ಸಾರಾಂಶ
ಶಿವಮೊಗ್ಗ: ಆಶ್ರಯ ಯೋಜನೆಯಡಿ ಗೋವಿಂದಾಪುರದಲ್ಲಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ, ರಸ್ತೆ, ಬೀದಿ ದೀಪ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲು ದಿನಾಂಕ ನಿಗದಿಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದರು.ಗೋವಿಂದಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಶ್ರಯ ವಸತಿ ಸಮುಚ್ಛಯಕ್ಕೆ ಮಹಾನಗರಪಾಲಿಕೆ ಆಯುಕ್ತರು ಮತ್ತು ಸಂಬಧಿಸಿದ ಇಲಾಖೆಯ ಎಂಜಿನಿಯರ್‌ಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದರು.ಮಹಾನಗರ ಪಾಲಿಕೆಯ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಗೋವಿಂದಾಪುರದಲ್ಲಿ ಒಟ್ಟು 260 ಕೋಟಿ ರು. ಅನುದಾನದಲ್ಲಿ 3000 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ 624 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಇದೀಗ ೬೫೨ ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಮೂಲಭೂತ ಸೌಕರ್ಯಗಳ ಕೆಲಸ ನಡೆಯುತ್ತಿದೆ. ಇದು ಪೂರ್ಣಗೊಂಡ ತಕ್ಷಣ ಫಲಾನುಭವಿಗಳಿಗೆ ಹಂಚಿಕೆ ಮಾಡಲು ದಿನಾಂಕ ನಿಗದಿಗೊಳಿಸಲಾಗುವುದು ಎಂದರು.ಈಗಾಗಲೇ ಹಂಚಿಕೆ ಮಾಡಿರುವ ಮನೆಗಳಿಗೆ ತಾತ್ಕಾಲಿಕ ನೀರು, ವಿದ್ಯುತ್ ನೀಡಲಾಗುತ್ತಿದೆ. ಶಾಶ್ವತ ಕುಡಿಯುವ ನೀರಿನ ಸಂಪರ್ಕ ನೀಡಲು ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಗೆ ತಿಳಿಸಲಾಗಿದೆ. ಶಾಶ್ವತ ವಿದ್ಯುತ್ ಸಂಪರ್ಕ ನೀಡಲು 15 ರಿಂದ 16 ಕೋಟಿ ರು. ಅವಶ್ಯಕತೆ ಇದ್ದು ಅಧಿಕಾರಿಗಳೊಂದಿಗೆ ಮಾತನಾಡಿ ಸರ್ಕಾರದ ಗಮನಕ್ಕೆ ತರಲಾಗಿದೆ. ವಸತಿ ಸಚಿವರೊಂದಿಗೂ ಮಾತನಾಡುತ್ತೇನೆ. ಇನ್ನು 20 ದಿನಗಳ ಒಳಗಾಗಿ ಕಾಮಗಾರಿ ಪೂರ್ಣಗೊಂಡ ಮನೆಗಳಿಗೆ ತಾತ್ಕಾಲಿಕ ನೀರು, ವಿದ್ಯುತ್ ಹಾಗೂ ರಸ್ತೆ, ಚರಂಡಿ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. ಮೂಲಭೂತ ಸೌಕರ್ಯಗಳು ಆದ ತಕ್ಷಣ ವಸತಿ ಹಂಚಿಕೆಗೆ ದಿನಾಂಕ ನಿಗದಿಗೊಳಿಸಲಾಗುವುದು. ರಸ್ತೆ, ಚರಂಡಿ, ಬೀದಿ ದೀಪ, ಬಸ್ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.ಈ ವೇಳೆ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಎಂಜಿನಿಯರ್‌ಗಳು, ಅಧಿಕಾರಿಗಳು, ನಿವಾಸಿಗಳು ಹಾಜರಿದ್ದರು.
ಫ್ರೀಡಂ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಶಿವಮೊಗ್ಗ: ಲೋಕೋಪಯೋಗಿ ಇಲಾಖೆಯಿಂದ ನಗರದ ಅಲ್ಲಮಪ್ರಭು ಉದ್ಯಾನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅಲ್ಲಮ ಪ್ರಭು (ಫ್ರೀಡಂ ಪಾರ್ಕ್) ಉದ್ಯಾನದ ಸರ್ವಾಂಗೀಣ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ನೆರವೇರಿಸಿದರು.ಬಳಿಕ ಸಚಿವರು, ಕ್ರಾಫ್ಟ್ ಆಫ್ ಮಲೆನಾಡು ಮತ್ತು ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ, ಕರಕುಶಲ ಉತ್ಪನ್ನಗಳನ್ನು ಖರೀದಿಸಿ, ಕುಶಲಕರ್ಮಿಗಳನ್ನು ಉತ್ತೇಜಿಸಿದರು. ಹಾಗೂ ತಿಂಡಿ, ತಿನಿಸು ಮಳಿಗೆಯಲ್ಲಿ ತಿನಿಸುಗಳನ್ನು ಸವಿದರು.ಈ ವೇಳೆ ಅವರು ಮಾತನಾಡಿ, ಜಿಲ್ಲೆಯಲ್ಲಿ ಅತ್ಯುತ್ತಮ ಕುಶಲಕರ್ಮಿಗಳು ಇದ್ದು, ಅಚ್ಚುಕಟ್ಟಾಗಿ ಕರಕುಶಲ ಹಾಗೂ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಜಿಲ್ಲೆಯ ಕುಶಲಕರ್ಮಿಗಳು ವಿಶೇಷವಾಗಿ ಮಹಿಳೆಯರು ತಯಾರಿಸಿದ ಉತ್ಪನ್ಮಗಳನ್ನು ಮಾನ್ಯ ಮುಖ್ಯಮಂತ್ರಿಗಳಿಗೂ ನೀಡಿ, ಅವರ ಗಮನ ಸೆಳೆದಿದ್ದೇವೆ. ಮುಂದಿನ ದಿನಗಳಲ್ಲಿ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಶಾಶ್ವತ ಮಳಿಗೆ ತೆರೆಯುವ ಆಲೋಚನೆ ಸಹ ಇದೆ. ಇದರಿಂದ ಸ್ಥಳೀಯ ಕಲಾವಿದರು, ಕುಶಲಕರ್ಮಿಗಳಿಗೆ ಉತ್ತಮ ಮಾರುಕಟ್ಟೆ ಲಭ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸೇರಿದಂತೆ ಮತ್ತಿತರರಿದ್ದರು.