ಸಾರಾಂಶ
ಶಿರಸಿ : ಶತಮಾನ ಪೂರೈಸಿದ ರೈತರ ಜೀವನಾಡಿಯಾದ, ಅನೇಕ ಹಿರಿಯರ ಪರಿಶ್ರಮದಿಂದ ಕಟ್ಟಿದ, ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಶಿರಸಿಯ ತೋಟಗಾರ ಸೇಲ್ಸ್ ಸೊಸೈಟಿ ಏಕಾಏಕಿ ಆಡಳಿತಾಧಿಕಾರಿ ನೇಮಿಸಿ ಆದೇಶಿಸಿದ್ದು, ಅನೇಕ ಸಂಶಯಕ್ಕೆ ಕಾರಣವಾಗಿದೆ. ಪ್ರಜಾಪ್ರಭುತ್ವ ರೀತಿ ಆಯ್ಕೆಯಾದ ಜನಪ್ರತಿನಿಧಿಗಳ ಹಕ್ಕನ್ನು ಮೋಟಕುಗೊಳಿಸಿ ಹಠಾತ್ ಆಡಳಿತಾಧಿಕಾರಿ ನೇಮಿಸಿದ್ದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಚುನಾವಣೆ ಪ್ರಕ್ರಿಯೆಯಲ್ಲಿ ಲೋಪದೋಷವಾಗಿದೆ ಎಂದು ಬಿಂಬಿಸಿ ಪ್ರತಿಷ್ಠಿತ ಸಂಸ್ಥೆಯ ಮೇಲೆ ಈ ರೀತಿ ಕ್ರಮವಾಗಿದ್ದು ಯಾರ ''''ಕೈ''''ವಾಡ ಎಂಬುದು ಜನಸಾಮಾನ್ಯ ರೈತರ ಪ್ರಶ್ನೆಯಾಗಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ತಪ್ಪಾಗಿದ್ದಲ್ಲಿ ಅದನ್ನು ನಿರ್ವಹಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಕೊಳ್ಳುವುದನ್ನು ಬಿಟ್ಟು ಅಧಿಕೃತ ಚುನಾಯಿತ ಪ್ರತಿನಿಧಿಗಳನ್ನು ವಜಾ ಮಾಡಿರುವುದು ಸಹಕಾರಿ ತತ್ವಕ್ಕೆ ಅಪಮಾನ ಮಾಡಿದಂತಾಗಿದೆ. ಈಗಾಗಲೇ ಸಂಘದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ದೂರಿನ ವಿಚಾರಣೆಗೆ ಅಡ್ಡಿ ಪಡಿಸಲಿಕ್ಕಾಗಿ ಆಡಳಿತ ಮಂಡಳಿಯನ್ನು ವಜಾ ಮಾಡಲಾಯಿತೇ ಎಂಬ ಅನುಮಾನ ಮೂಡುವಂತಾಗಿದೆ ಎಂದಿದ್ದಾರೆ.
ರೈತರ ಕೃಷಿ ಚಟುವಟಿಕೆ ಹಂಗಾಮಿನ ಈ ಹೊತ್ತಿನಲ್ಲಿ ಕೋಟ್ಯಂತರ ರೂಗಳ ವಹಿವಾಟು ಹೊಂದಿರುವ ಈ ಸಂಸ್ಥೆಗೆ ಆಡಳಿತಾಧಿಕಾರಿ ನೇಮಿಸಿದ್ದು, ರೈತರಿಗೆ ತೊಂದರೆ ಕೊಟ್ಟಂತಾಗಿದೆ. ಅಲ್ಲದೆ ಶೈಕ್ಷಣಿಕ ವರ್ಷ ಆರಂಭದಲ್ಲಿ ಶಿಕ್ಷಣ ಅಧಿಕಾರಿಯನ್ನು ಆಡಳಿತಧಿಕಾರಿಯನ್ನಾಗಿ ನೇಮಿಸಿದ್ದು ಯಾಕೆ? ಈ ಕೂಡಲೆ ಆದೇಶವನ್ನು ರದ್ದುಗೊಳಿಸಿ ಪುನಃ ಚುನಾಯಿತ ಪ್ರತಿನಿಧಿಗಳ ಕೈಗೆ ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಕಾಗೇರಿ ಆಗ್ರಹಿಸಿದ್ದಾರೆ.