ಸಾರಾಂಶ
ಕಲಾಂ ಜನ್ಮದಿನ । ಉಚಿತ ಆರೋಗ್ಯ ತಪಾಸಣಾ ಶಿಬಿರ । ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಸರಳತೆ, ಪ್ರಾಮಾಣಿಕತೆ, ಮೇರು ವ್ಯಕ್ತಿತ್ವದ ದೇಶಪ್ರೇಮಿ, ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಹಾಗೂ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ವ್ಯಕ್ತಿತ್ವ ಮತ್ತು ನೈತಿಕತೆಯಿಂದ ಕೂಡಿದ ಆದರ್ಶ ಜೀವನ ಅರಿತು ಸಾಗಬೇಕಿದೆ. ಎಪಿಜೆ ಅಬ್ದುಲ್ ಕಲಾಂರ ಆತ್ಮಕಥೆ ‘ವಿಂಗ್ಸ್ ಆಫ್ ಫೈರ್’ ಪುಸ್ತಕ ಓದಿ ಅರ್ಥೈಸಿಕೊಂಡಲ್ಲಿ, ಅದರ ತಾತ್ಪರ್ಯ ನೀಡುವ ಸ್ಫೂರ್ತಿಯು ಸುಂದರ ಬದುಕು ರೂಪಿಸಿಕೊಳ್ಳುವ ಆತ್ಮಸ್ಥೈರ್ಯ ನೀಡುತ್ತದೆ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಟಿಪ್ಪು ಶಾದಿಮಹಲ್‌ನಲ್ಲಿ ಎಪಿಜೆ ಅಬ್ದುಲ್ ಕಲಾಂ ಮುಸ್ಲಿಂ ನೌಕರರ ಸಂಘದವರು ಸಾರ್ವಜನಿಕ ಆಸ್ಪತ್ರೆ ಹಾಗೂ ಜನಪ್ರಿಯ ಆಸ್ಪತ್ರೆ ಸಹಕಾರದಲ್ಲಿ ಆಯೋಜನೆ ಮಾಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಈ ರೀತಿಯ ಕಾರ್ಯಕ್ರಮ ಆಯೋಜನೆ ಉತ್ತಮವಾದ ಕಾರ್ಯವಾಗಿದೆ ಎಂದು ಹೇಳಿದರು.ಹಾಸನ ಜನಪ್ರಿಯ ಆಸ್ಪತ್ರೆಯ ಡಾ.ಅಬ್ದುಲ್ ಬಷೀರ್ ಮಾತನಾಡಿ, ಶುಗರ್ ಹಾಗೂ ಬಿಪಿ ಸಾಮಾನ್ಯ ಕಾಯಿಲೆಯಾದರೂ ಸಹ ಅಗತ್ಯ ಸಮಯದಲ್ಲಿ ಸೂಕ್ತ ಚಿಕಿತ್ಸೆ ಹಾಗೂ ವೈದ್ಯರ ಸಲಹೆ ಹಾಗೂ ಸೂಚನೆಗಳ ಪಾಲನೆ ಮುಖ್ಯವಾಗಿದೆ. ಒಂದು ಮರಕ್ಕೆ ಗೆದ್ದಿಲು ಹೇಗೆ ಮರವನ್ನು ನಾಶ ಮಾಡುತ್ತೋ ಅದೇ ರೀತಿ ಶುಗರ್ ಅಥವಾ ಮಧುಮೇಹ ಮನುಷ್ಯನಿಗೆ ಗೆದ್ದಿಲು ಹುಳವಿದ್ದಂತೆ. ಆದ್ದರಿಂದ ಅಗತ್ಯ ತಪಾಸಣೆ ಜತೆಗೆ ಔಷಧಿಗಳ ಸೇವನೆಯಿಂದ ಯಾವುದೇ ಭಯ ಇಲ್ಲದೇ ಜೀವನ ನಡೆಸಬಹುದು. ಇಂದಿನ ಕಾರ್ಯಕ್ರಮದ ರೀತಿಯಲ್ಲಿ ತಪಾಸಣೆ ಶಿಬಿರಗಳು ನಡೆಯುವಾಗ ಹೋಗಿ ಒಮ್ಮೆ ತಪಾಸಣೆ ಮಾಡಿಸಿಕೊಂಡಲ್ಲಿ ಹೆಚ್ಚಿನ ಅನಾಹುತ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಐಪಿಎಸ್ ಅಧಿಕಾರಿ ಶಾಲೂ, ತಾ.ಆರೋಗ್ಯಾಧಿಕಾರಿ ಡಾ.ರಾಜೇಶ್, ಬಿಇಒ ಸೋಮಲಿಂಗೇಗೌಡ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಿ.ಎಂ.ನಾಗರಾಜ್ ಪ್ರಧಾನ ಭಾಷಣ ಮಾಡಿದರು.ಸಾರ್ವಜನಿಕ ಆಸ್ಪತ್ರೆಯ ಡಾ.ನಾಗೇಂದ್ರ, ಡಾ.ಅಶ್ವತಿ, ಡಾ.ಚಿಂತನಾ ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಮತ್ತು ಜನಪ್ರಿಯ ಆಸ್ಪತ್ರೆಯ ಡಾ.ಮಹಮದ್ ಫಸಲ್, ಡಾ.ಸಚಿನ್, ಡಾ.ವೈಭವ್, ಡಾ ಶಿವಪ್ರಸಾದ್ ಆರೋಗ್ಯ ತಪಾಸಣೆ ನಡೆಸಿದರು.
ಎಪಿಜೆ ಅಬ್ದುಲ್ ಕಲಾಂ ಮುಸ್ಲಿಂ ನೌಕರರ ಸಂಘದ ಅಧ್ಯಕ್ಷ ಸೈಯದ್ ನಿಜಾಂ ಖಾದ್ರಿ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಧನಶೇಖರ್, ಸಮಾಜ ಕಲ್ಯಾಣಾಧಿಕಾರಿ ಕೌಸರ್ ಅಹಮದ್, ಔಷಧ ವರ್ತಕರ ಸಂಘದ ಎನ್.ಜಿ.ಮುಕುಂದ ಹಾಗೂ ಸತೀಶ್, ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಎಚ್.ಎಸ್.ಪಾಷ, ಪುರಸಭಾ ಸದಸ್ಯ ವಾಸಿಂ ಇದ್ದರು.ಸೈಯದ್ ಇಂಬ್ರಾನ್ ಪ್ರಾರ್ಥಿಸಿದರು, ಸುಜಾತ್ ಅಲಿ ಸ್ವಾಗತಿಸಿದರು, ಖಧೀರ್ ಅಹಮದ್ ನಿರೂಪಿಸಿದರು ಹಾಗೂ ಫಯಾಜ್ ಪಾಷ ವಂದಿಸಿದರು.
;Resize=(128,128))
;Resize=(128,128))