ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನಾನು ರಾಜ್ಯದ ಮುಖ್ಯಮಂತ್ರಿಯಾದರೆ ಪೊಲೀಸರ ಕೈಯಲ್ಲಿ ಎಕೆ-47 ಕೊಡುತ್ತೇನೆ. ದೇಶ ವಿರೋಧಿ ಚಟುವಟಿಕೆ ಮಾಡುವವರನ್ನು ಮಾತನಾಡುವ ಮೊದಲೇ ಗುಂಡು ಹೊಡೆಯಲಾಗುವುದು. ಬರುವ ದಿನಗಳಲ್ಲಿ ದೇಶದಲ್ಲಿ ಯೋಗಿ, ರಾಜ್ಯದಲ್ಲಿ ನಾವು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದ ಜೋಡು ರಸ್ತೆಯಲ್ಲಿ ಹಿಂದು ಮಹಾಗಣಪತಿ ಉತ್ಸವ ಸಮಿತಿಯಿಂದ ಶುಕ್ರವಾರ ನಡೆದ ಎರಡನೇ ವರ್ಷದ ಹಿಂದು ಮಹಾಗಣಪತಿ ವಿಸರ್ಜನೆ ಹಾಗೂ ಬೃಹತ್ ಶೋಭಾಯಾತ್ರೆಯಲ್ಲಿ ಅವರು ಮಾತನಾಡಿದರು.
ನರೇಂದ್ರ ಮೋದಿ ದೇಶದ ಪ್ರಧಾನಮಂತ್ರಿ ಆಗದೇ ಹೋಗಿದ್ದರೆ ಹಿಂದುಗಳು ಅತ್ಯಂತ ಕ್ಲಿಷ್ಟಕರ ಸ್ಥಿತಿಯಲ್ಲಿ ಇರುತ್ತಿದ್ದೆವು. ರಾಜ್ಯದಲ್ಲಿನ ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರ ಸರ್ಕಾರವಾಗಿದೆ. ಹಿಂದುಗಳು ಹಬ್ಬಗಳಿಗೆ ಸರ್ಕಾರದ ಅನುಮತಿ ಪಡೆಯಬೇಕು. ಆದರೆ, ಮುಸ್ಲಿಂ ಹಬ್ಬಗಳಿಗೆ ಅನುಮತಿ ಅಗತ್ಯವಿಲ್ಲ. ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ಮೇಲೆ ಪೆಟ್ರೋಲ್ ಬಾಂಬ್ ಹಾಕಿದರು. ಕಲ್ಲು ಹೊಡೆದರು. ಆದರೆ, ಪೊಲೀಸರು ಹಿಂದುಗಳ ಮೇಲೆ ದೂರು ದಾಖಲಿಸಿದ್ದಾರೆ. ತಿರುಪತಿ ಬಾಲಾಜಿ ಪ್ರಸಾದದಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಹಾಕಿ ಹಿಂದುಗಳ ಪಾವಿತ್ರ್ಯತೆಗೆ ಧಕ್ಕೆ ತರಲಾಯಿತು ಎಂದ ಆರೋಪಿಸಿದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದರೆ ಹಿಂದು ಹಬ್ಬಗಳಿಗೆ ಅನುಮತಿ ಪಡೆಯುವುದನ್ನು ಬಂದ್ ಮಾಡಲಾಗುವುದು. ಆಗ ವಿಜೃಂಭಣೆಯಿಂದ ಹಬ್ಬ ಆಚರಿಸಿ ಎಂದ ಅವರು, ರಾಜ್ಯದಲ್ಲಿ ಹೊಸ ಯುಗ ಪ್ರಾರಂಭವಾಗಲಿದೆ. ಸಿದ್ದರಾಮಯ್ಯನವರು ಮೊದಲು ನಮ್ಮ ಹಿಂದು ದೇವಸ್ಥಾನಗಳಿಗೆ ಹೋಗುತ್ತಿರಲಿಲ್ಲ. ಹಣೆಗೆ ಕುಂಕುಮ ಹಚ್ಚುತ್ತಿರಲಿಲ್ಲ. ಈಗ ಏಕೆ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಕೇರಳದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳು ಜೀವನ ನಡೆಸುವುದೇ ದುಸ್ತರವಾಗಿದೆ. ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆದಾಗ ಮಹಿಳೆಯರು ಪ್ರತಿಭಟಿಸಿ ತಲ್ವಾರ್ ಹಿಡಿದುಕೊಂಡು ಪ್ರತಿಭಟಿಸಿದಾಗ ಶಾಂತವಾಗಿದೆ. ಆ ದೇಶದ ಪ್ರಧಾನಮಂತ್ರಿ ಓಡಿ ಬಂದು ಭಾರತದಲ್ಲಿ ಆಶ್ರಯ ಪಡೆದರು. ಅವರು ಮುಸ್ಲಿಂ ರಾಷ್ಟ್ರಕ್ಕೆ ಹೋಗಲಿಲ್ಲ. ಭಾರತದಲ್ಲಿರುವ ಹಿಂದುಗಳು ಜಾತಿ, ಜಾತಿ ಅಂತ ಬಡಿದಾಡುತ್ತಿದ್ದೇವೆ. ಜಾತಿ ಬಿಟ್ಟು ಎಲ್ಲರೂ ಒಂದಾಗಿ ಹಿಂದು ಸಮಾಜ ಸಂಘಟಿಸಬೇಕಿದೆ ಎಂದು ಕಿವಿಮಾತು ಹೇಳಿದರು.ಸಮಾನ ನಾಗರಿಕ ಕಾಯ್ದೆ ಜಾರಿ: ದೇಶದಲ್ಲಿ ಶೀಘ್ರದಲ್ಲಿಯೇ ಸಮಾನ ನಾಗರಿಕ ಕಾಯ್ದೆ ಜಾರಿಗೆ ಬರಲಿದೆ. ಎಲ್ಲ ನಾಗರಿಕರು ಮುಕ್ತ ಮನಸ್ಸಿನಿಂದ ಬೆಂಬಲ ಸೂಚಿಸುವುದು ಅತ್ಯಅವಶ್ಯವಾಗಿದೆ ಎಂದ ಅವರು, ಭಾರತದಲ್ಲಿ ಹಿಂದುಗಳು ಸುರಕ್ಷಿತವಾಗಿ ಜೀವನ ಸಾಗಿಸಬೇಕಾದರೆ ಒಂದಾಗಿ ಬಲಿಷ್ಠರಾಗಬೇಕಿದೆ. ಹಿಂದುಗಳನ್ನು ಸಂಘಟಿಸಲು ಲೋಕಮಾನ್ಯ ತಿಲಕರು ಸಾರ್ವಜನಿಕ ಗಣೇಶ ಉತ್ಸವ ಆರಂಭಿಸಿದರು. ಅದನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.
ಬೆಳ್ತಂಗಡಿ ಶಾಸಕ ಹರೀಶ ಪೊಂಜಾ ಮಾತನಾಡಿದರು. ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಉದ್ಯಮಿ ವಿಜಯ ಮೆಟಗುಡ್ಡ, ಶಂಕರ ಮಾಡಲಗಿ, ಹಿಂದು ಮಹಾಗಣಪತಿ ಉತ್ಸವ ಸಮಿತಿ ಮುಖಂಡರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಬೃಹತ್ ಶೋಭಾಯಾತ್ರೆ: ಚನ್ನಮ್ಮನ ಸಮಾಧಿ ಸ್ಥಳದಿಂದ ಆರಂಭವಾದ ಗಣೇಶ ವಿಸರ್ಜನೆಯ ಬೃಹತ್ ಶೋಭಾ ಯಾತ್ರೆಯಲ್ಲಿ ಡಿಜೆ ಸಂಗೀತ ನಾದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಯುವಕರು ಕುಣಿದು ಕುಪ್ಪಳಿಸಿದರು. ಶೋಭಾಯಾತ್ರೆ ಉದ್ದಕ್ಕೂ ಕೇಸರಿ ಶಾಲು, ಭಗವಾ ಧ್ವಜ ರಾರಾಜಿಸಿದವು. ಭಾರತ ಮಾತಾ ಕೀ ಜೈ, ದುರ್ಗಾ ಮಾತಾ ಕೀ ಜೈ, ಜೈ ಶ್ರೀರಾಮ, ಜೈ ಹನುಮಾನ್ ಘೋಷಣೆ ಮೊಳಗಿದವು.