ ಎಂದು ಆಯುಕ್ತರು ತಿಳಿಸಿದರು.
ಸಮಿತಿಯ ನಾಮನಿರ್ದೇಶಿತ ಸದಸ್ಯ ಪ್ರೇಮನಾಥ ಚಿಕ್ಕತುಂಬಳ ಮಾತನಾಡಿ, ಸ್ಮಾರ್ಟ್‌ಸಿಟಿ ಅನುದಾನದಲ್ಲಿ ನಿರ್ಮಿಸಿದ ಜನತಾ ಬಜಾರ ವಾಣಿಜ್ಯ ಸಂಕೀರ್ಣವನ್ನು ವ್ಯಾಪಾರಕ್ಕೆ ಮುಕ್ತಗೊಳಿಸಿಲ್ಲ. ಇಲ್ಲಿ ಮೊದಲು ವ್ಯಾಪಾರ ನಡೆಸುತ್ತಿದ್ದ 177 ಚಿಕ್ಕ ಪುಟ್ಟವ್ಯಾಪಾರಿಗಳಿಗೆ ನೂತನ ಸಂಕೀರ್ಣದ ಸುತ್ತಲಿನ ಖಾಲಿ ಜಾಗದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಗೋಕುಲ ರಸ್ತೆ ನಾಲಾ ಬಳಿ ಇರುವ ಪಾಲಿಕೆ ಒಡೆತನದ ಜಾಗದಲ್ಲಿ ಭವನ ನಿರ್ಮಿಸಬೇಕು ಎಂದು ಆಗ್ರಹಿಸಿದರು.ಡಿಸೆಂಬರ್‌ನಲ್ಲಿ ಟಿವಿಸಿ ಚುನಾಯಿತ ಸದಸ್ಯರ ಅವಧಿ ಮುಗಿಯಲಿದೆ. ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಬೇಕೆಂಬ ನಿಯಮವನ್ನು ಪಾಲಿಕೆ ಪಾಲಿಸಿಲ್ಲ. ವಲಯ ಕಚೇರಿ ಸಹಾಯಕ ಆಯುಕ್ತರು ಟಿವಿಸಿ ಸದಸ್ಯರಿಗೆ ಮರ್ಯಾದೆ ಕೊಡುವುದಿಲ್ಲ. ಹುಬ್ಬಳ್ಳಿ ಬ್ರಾಡ್ ವೇ ರಸ್ತೆಯಲ್ಲಿ ಎರಡು ಕಡೆ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಸದಸ್ಯರು ಹೇಳಿದರು.
ಅಧೀಕ್ಷಕ ಎಂಜಿನಿಯರ್ ಇ. ತಿಮ್ಮಪ್ಪ, ಉಪ ಆಯುಕ್ತ (ಕಂದಾಯ) ಆನಂದ ಕಲ್ಲೋಳಿಕರ, ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ, ಸಮಿತಿ ಸದಸ್ಯರಾದ ನಿರ್ಮಲಾ ಹಂಜಗಿ, ಪ್ರಕಾಶ ಹಳ್ಯಾಳ, ಕವಿತಾ ದೊಡವಾಡ, ಇತರರು ಇದ್ದರು.