ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪ್ರಧಾನಿ ನರೇಂದ್ರ ಮೋದಿ ಅವರು ದಿನದ 18 ಗಂಟೆಗಳ ನಿರಂತರ ಸೇವೆ ಸಲ್ಲಿಸುತ್ತಾರೆ. ಒಂದು ದಿನವೂ ವಿಶ್ರಾಂತಿ ಪಡೆಯದೆ ದೇಶಕ್ಕಾಗಿ ದುಡಿಯುತ್ತಿರುವ ನಾಯಕರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.ಪಟ್ಟಣದ ಐತಿಹಾಸಿಕ ಕಲ್ಮೇಶ್ವರ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಅವರ ಜನ್ಮದಿನ ಪ್ರಯುಕ್ತ ಬುಧವಾರ ನಡೆದ ಸೇವಾ ಪಾಕ್ಷಿಕ ಸ್ವಚ್ಛತೆ ಹಾಗೂ ವಿಶೇಷ ಪೂಜಾ ಅಭಿಷೇಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುತಂತ್ರ, ಭಾರತ ವಿರೋಧಿ ನೀತಿಯನ್ನು ಪ್ರಧಾನಿ ಮೋದಿ ತಮ್ಮ ಚಾಣಕ್ಷತನದಿಂದ ಎದುರಿಸಿ ದೇಶ ಮುನ್ನಡೆಸುತ್ತಿದ್ದಾರೆ. ಪ್ರಧಾನಿ ಅವರ ತಾಯಿಯನ್ನು ಟೀಕಿಸುವ ಮೂಲಕ ಕಾಂಗ್ರೆಸ್ ತನ್ನ ಸಂಸ್ಕೃತಿ ತೋರಿಸಿಕೊಟ್ಟಿದೆ. ಮೋದಿ ಸಮರ್ಥ ನಾಯಕತ್ವದಿಂದಲೇ ಭಾರತ ಜಾಗತಿಕ ಮಟ್ಟದಲ್ಲಿ ಸದೃಢವಾಗಿ ನಿಂತಿದೆ ಹಾಗೂ ಪ್ರಧಾನಿಯವರಿಗೆ ಆಯುರಾ ಆರೋಗ್ಯ ಭಾಗ್ಯ ನೀಡುವಂತೆ ಪ್ರಾರ್ಥನೆ ಸಲ್ಲಿಸಿ, ಈ ದಿನ ಬಡ ರೋಗಿಗಳಿಗೆ ಹಣ್ಣು ಹಂಪಲು, ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ ಅಸ್ಕಿ, ಜಿಲ್ಲಾ ಕಾರ್ಯದರ್ಶಿ ಹಾಗೂ ಪಪಂ ಉಪಾಧ್ಯಕ್ಷ ರಮೇಶ ಮಸಿಬಿನಾಳ ಅವರು ಮಾತನಾಡಿ, ಭವಿಷ್ಯದ ಭಾರತದ ಅಭ್ಯುದಯಕ್ಕಾಗಿ ಪ್ರಧಾನಿ ಮೋದಿ ಮುಂದಿನ ಬಾರಿಯೂ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ. ದೇಶದ ಒಳಿತಿಗಾಗಿ ನರೇಂದ್ರ ಮೋದಿಯವರಿಗೆ ದೇವರು ಆಯುಷ್ಯ, ಆರೋಗ್ಯ ಭಾಗ್ಯ ನೀಡಿ ಆಶೀರ್ವಾದ ನೀಡಬೇಕೆಂದು ಐತಿಹಾಸಿಕ ಕಲ್ಮೇಶ್ವರ ದೇವಸ್ಥಾನದಲ್ಲಿ ಮಂಡಲದ ಪದಾಧಿಕಾರಿಗಳು ಹಾಗೂ ಮುಖಂಡರಿಂದ ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಮಹಾಂತೇಶ ಬಿರಾದಾರ, ಪ್ರಕಾಶ ದೊಡ್ಡಮನಿ, ಖಜಾಂಚಿ ಸೋಮಶೇಖರ ಹಿರೇಮಠ, ಮುಖಂಡರು ಹಾಗೂ ಪದಾಧಿಕಾರಿಗಳಾದ ಕಲ್ಮೇಶ್ ಬುದ್ನಿ, ಪ್ರಕಾಶ ಡೋಣೂರಮಠ, ವಿಠ್ಠಲ ಯಂಕಂಚಿ, ಶ್ರೀಶೈಲ ಯಂಭತ್ನಾಳ, ಸಚಿನ್ ಕೋರಿ, ಅಭಿಷೇಕ ಅಂಬಲಗಿ, ಪಿಂಟೂ ಬಾಸುತ್ಕರ, ಚೇತನ ಇಂಡಿ ಸೇರಿದಂತೆ ಹಲವಾರು ಜನ ಮುಖಂಡರಿದ್ದರು.