ಸೌತೆಕಾಯಿ ಸಂಪೂರ್ಣ ಬೆಳೆ ಕಹಿಯಾಗಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಡಂಬಳ: ಗ್ರಾಮದ ರೈತರೊಬ್ಬರು ಬೆಳೆದಿರುವ ಸೌತೆಕಾಯಿ ಕಹಿಯಾಗಿದ್ದು, ಇದರಿಂದ ಫಸಲನ್ನು ಮಾರುಕಟ್ಟೆಯಲ್ಲಿ ಮಾರಲು ಆಗುತ್ತಿಲ್ಲ. ಖಾಸಗಿ ಕಂಪನಿಯವರು ಕಳಪೆ ಬಿತ್ತನೆ ವಿತರಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಲಕ್ಷಾಂತರ ರು. ನಷ್ಟ ಅನುಭವಿಸಂತಾಗಿದ್ದು, ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಗ್ರಾಮದ ಮಮತಾಜ ಎಂಬವರಿಗೆ ಸೇರಿದ ಸರ್ವೆ ನಂಬರ್ 273 ರ 4 ಎಕರೆ 30 ಗುಂಟೆ ಜಮೀನಿನಲ್ಲಿ ಗುತ್ತಿಗೆ ಪಡೆದಿದ್ದ ರೈತ ಅಸಗರಲಿ ಸರಕಾವಾಸ ಎಂಬವರು ಹುಬ್ಬಳ್ಳಿಯ ಖಾಸಗಿ ಅಂಗಡಿಯೊಂದರಲ್ಲಿ ಸೌತೆಕಾಯಿ ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಮಾಡಿದ್ದರು.

ಇದು 45 ದಿನಗಳ ಬೆಳೆ. ಆದರೆ ಇವರ ಜಮೀನಿನಲ್ಲಿ ಸೌತೆಯು ಫಲ ಕೊಡಲು ಆರಂಭಗೊಳ್ಳುತ್ತಿದ್ದಂತೆ ಪ್ರತಿ ಬಳ್ಳಿಯ ಸೌತೆಕಾಯಿ ಕಹಿಯಾಗಿದ್ದು, ಪ್ರತಿ ಎಕರೆಗೆ 20 ಟನ್ ವರೆಗೆ ಇಳುವರಿ ಬರುತ್ತದೆ ಎಂಬ ಭರವಸೆ ನೀಡಿದ್ದರು. ಆದರೆ ಸೌತೆಕಾಯಿ ಸಂಪೂರ್ಣ ಬೆಳೆ ಕಹಿಯಾಗಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ರೈತ ಅಸಗರಲಿ ಸರಕಾವಾಸ ಉತ್ತಮ ಬೆಳೆ ಬರಲಿದೆ ಎಂಬ ನಿರೀಕ್ಷೆಯಲ್ಲಿ ಬೀಜ, ರಾಸಾಯನಿಕ ಗೊಬ್ಬರ, ಔಷಧಿ ಸೇರಿದಂತೆ ಸಾಕಷ್ಟು ಹಣ ಹೂಡಿಕೆ ಮಾಡಿದ್ದರು. ಸೌತೆಕಾಯಿ ಕಹಿಯಾಗಿರುವುದರಿಂದ ಬೆಳೆ ಮಾರುಕಟ್ಟೆಗೆ ಯೋಗ್ಯವಾಗದೆ ರೈತನಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.

ರೈತ ಖರೀದಿಸಿದ ಬೀಜ ಸರಿಯಾಗಿ ಪರೀಕ್ಷಿಸದೇ ವಿತರಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಇದರಿಂದಾಗಿ ಸೌತೆಕಾಯಿಗಳು ಕಹಿಯಾಗಿವೆ. ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದರಿಂದ ಸಾಲ ತೀರಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ. ಸಂಬಂಧಿಸಿದ ಬಿತ್ತನೆ ಬೀಜ ಕಂಪನಿಯವರು ತಕ್ಷಣ ರೈತರ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಿ 6 ಲಕ್ಷ ಪರಿಹಾರವನ್ನು ನೀಡಬೇಕು. ಅಲ್ಲದೇ ಜಮೀನಿಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎನ್ನುತ್ತಾರೆ ರೈತ ಅಸಗರಲಿ ಸರಕಾವಾಸ.ಸೌತೆಯನ್ನು ಬೆಳೆಯಲು ಲಕ್ಷಾಂತರ ಸಾಲ ಮಾಡಿ ಉತ್ತಮವಾಗಿ ಬೆಳೆದಿದ್ದೇನೆ. ಬೆಳೆ ಬಂದಿದ್ದು, ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಸೌತೆಕಾಯಿಗಳೆಲ್ಲ ಕಹಿಯಾಗಿದ್ದು, ಏನು ಮಾಡಬೇಕು ಎಂದು ತಿಳಿಯದಾಗಿದೆ. ದಯವಿಟ್ಟು ಅಧಿಕಾರಿಗಳು ಪರಿಶೀಲಿಸಿ ಕಂಪನಿಯವರಿಂದ ನನಗೆ 6 ಲಕ್ಷ ಪರಿಹಾರ ಕೊಡಿಸಬೇಕು ಎಂದು ಡಂಬಳ ಗ್ರಾಮದ ರೈತ ಅಸಗರಲಿ ಸರಕಾವಾಸ ತಿಳಿಸಿದರು.