ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಪುರಸಭೆಯ 33 ಎಕರೆ ಜಾಗದಲ್ಲಿ ಡಿ.15 ರಿಂದ 21ರವರೆಗೆ 7 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಗಣ್ಯರು, ಲಕ್ಷಾಂತರ ಜನರು, ಭಕ್ತರು ಕೂಡಲೇ ಬೃಹತ್ ವೇದಿಕೆ ನಿರ್ಮಾಣಗೊಳ್ಳುತ್ತಿದೆ.

ಸಿ.ಸಿದ್ದರಾಜು ಮಾದಹಳ್ಳಿ

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದಲ್ಲಿ ಡಿ.15 ರಿಂದ ನಡೆಯಲಿರುವ ಆದಿಜಗದ್ಗುರು ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವಕ್ಕೆ ಕೈಗೊಂಡಿರುವ ಸಕಲ ಸಿದ್ಧತೆಗಳು ನಡೆಯುತ್ತಿವೆ.

ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಪುರಸಭೆಯ 33 ಎಕರೆ ಜಾಗದಲ್ಲಿ ಡಿ.15 ರಿಂದ 21ರವರೆಗೆ 7 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಗಣ್ಯರು, ಲಕ್ಷಾಂತರ ಜನರು, ಭಕ್ತರು ಕೂಡಲೇ ಬೃಹತ್ ವೇದಿಕೆ ನಿರ್ಮಾಣಗೊಳ್ಳುತ್ತಿದೆ.

ಜನರಿಗೆ ಪ್ರಸಾದ ವಿತರಿಸಲು, ವಸ್ತು ಪ್ರದರ್ಶನಕ್ಕೆ ಮಳಿಗೆಗಳು, ಗಣ್ಯ ವ್ಯಕ್ತಿಗಳ ವಾಹನಗಳ ಪಾರ್ಕಿಂಗ್, ಪ್ರವೇಶ ದ್ವಾರ, ನಿರ್ಗಮನ ದ್ವಾರ ಸೇರಿದಂತೆ ಬರುವ ಎಲ್ಲಾ ಭಕ್ತರು, ಜನರಿಗೆ ಮೂಲ ಸೌಲಭ್ಯ ಕಲ್ಪಿಸುವುದು, ಸೂಕ್ತ ಬಂದೋಬಸ್ತ್ ಗೆ ಕ್ರಮ ವಹಿಸಲಾಗುತ್ತಿದೆ.

ಭಾರತೀಯ ಸಂಸ್ಕೃತಿ, ಧಾರ್ಮಿಕತೆ ಹಾಗೂ ಭಾವೈಕ್ಯತೆ ಮೂಡಿಸುವ ದಿಸೆಯಲ್ಲಿ ಜಯಂತಿ ಮಹೋತ್ಸವ ಯಶಸ್ಸಿಗಾಗಿ, ಅರ್ಥಪೂರ್ಣವಾಗಿ ಆಚರಿಸಲು ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಪೀಠಾಧೀಪತಿ ಶಿವರಾತ್ರಿ ದೇಶಿ ಕೇಂದ್ರ ಸ್ವಾಮಿಜಿ ದಿವ್ಯ ಸಾನಿಧ್ಯದಲ್ಲಿ ದೇಗುಲ ಮಠದ ಹಿರಿಯ ಶ್ರೀಮುಮ್ಮಡಿ ನಿರ್ವಾಣ ಸ್ವಾಮಿ ಹಾಗೂ ಕಿರಿಯ ಶ್ರೀ ಡಾ.ಚನ್ನಬಸವಸ್ವಾಮಿ ಸಮ್ಮುಖದಲ್ಲಿ ಸುತ್ತೂರು ಮಠದೊಂದಿಗೆ ಜಿಲ್ಲಾಡಳಿತ, ತಾಲೂಕು ಆಡಳಿತದ ಅಧಿಕಾರಿಗಳು, ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಜಾತ್ರಾ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದು, ಹಲವು ಸಮಿತಿಗಳು ಯಶಸ್ಸಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಮೈಸೂರಿನ ಸುತ್ತೂರಿಗೆ ಸೀಮಿತವಾಗಿದ್ದ ಜಯಂತ್ಯುತ್ಸವ ನಂತರದ ದಿನಗಳಲ್ಲಿ ಭಕ್ತರ ಆಪೇಕ್ಷೆಯಂತೆ ಸಂತೆಸರಗೂರು, ಗುಂಡ್ಲುಪೇಟೆ, ಕೊಳ್ಳೇಗಾಲ, ಚಾಮರಾಜನಗರ, ಕೆ.ಆರ್.ನಗರ, ನಂಜನಗೂಡು, ಟಿ.ನರಸೀಪುರ, ಹಣಸೂರು, ಪಿರಿಯಾಪಟ್ಟಣ, ಯಳಂದೂರು, ಮೈಸೂರು, ಬೆಂಗಳೂರು, ಶಿವಮೊಗ್ಗ ಹಾಗೂ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲೂ ನಡೆದಿತ್ತು. ಈ ಬಾರಿ ಐತಿಹಾಸಿ, ಧಾರ್ಮಿಕ ಕ್ಷೇತ್ರ, ಬೊಪ್ಪೇಗೌಡನಪುರದ ಶ್ರೀ ಮಂಟೇಸ್ವಾಮಿ ಪುಣ್ಯಕ್ಷೇತ್ರ ಮಳವಳ್ಳಿಯಲ್ಲಿ ಆಚರಿಸುತ್ತಿರುವುದು ವಿಶೇಷವಾಗಿದೆ.

ಡಿ.15 ರಂದು ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಯನ್ನು ಸುತ್ತೂರು ಶ್ರೀ ಕ್ಷೇತ್ರದಿಂದ ಬೆಳಗ್ಗೆ 7.30ಕ್ಕೆ ಬೀಳ್ಕೊಟ್ಟು ಟಿ.ನರಸೀಪುರ, ಬೆಳಕವಾಗಿ ಮಾರ್ಗವಾಗಿ ಮಳವಳ್ಳಿ ಪ್ರವಾಸಿ ಮಂದಿರದ ಬಳಿ ಮಂಗಳವಾದ್ಯ ಹಾಗೂ ಜನಪದ ಕಲಾತಂಡದೊಂದಿಗೆ ಶ್ರೀ ಷಡಕ್ಷರದೇವ ಅನುಭವಮಂಟಪಕ್ಕೆ ಕರೆದೊಯ್ಯಲಾಗುವುದು. ಡಿ.16 ರಂದು ಧ್ವಜಾರೋಹಣ ನಂತರ ವೇದಿಕೆ, ಮಂಟಪ ಹಾಗೂ ವಿವಿಧ ಮಹಾದ್ವಾರಗಳ ಉದ್ಘಾಟನೆಯಾಗಲಿದ್ದು, ನಂತರ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ.

ಡಿ.16 ರಂದು ರಾಷ್ಟ್ರಪತಿ ಆಗಮನ ವಿಶೇಷ:

ಜಯಂತಿ ಮಹೋತ್ಸವ ಚಾಲನೆ ನೀಡಲು ತಾಲೂಕಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಡಿ.16 ರಂದು ಮಧ್ಯಾಹ್ನ 3.15ಕ್ಕೆ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಇವರೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೃಷಿ ಸಚಿವ ಚಲುವರಾಯಸ್ವಾಮಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭಾಗಿಯಾಗಲಿದ್ದಾರೆ.

7 ದಿನಗಳ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಿಖಿಲ್ ಕುಮಾರಸ್ವಾಮಿ, ಕೇಂದ್ರ ಸಚಿವ ಶೋಭ ಕಾರಂದ್ಲಾಜೆ ಸೇರಿದಂತೆ ರಾಜ್ಯದ ಸಚಿವರು, ರಾಜಕೀಯ ನಾಯಕರು, ಸಚಿವರು, ಶಾಸಕರು, ಮುಖಂಡರು, ಚಿತ್ರನಟರಾದ ಶಿವರಾಜ್ ಕುಮಾರ್, ಡಾಲಿ ಧನಂಜಯ, ಎನ್.ಎಸ್.ನಾಗಭೂಷಣ ಸೇರಿದಂತೆ ತುಮಕೂರು ಸಿದ್ಧಗಂಗಾ ಮಠ, ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಕಾಗಿನೆಲೆ ಶಾಖಾ ಮಠ ಸೇರಿದಂತೆ ರಾಜ್ಯದ ವಿವಿಧ ಮಠಗಳ ಶ್ರೀಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಡಿ.21ರ ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಕೇಂದ್ರ, ರಾಜ್ಯ ಸರ್ಕಾರಗಳ ಸಚಿವರು, ಶಾಸಕರು, ವಿವಿಧ ಮಠಗಳ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ:

ಜಯಂತ್ಯುತ್ಸವದ ವೇಳೆ 7 ದಿನಗಳ ಕಾಲ ಕಲಾವಿದರಿಂದ ಸಂಗೀತ ಗಾಯನ, ನಾಟಕ, ವಾದ್ಯಗೋಷ್ಠಿ, ಸಂಗೀತ ಸಂಜೆ, ಜನಪದ ಸಂಭ್ರಮ, ವಚನ ನೃತ್ಯರೂಪಕ, ಹಾಸ್ಯ ಕಾರಂಜಿ, ಭಕ್ತಿ ಸಂಗೀತ, ಮಂಟೇಸ್ವಾಮಿ ಕಥಾ ಪ್ರಸಂಗ, ಸಂಗೀತ ಸಂಭ್ರಮದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರ ಜೊತೆಗೆ ಕೃಷಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಅತಿಥಿ ಗಣ್ಯರು ಉಪನ್ಯಾಸ ನೀಡಲಿದ್ದಾರೆ.

ಅಲ್ಲದೇ, ಜಾತ್ರಾ ಮಹೋತ್ಸವ ಭಕ್ತರು, ಜನರಿಗೆ ಉಪಯುಕ್ತವಾಗುವಂತೆ ಮಾಡಲು ನೂರಾರು ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಪೊಲೀಸ್ ಇಲಾಖೆ ಕೂಡ 7 ದಿನಗಳ ಕಾಲ ಗಣ್ಯರು, ಜನರಿಗೆ ಭದ್ರತೆ ಕಲ್ಪಿಸಲು, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕ್ರಮ ವಹಿಸಲು ಸಾವಿರಾರು ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಗೆ ಕ್ರಮ ಕೈಗೊಂಡಿದೆ.