ಸಾರಾಂಶ
ಉಡುಪಿ: ರಾಣಿ ಅಬ್ಬಕ್ಕ ಅವರ ಬದುಕಿನ ಬಗೆಗೆ ಇಂದಿನ ಯುವಪೀಳಿಗೆ ಅರಿತು, ಅವರ ಧೈರ್ಯ, ಸಾಹಸ, ದೇಶಪ್ರೇಮ ತಮ್ಮೊಳಗೆ ಮೈಗೂಡಿಸಿಕೊಳ್ಳಬೇಕು ಎಂದು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ವಸಂತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.ಗುರುವಾರ, ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಹಾಗೂ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ಜಂಟಿ ಆಶ್ರಯದಲ್ಲಿ ನಡೆದ ‘ರಾಣಿ ಅಬ್ಬಕ್ಕ-ಯುಗಯುಗಗಳಿಂದ ಧೈರ್ಯದ ಪ್ರತಿಧ್ವನಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಣಿ ಅಬ್ಬಕ್ಕೆ ಮೂಡುಬಿದಿರೆಯ ಚೌಟ ಮನೆತನಕ್ಕೆ ಸೇರಿದವರಾಗಿದ್ದು, 1525 ರಲ್ಲಿ ಜನಿಸಿದ್ದಾರೆ ಎಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ಆದರೆ ಈ ಬಗ್ಗೆ ಅನೇಕ ದ್ವಂದ್ವಗಳಿದೆ. ಆದರೆ ಆಕೆ 40 ವರ್ಷ ನಿರಂತರವಾಗಿ ಪೋರ್ಚುಗೀಸರ ವಿರುದ್ಧ ಹೋರಾಡಿರುವುದು ಸುಳ್ಳಲ್ಲ. ಇದು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದವರು ಬಣ್ಣಿಸಿದರು.ಮೊದಲ ಬಾರಿಗೆ ನೌಕ ಪಡೆಯನ್ನು ಕಟ್ಟಿ, ಪೋರ್ಚುಗೀಸರಿಗೆ ಸೋಲಿನ ರುಚಿ ಉಣಿಸಿದ ವೀರ ಮಹಿಳೆ ಅಬ್ಬಕ್ಕ. ಅವರ ಸಾಹಸಗಾಥೆ ಓದಿ ಇಂದಿನ ಯುವಪೀಳಿಗೆ ಧೈರ್ಯ, ಸಾಹಸವನ್ನು ಕರಗತಮಾಡಿಕೊಳ್ಳಬೇಕು. ಮೊಬೈಲ್ ಎಂಬ ಮಾಯಜಾಲದೊಳಗೆ ಇಂತಹ ಅನೇಕ ಸಂಗತಿಗಳು ಅಡಗಿವೆ ಎಂದರು.ಕೇವಲ ಪಬ್ಜಿ ಆಟ, ಮನರಂಜನೆಗಾಗಿ ಮೊಬೈಲನ್ನು ಬಳಸದೆ, ಇಂತಹ ದೇಶಪ್ರೇಮದ ಸಂಗತಿ ತಿಳಿಯಲು ಬಳಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪ್ರಾಂಶುಪಾಲೆ ಸುರೇಖಾ. ಕೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿಯರಾದ ರಕ್ಷಿತಾ ಸ್ವಾಗತಿಸಿ, ದಿಶಾ ಭಟ್ ನಿರೂಪಿಸಿ, ವಂದಿಸಿದರು. ಪ್ರಾಧ್ಯಾಪಕಿ ಚೈತ್ರಾ ಕುಮಾರಿ ನಿರ್ವಹಿಸಿದರು.