ರಾಜ್ಯದ ಎಲ್ಲಾ 6000 ಗ್ರಾಪಂಗಳಿಗೂ ಮಹಾತ್ಮ ಗಾಂಧೀಜಿ ಅವರ ಹೆಸರು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಘೋಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಎಲ್ಲಾ 6000 ಗ್ರಾಪಂಗಳಿಗೂ ಮಹಾತ್ಮ ಗಾಂಧೀಜಿ ಅವರ ಹೆಸರು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಘೋಷಿಸಿದ್ದಾರೆ.

ಕೇಂದ್ರ ಸರ್ಕಾರ ಮನರೇಗಾ ಯೋಜನೆ ರದ್ದುಪಡಿಸಿ ವಿಬಿ ಜಿ ರಾಮ್‌ ಜಿ ಎಂಬ ಹೊಸ ಕಾಯ್ದೆ ಜಾರಿ ವಿರೋಧಿಸಿ ನಗರದಲ್ಲಿ ಮಂಗಳವಾರ ಕಾಂಗ್ರೆಸ್‌ ಪ್ರತಿಭಟನೆ ವೇಳೆ ಈ ಘೋಷಣೆ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿಯವರು ಏನೇ ಮಾಡಿದರೂ ಗಾಂಧೀಜಿ ಹೆಸರು ಅಳಿಸಲು ಆಗುವುದಿಲ್ಲ. ಯೋಜನೆಗಳಿಂದ ಅವರ ಹೆಸರು ತೆಗೆದಾಕ್ಷಣ ಗಾಂಧೀಜಿ ಅವರು ದೇಶಕ್ಕಾಗಿ ಮಾಡಿದ ಹೋರಾಟ, ತ್ಯಾಗ, ಅವರ ತತ್ವ, ಆದರ್ಶಗಳನ್ನು ಈ ಮಣ್ಣಿನ ನೆಲದಿಂದ ಅಳಿಸಲು ಆಗುವುದಿಲ್ಲ. ಅವರು ಅಳಿಸುವ ಕೆಲಸ ಮಾಡಿದರೆ ನಾವು ಪುನರ್‌ ನಾಮಕರಣ ಮಾಡುತ್ತೇವೆ. ಮುಂದಿನ ಬಜೆಟ್‌ನಲ್ಲಿ 6000 ಗ್ರಾಪಂಗಳ ಕಚೇರಿಗೂ ಮಹಾತ್ಮಾ ಗಾಂಧೀಜಿಯವರ ಹೆಸರಿಡುವ ಬಗ್ಗೆ ಘೋಷಿಸಿ ನಂತರ ಜಾರಿಗೆ ತರಲಾಗುವುದು ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ರಾಜ್ಯದ ಎಲ್ಲಾ ಗ್ರಾಪಂಗಳಿಗೆ ಗಾಂಧೀಜಿ ಅವರ ಹೆಸರಿಡಬೇಕೆನ್ನುವುದು ಕಾಂಗ್ರೆಸ್ ಪಕ್ಷದ ತೀರ್ಮಾನ. ಈ ಸಂಬಂಧ ಕೆಪಿಸಿಸಿ ಉಪಾಧ್ಯಕ್ಷ ಉಗ್ರಪ್ಪ ಹಾಗೂ ಇತರೆ ಪದಾಧಿಕಾರಿಗಳ ನೀಡಿದ ಪತ್ರ ಆಧರಿಸಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಗ್ರಾಪಂಗಳಿಗೆ ಗಾಂಧೀಜಿ ಹೆಸರಿಡುವ ಮೂಲಕ ಅವರ ಹೆಸರನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಕೆಲಸ ಮಾಡಲಾಗುವುದು. ಹಳ್ಳಿಗೊಂದು ಶಾಲೆ, ಸಹಕಾರ ಸಂಘ, ಪಂಚಾಯ್ತಿ ಇರಬೇಕು ಎಂಬುದು ಗಾಂಧೀಜಿ ಅವರ ಸಂಕಲ್ಪ ಎಂದು ತಿಳಿಸಿದರು.

ಸುರ್ಜೇವಾಲಾ ಕೂಡ ಮಾತನಾಡಿ, ಸಿದ್ದರಾಮಯ್ಯ ಅವರು ಗ್ರಾಪಂಗಳಿಗೆ ಗಾಂಧಿಜಿ ಅವರ ಹೆಸರಿಡುವ ಮನವಿಯನ್ನು ಪರಿಗಣಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.