ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು ತಾಲೂಕಿನ ಹಲವು ಗ್ರಾಮಗಳ ಗೂಡಂಗಡಿಗಳಲ್ಲಿ ರಾಜರೋಷವಾಗಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ, ಕ್ರಮವಹಿಸುವಂತೆ ಹಲವು ಬಾರಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ರೈತ ಸಂಘದ ಮುಖಂಡ ಬೊಕ್ಕಳ್ಳಿ ನಂಜುಂಡಸ್ವಾಮಿ ಆರೋಪಿಸಿದರು.ಪಟ್ಟಣದ ಎಪಿಎಂಸಿ ಮಾರುಕಟ್ಟೆ ಸಭಾಂಗಣದಲ್ಲಿ ತಾಲೂಕು ಆಡಳಿತ ಬುಧವಾರ ನಡೆಸಿದ ರೈತರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.ಅಕ್ರಮ ಮದ್ಯ ಮಾರಾಟ ತಡೆಯುವಂತೆ ದೂರು ಸಲ್ಲಿಸಿದ ನನ್ನ ಮೇಲೆ ಅಕ್ರಮ ಮದ್ಯ ಮಾರಾಟಗಾರರು ಹಲ್ಲೆ ನಡೆಸಿದ್ದಾರೆ,ಹೀಗಾದರೆ ಗ್ರಾಮಗಳಲ್ಲಿ ಶಾಂತಿ ನೆಲೆಸಲು ಹೇಗೆ ಸಾಧ್ಯ, ತಾಲೂಕು ಆಡಳಿತ 17 ತಿಂಗಳ ನಂತರ ಕಾಟಾಚಾರಕ್ಕೆ ರೈತರ ಕುಂದು ಕೊರತೆ ಸಭೆ ನಡೆಸುತ್ತೀರಿ, ಇದರಿಂದ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕುವುದಿಲ್ಲ ಎಂದು ಹೇಳಿದರು.ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯದ ವೇಳೆ ಅಧಿಕಾರಿಗಳು ಲಭ್ಯರಿರುವುದಿಲ್ಲ, ಒಂದು ವರ್ಷದ ಹಿಂದೆ ಜಮಿನು ಸರ್ವೆ ಮಾಡಿಸಲು ನೀಡಿದ್ದರೂ ಸರ್ವೆ ಕಾರ್ಯ ನಡೆಸಿಲ್ಲ, ಸರ್ಕಾರಿ ಆಸ್ಪತ್ರೆಯಲ್ಲಿ ಟಿ.ಟಿ.ಚುಚ್ಚುಮದ್ದು ಲಭ್ಯವಿರುವುದಿಲ್ಲ, ಹೊರಳವಾಡಿ ಗ್ರಾಮದಲ್ಲಿ ಕುಡಿಯುವ ನೀರು, ವಿದ್ಯುತ್ ದೀಪದ ವ್ಯವಸ್ಥೆ ಮಾಡುವಂತೆ ಪಿಡಿಒ ಗೆ ಮನವಿ ಮಾಡಿದರೆ, ಬೆದರಿಕೆ ಒಡ್ಡಿ ಸಾಗ ಹಾಕುತ್ತಾರೆ ಎಂದು ಅವರು ಅರೋಪಿಸಿದರು.ತಾಲೂಕು ರೈತ ಸಂಘದ ಅಧ್ಯಕ್ಷ ಸತೀಶ್ ರಾವ್ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಲ್ಲಿ ಪ್ರತಿ ಗ್ರಾಮಕ್ಕೆ ಒಂದು ಕೋಟಿ ಅನುದಾನ ಬಂದಿದ್ದರೂ ಪ್ರಯೋಜನವಾಗುತ್ತಿಲ್ಲ, ಪೌತಿ ಖಾತೆ ಮಾಡಿಕೊಡುತ್ತಿಲ್ಲ, ಕಂದಾಯ ಇಲಾಕೆಯಲ್ಲಿ ರೈತರು ತಮ್ಮ ಜಮೀನಿನ ದಾಖಲೆ ಪಡೆಯಲು ಲಂಚ ನೀಡಬೇಕಾಗಿದೆ, ಮಧ್ಯವರ್ತಿಗಳಿಗೆ ದಾಖಲೆಗಳು ಸಲೀಸಾಗಿ ದೊರಕುತ್ತವೆ, ಕಂದಾಯ ಇಲಾಖೆಯಲ್ಲಿ ಭ್ರಷ್ಠಾಚಾರ ಮಿತಿ ಮೀರಿದೆ ಎಂದು ಆಪಾದಿಸಿದರು.ಪ್ರತಿಕ್ರಿಯೆ ನೀಡಿದ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರ್, ಲಂಚ ಕೇಳುವ ಸಿಬ್ಬಂದಿ ವಿರುದ್ಧ ಅಧಿಕೃತವಾಗಿ ದೂರು ನೀಡಿದರೆ ಕ್ರಮವಹಿಸಬಹುದು, ಕೆರೆ ಮತ್ತು ಸ್ಮಶಾನಗಳ ಒತ್ತೂವರಿಯನ್ನು ತೆರವುಗೊಳಿಸಲು ಕ್ರಮ ವಹಿಸಲಾಗುವುದು, ತಾಲೂಕಿನಲ್ಲಿ ಸರ್ವೆಯರ್ ಗಳ ಕೊರತೆ ಇದೆ, 600 ಸರ್ವೆ ಕಾರ್ಯ ನನೆಗುದಿಗೆ ಬಿದ್ದಿದೆ, ಪ್ರತಿ ಹೋಬಳಿಗೆ ಎರಡು ದಿನದಂತೆ ಸರ್ವೆಯರ್ ಗಳು ಕೆಲಸ ಮಾಡುವಂತೆ ಸೂಚಿಸಲಾಗಿದೆ, ಹೆಚ್ಚುವರಿಯಾಗಿ 5 ಮಂದಿ ಸರ್ವೆಯರ್ ಗಳನ್ನು ನೇಮಿಸಿ ಸರ್ವೆ ಕಾರ್ಯ ನಡೆಸಲಾಗುವುದು, ಕವಲಂದೆ ನಾಡ ಕಚೇರಿಯಲ್ಲಿ ಹೆಚ್ಚಿನ ಸ್ಥಳಾವಕಾಶವಿಲ್ಲ, ನಾಡ ಕಚೇರಿಗಾಗಿ ಜಾಗ ಗುರ್ತಿಸಲಾಗುತ್ತಿದೆ, ಬಿಳಿಗೆರೆ ನಾಡ ಕಚೇರಿ ನಿರ್ಮಾಣಕ್ಕಾಗಿ ಜಾಗ ಗುರ್ತಿಸಲಾಗಿದೆ, ರೈತರು ಹೇಳಿದ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ,ಶೀಘ್ರವೇ ಪರಿಹಾರ ನೀಡಲಾಗುವುದು ಎಂದು ಹೇಳಿದರು.ಸಭೆಯಲ್ಲಿ ತಾಪಂ ಇಒ ಜೆರಾಲ್ಡ್ ರಾಜೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಎಸ್. ರವಿ, ಸಿಡಿಪಿಒಗಳಾದ ಭವ್ಯಶ್ರೀ, ಮಂಜುಳಾ, ತೋಟಗಾರಿಕಾ ಸಹಾಯಕ ನಿರ್ದೇಶಕ ಚಂದ್ರು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗ, ಟಿಎಚ್.ಒ ಈಶ್ವರ್ ಕಾನಟ್ಕೆ, ಆರ್.ಎಫ್.ಒ ನಿತಿನ್ ಕುಮಾರ್, ಬಿಇಒ ಮಹೇಶ್ ಹಾಗೂ ರೈತ ಮುಖಂಡರು ಇದ್ದರು.