ಇನ್ನರ್ಧ ಟಿಎಂಸಿ ನೀರು ಭೀಮೆಗೆ ಹರಿಸಲು ಮನವಿ

| Published : Apr 04 2024, 01:02 AM IST

ಸಾರಾಂಶ

ನಾರಾಯಣಪೂರ ಜಲಾಶಯದಿಂದ 1 ಟಿಎಂಸಿ ನೀರು ಹರಿಸಿ ಅಫಜಲ್ಪುರ ತಾಲೂಕಿನ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ ಅರ್ಧ ಟಿಎಂಸಿ ನೀರನ್ನು ಇಂಡಿ ಬ್ರಾಂಚ್ ಕೆನಾಲ್ ಮೂಲಕ ಭೀಮಾ ನದಿಗೆ ಹರಿಸಿದರೆ ಈ ಬೇಸಿಗೆ ನಿರಾತಂಕವಾಗಿ ಪಾರಾಗಲು ಸಹಕಾರಿಯಾಗಲಿದೆ.

ಕನ್ನಡಪ್ರಭ ವಾರ್ತೆ ಚವಡಾಪುರ

ಭೀಕರ ಬರಗಾಲ ಆವರಿಸಿ ಸಂಪೂರ್ಣ ಭೀಮಾ ನದಿ ನೀರಿಲ್ಲದೆ ಬರೀದಾಗಿರುವ ಸಂದರ್ಭದಲ್ಲಿ ನಾರಾಯಣಪೂರ ಜಲಾಶಯದಿಂದ 1 ಟಿಎಂಸಿ ನೀರು ಹರಿಸಿ ಅಫಜಲ್ಪುರ ತಾಲೂಕಿನ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ ಅರ್ಧ ಟಿಎಂಸಿ ನೀರನ್ನು ಇಂಡಿ ಬ್ರಾಂಚ್ ಕೆನಾಲ್ ಮೂಲಕ ಭೀಮಾ ನದಿಗೆ ಹರಿಸಿದರೆ ಈ ಬೇಸಿಗೆ ನಿರಾತಂಕವಾಗಿ ಪಾರಾಗಲು ಸಹಕಾರಿಯಾಗಲಿದೆ ಎಂದು ಕೆಪಿಸಿಸಿ ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜೆ.ಎಂ ಕೊರಬು ಅವರು ಶಾಸಕ ಎಂ.ವೈ ಪಾಟೀಲ್ ಅವರ ಮುಖಾಂತರ ರಾಜ್ಯ ಜಲಸಂಪನ್ಮೂಲ ಇಲಾಖೆ ಸಚಿವರಿಗೆ ಮನವಿ ಮಾಡಿಕೊಂಡರು.

ಅವರು ಶಾಸಕ ಎಂ.ವೈ ಪಾಟೀಲ್ ಅವರ ಕಲಬುರಗಿ ನಿವಾಸದಲ್ಲಿ ಮಣೂರ, ಕೂಡಿಗನೂರ, ಶೀವೂರ, ಮಾಶಾಳ, ಉಡಚಣ ಗ್ರಾಮಸ್ಥರೊಂದಿಗೆ ಭೇಟಿಯಾಗಿ ಮಾತನಾಡಿ ಈ ಬಾರಿಯ ಭೀಕರ ಬರಗಾಲ ಹಿಂದೆಂದು ಕಂಡು ಕೇಳರಿಯದಂತದ್ದಾಗಿದ್ದು ಎಲ್ಲಿಯೂ ಹನಿ ನೀರು ಸಿಗುತ್ತಿಲ್ಲ. ಜನ ಜಾನುವಾರುಗಳ ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಅದರಲ್ಲೂ ನದಿ ಪಾತ್ರದಲ್ಲೇ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಮುಖ್ಯವಾಗಿ ಮಣೂರ, ಮಾಶಾಳ, ಕೂಡಿಗನೂರ, ಶೀವೂರ, ಉಡಚಣ ಗ್ರಾಮಗಳ ಜನ, ಜಾನುವಾರುಗಳಿಗೆ ನೀರಿನ ಬವಣೆಯಿಂದ ಬಳಲುವಂತಾಗಿದೆ. ಹೀಗಾಗಿ ಇಂಡಿ ಬ್ರಾಂಚ್ ಕೆನಾಲ್‌ ಮೂಲಕ ಇನ್ನೂ ಅರ್ಧ ಟಿಎಂಸಿ ನೀರನ್ನು ಭೀಮಾ ನದಿಗೆ ಹರಿಸಿದರೆ ಈ ಬೇಸಿಗೆಯಿಂದ ಎಲ್ಲರೂ ಪಾರಾಗಲು ಸಾಧ್ಯವಾಗಲಿದೆ ಎಂದು ಸಮಸ್ಯೆ ಮನವರಿಕೆ ಮಾಡಿದರು.

ಶಾಸಕ ಎಂ.ವೈ ಪಾಟೀಲ್ ಮಾತನಾಡಿ ಇಂಡಿ ಬ್ರಾಂಚ್ ಕೆನಾಲ್ ಮೂಲಕ ಇನ್ನೂ ಅರ್ಧ ಟಿಎಂಸಿ ನೀರು ಭೀಮಾ ನದಿಗೆ ಹರಿಸುವ ನಿಟ್ಟಿನಲ್ಲಿ ಇಂಡಿ ಶಾಸಕ ಯಶ್ವಂತರಾಯಗೌಡ ಪಾಟೀಲ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅಲ್ಲದೆ ಈ ಕುರಿತು ಜಲ ಸಂಪನ್ಮೂಲ ಇಲಾಖೆ ಸಚಿವರಿಗೆ ಮನವರಿಕೆ ಮಾಡುವುದಕ್ಕಾಗಿ ಜೆ.ಎಂ ಕೊರಬು ಅವರನ್ನು ಕರೆದುಕೊಂಡು ಶುಕ್ರವಾರ ಬೆಂಗಳೂರಿಗೆ ತೆರಳಲಿದ್ದೇನೆ. ಆದಷ್ಟು ಎಲ್ಲರಿಗೂ ಸಮಸ್ಯೆ ಮನವರಿಕೆ ಮಾಡಿ ಇನ್ನರ್ಧ ಟಿಎಂಸಿ ನೀರು ಹರಿಸಿ ಜನ ಜಾನುವಾರುಗಳ ಜೀವ ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತದೆ ಎಂದರು.

ಇನ್ನೂ ಭೀಮಾ ನದಿ ಇದೇ ಮೊದಲ ಬಾರಿಗೆ ಇಷ್ಟು ಬರಿದಾಗಿದೆ. ಇದಕ್ಕೆ ಮರಳು ಮಾಫಿಯಾ ಕಾರಣವಾಗಿದೆ. ಮರಳುಗಳ್ಳರು ಇಡೀ ನದಿಯನ್ನೂ ಬರಿದು ಮಾಡಿ ಬಿಟ್ಟಿದ್ದಾರೆ ಹೀಗಾಗಿ ನದಿಯಲ್ಲಿನ ಮರಳೆಲ್ಲ ಬರೀದಾಗಿ ಅಂತರ್ಜಲ ಮಟ್ಟ ಪಾತಾಳ ಸೇರಿಕೊಂಡಿದೆ. ಹೀಗಾಗಿ ಇಂತಹ ಬೇಸಿಗೆ ಸಮಯದಲ್ಲಿ ನೀರಿನ ಅಭಾವದಿಂದ ಜನ, ಜಾನುವಾರುಗಳು ಪರದಾಡುವ ಪರಿಸ್ಥಿತಿ ಬಂದಿದೆ. ಮರಳುಗಳ್ಳರಿಗೆ ಕಡಿವಾಣ ಹಾಕದಿದ್ದರೆ ಭವಿಷ್ಯದಲ್ಲಿ ಇನ್ನೂ ಕೆಟ್ಟ ದಿನಗಳು ಬರಲಿವೆ ಎಂದು ಆತಂಕ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ರೇವಣಸಿದ್ದಪ್ಪ ಉಪ್ಪಿನ, ಶರಣಬಸಪ್ಪ ಅಳ್ಳಗಿ, ಸೀನಪ್ಪ ಮೇತ್ರಿ, ಮಹಾದೇವಗೌಡ ಕರೂಟಿ, ಬಸವರಾಜ ಭೂಶೆಟ್ಟಿ, ವಿಠ್ಠಲ್ ತೇಲಿ ಸೇರಿದಂತೆ ಮಣೂರ, ಕೂಡಿಗನೂರ, ಉಡಚಣ, ಶೀವೂರ ಹಾಗೂ ಮಾಶಾಳ ಗ್ರಾಮಸ್ಥರು ಇದ್ದರು.