ಎಐಟಿಯುಸಿಯು ನೇತೃತ್ವದ ಅಂಗನವಾಡಿ ನೌಕರರಿಂದ ಅಹೋರಾತ್ರಿ ಧರಣಿ ಆರಂಭ

| Published : Jun 25 2024, 01:47 AM IST / Updated: Jun 25 2024, 05:30 AM IST

ಎಐಟಿಯುಸಿಯು ನೇತೃತ್ವದ ಅಂಗನವಾಡಿ ನೌಕರರಿಂದ ಅಹೋರಾತ್ರಿ ಧರಣಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಬೇಡಿಕೆ ಈಡೇರಿಕೆಗಾಗಿ ಎಐಟಿಯುಸಿಯು ನೇತೃತ್ವದ ಅಂಗನವಾಡಿ ನೌಕರರಿಂದ ಅಹೋರಾತ್ರಿ ಧರಣಿ ನಡೆಯಿತು.

 ಬೆಂಗಳೂರು : ಶಾಲಾ ಪೂರ್ವ ಶಿಕ್ಷಣವನ್ನು ಅಂಗನವಾಡಿಗಳಲ್ಲೇ ಉಳಿಸುವುದಾಗಿ ಸರ್ಕಾರ ಪ್ರಕಟಿಸಿದ ನಿರ್ಧಾರವನ್ನು ಸಿಐಟಿಯು ನೇತೃತ್ವದ ರಾಜ್ಯ ಅಂಗನವಾಡಿ ನೌಕರರ ಸಂಘ ಸ್ವಾಗತಿಸಿದರೆ, ಸೋಮವಾರದಿಂದ ಪ್ರತಿಭಟನೆ ಆರಂಭಿಸಿದ್ದ ಮತ್ತೊಂದು ಸಂಘಟನೆ ಎಐಟಿಯುಸಿಯು ಸರ್ಕಾರದ ಈ ಘೋಷಣೆ ಬಗ್ಗೆ ಖುದ್ದು ಮಹಿಳಾ ಮತ್ತು ಮಕ್ಕಳ ಖಾತೆ ಸಚಿವರೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಭರವಸೆ ನೀಡಬೇಕೆಂದು ಆಗ್ರಹಿಸಿ ತಮ್ಮ ಹೋರಾಟ ಮುಂದುವರೆಸಿದೆ.

ಹೀಗಾಗಿ ರಾಜ್ಯದ ಎಲ್ಲೆಡೆಯಿಂದ ಆಗಮಿಸಿ ನಗರದ ಸ್ವತಂತ್ರ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿರುವ ಎಐಟಿಯುಸಿ ನೇತೃತ್ವದ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್‌ ಕಾರ್ಯಕರ್ತೆಯರು ಆಹೋರಾತ್ರಿ ಹೋರಾಟ ಮುಂದುವರೆಸಿದ್ದಾರೆ.ಈ ಬಗ್ಗೆ ಮಾತನಾಡಿದ ಫೆಡರೇಷನ್‌ನ ಕಾರ್ಯದರ್ಶಿ ಎಂ.ಜಯಮ್ಮ ಅವರು,‘ಇಲಾಖೆ ಸಚಿವರು ಸ್ಥಳಕ್ಕೆ ಆಗಮಿಸಿ ಸ್ಪಷ್ಟ ಭರವಸೆ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಸ್ಪಷ್ಟ ಪಡಿಸಿದರು.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸಬಾರದು, 6 ನೇ ಗ್ಯಾರೆಂಟಿ ಜಾರಿಗೊಳಿಸಬೇಕು ಎಂಬುದು ಸೇರಿ ಹಲವು ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸೋಮವಾರ ಬೆಳಗ್ಗೆಯಿಂದ ಎಐಟಿಯುಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್‌ನ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಆರಂಭಿಸಿದ್ದರು.

ವಿಧಾನ ಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ನಮ್ಮ ಸಂಬಳ ಹೆಚ್ಚಿಳ ಮಾಡುವ 6 ನೇ ಗ್ಯಾರೆಂಟಿ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು. ಸರ್ಕಾರ ಒಂದು ವರ್ಷ ಪೂರೈಸಿದ್ದರೂ ಇನ್ನೂ 6 ನೇ ಗ್ಯಾರೆಂಟಿ ಜಾರಿಗೆ ತಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.