ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಶಾಸಕ ಆಸೀಫ್ (ರಾಜು) ಸೇಠ್ ಅವರು ಸಚಿವ ಸ್ಥಾನ ನೀಡಬೇಕೆಂದು ಕೇಳಿದ್ದು ನಿಜ. ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ನೀಡುವ ಬಗ್ಗೆ ನನಗೆ ಗೊತ್ತಿಲ್ಲ. ಅಧಿವೇಶನ ನಂತರ ಏನಾಗುತ್ತದೆ ಕಾದು ನೋಡೋಣ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಭಾಗದ ಅಲ್ಪಸಂಖ್ಯಾತ ಸಮುದಾಯದರು ಯಾರೂ ಸಚಿವರಾಗಿಲ್ಲ. ಹೀಗಾಗಿ ಶಾಸಕ ಆಸೀಫ್ (ರಾಜು) ಸೇಠ್ ಸಚಿವ ಸ್ಥಾನ ನೀಡಬೇಕೆಂದು ಕೇಳಿದ್ದಾರಷ್ಟೇ. ಆದರೆ ಸಚಿವರನ್ನ ಕೈ ಬಿಡುವುದಾಗಲಿ ಅಥವಾ ಸೇರಿಸಿಕೊಳ್ಳುವ ಅಧಿಕಾರ, ವ್ಯಾಪ್ತಿ ನನಗೆ ಬರಲ್ಲ. ಈ ಕುರಿತು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನೇ ಕೇಳಿ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಬೆಳಗಾವಿ ಎರಡನೇ ರಾಜ್ಯಧಾನಿ ಆಗುವ ಸಮಯ ಬರುತ್ತದೆ. ಆದರೆ, ಆ ಸಮಯ ಬರುವವರೆಗೆ ಕಾಯಬೇಕು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳತ್ತದೆ. ನನ್ನ ಹೆಸರು ಪ್ರಸ್ತಾಪವಾಗಿಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆಯೇ ಆಗಿಲ್ಲ. ತಳಮಟ್ಟದಲ್ಲಿ ಪಕ್ಷಕ್ಕೆ ಶಕ್ತಿ ತುಂಬಲು ಪೂರ್ಣಾವಧಿ ಅಧ್ಯಕ್ಷರ ಅವಶ್ಯಕತೆ ಇದೆ. ಹೀಗಾಗಿ ಮತ ಸೆಳೆಯುವವರನ್ನು, ಜನರನ್ನು ಆಕರ್ಷಣೆ ಮಾಡುವವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.1924ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿ ಭಾಗವಹಿಸಿ ಈಗ 100 ವರ್ಷಗಳು ತುಂಬುತ್ತಿದ್ದು, ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಸಿದ್ಧತಾ ಸಭೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರಿಗಳು ಇರುವುದರಿಂದ ಅಲ್ಲಿಯೇ ಸಭೆ ಮಾಡಿದ್ದೇವೆ. ಈ ವಿಷಯ ಕುರಿತು ಮೂರು ದಿನಗಳ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರಿಗೆ ಸೂಚಿಸುತ್ತೇನೆ. ನಿಮ್ಮ ಗಮನಕ್ಕೆ ಬಂದ ಸಮಸ್ಯೆಗಳನ್ನು ಅವರಿಗೆ ತಿಳಿಸಿ, ಸರಿಪಡಿಸುವ ಕಾರ್ಯವನ್ನು ಪೊಲೀಸ್ ಕಮಿಷನರ್ ಮಾಡುತ್ತಾರೆ ಎಂದರು.ಹಾಸನ ಕಾರ್ಯಕ್ರಮ ಬಗ್ಗೆ ಅಲ್ಲಿನ ಉಸ್ತುವಾರಿ ಸಚಿವರು ನೋಡಿಕೊಳ್ಳುತ್ತಿದ್ದು, ಪಕ್ಷಕ್ಕಾಗಿ ದುಡಿದ ಸುಮಾರು ಕಾರ್ಯಕರ್ತರಿದ್ದು, ಸಾವಿರ ಕಾರ್ಯಕರ್ತರಿಗೆ ಬೆಳಗಾವಿ ಅಧಿವೇಶನ ಮುಗಿದ ನಂತರ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಗೂ ಮುನ್ನ ಸಚಿವ ಸತೀಶ ಜಾರಕಿಹೊಳಿ ಅವರು ಮಹಿಳೆಯರ, ಸಾರ್ವಜನಿಕರ ಹಾಗೂ ಕಾರ್ಯಕರ್ತರ ಅಹವಾಲು ಆಲಿಸಿ, ಸಮಸ್ಯೆಗಳಿಗೆ ಸ್ಪಂದಿಸಿದರು.ಕಿತ್ತೂರು ಶಾಸಕ ಬಾಬಾ ಸಾಹೇಸಾಹೇಬ ಪಾಟೀಲ್, ಬೆಳಗಾವಿ ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕೆಪಿಸಿಸಿ ಕಾರ್ಯದರ್ಶಿ ಸುನೀಲ ಹಣಮನ್ನವರ, ರಾಜಾ ಸಲೀಂ ಮತ್ತಿತರರು ಉಪಸ್ಥಿತರಿದ್ದರು.