ದೇವಾಲಯದ ಟ್ರಸ್ಟ್‌ ಸೇವಾ ಕಾರ್ಯಕ್ಕೆ ಶ್ಲಾಘನೆ

| Published : Aug 13 2024, 12:59 AM IST

ಸಾರಾಂಶ

ಭಕ್ತರು ಕಾಣಿಕೆ ಹಾಗೂ ಮುಡುಪಿನ ರೂಪದಲ್ಲಿ ಹುಂಡಿಗೆ ಹಣವನ್ನು ಅರ್ಪಿಸುತ್ತಾರೆ, ಅದೇ ಹಣವನ್ನು ಬಳಸಿಕೊಂಡು ಟ್ರಸ್ಟಿನವರು ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ, ಭಕ್ತಾದಿಗಳಿಗೆ ನಿತ್ಯ ಅನ್ನದಾಸೋಹ ಸೇರಿದಂತೆ ಜನೋಪಯೋಗಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ

ಕನ್ನಡಪ್ರಭ ವಾರ್ತೆ ಮಾಲೂರು

ಗ್ರಾಮ ದೇವತೆ ಮಾರಿಕಾಂಬ ದೇವಾಲಯದ ಟ್ರಸ್ಟಿನವರು ಭಕ್ತಾದಿಗಳು ದೇವಾಲಯದ ಹುಂಡಿಗೆ ಅರ್ಪಿಸಿರುವ ಕಾಣಿಕೆ ಹಾಗೂ ಮುಡುಪಿನ ಹಣವನ್ನು ಬಳಸಿಕೊಂಡು ಪಟ್ಟಣದಲ್ಲಿ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಒಂದು ಸರ್ಕಾರ ಮಾಡುವ ಕೆಲಸ ಟ್ರಸ್ಟ್‌ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಪಟ್ಟಣದ ಮಾರಿಕಾಂಬ ದೇವಾಲಯದ ಶ್ರೀ ಮಾರಿಕಾಂಬ ನಿತ್ಯ ಅನ್ನದಾಸೋಹ ಭವನದ ಸಭಾಂಗಣದಲ್ಲಿ ಮಾರಿಕಾಂಬ ದೇವಾಲಯ ಟ್ರಸ್ಟ್ ವತಿಯಿಂದ ೨೦೧೨-೧೩ ರಿಂದ ೨೦೨೩-೨೪ನೇ ಸಾಲಿನವರೆಗೆ ೧೨ ವರ್ಷಗಳ ಜಮಾ ಖರ್ಚು ವಿವರಗಳು ಹಾಗೂ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ದಿನ ಇಲ್ಲಿನ ಮಾರಿಕಾಂಬ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ತಮ್ಮ ಕಷ್ಟಕಾರ್ಪಣ್ಯಗಳನ್ನು ದೇವಿಯ ಬಳಿ ಹೇಳಿಕೊಳ್ಳುತ್ತಾರೆ. ಕಾಣಿಕೆ ಹಾಗೂ ಮುಡುಪಿನ ರೂಪದಲ್ಲಿ ಹುಂಡಿಗೆ ಹಣವನ್ನು ಅರ್ಪಿಸುತ್ತಾರೆ, ಅದೇ ಹಣವನ್ನು ಬಳಸಿಕೊಂಡು ಟ್ರಸ್ಟಿನವರು ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ನಿತ್ಯ ಅನ್ನದಾಸೋಹ ಸೇರಿದಂತೆ ಜನೋಪಯೋಗಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದರು.

ಸಭೆಯಲ್ಲಿ ಪ್ರಾಸ್ತಾವಿಕ ನುಡಿಗಳನ್ನು ನುಡಿದ ದೇವಾಲಯ ಟ್ರಸ್ಟಿನ ಅಧ್ಯಕ್ಷ ಪಿ.ವೆಂಕಟೇಶ್ ದೇವಾಲಯಕ್ಕೆ ಬಂದ ಭಕ್ತಾದಿಗಳು ಹುಂಡಿಗೆ ಅರ್ಪಿಸುವ ಕಾಣಿಕೆ ರೂಪದ ಹಣವನ್ನು ಬಳಸಿಕೊಂಡು ದೇವಾಲಯ ಟ್ರಸ್ಟಿನ ವತಿಯಿಂದ ಸಾರ್ವಜನಿಕರ ಸಹಕಾರದಿಂದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಾರಿಕಾಂಬ ದೇವಾಲಯ ಟ್ರಸ್ಟಿನ ಉಪಾಧ್ಯಕ್ಷ ಎಂ.ಎನ್.ಗುಂಡಪ್ಪ, ಖಜಾಂಚಿ ತಬಲಾ ನಾರಾಯಣಪ್ಪ, ಮಾಜಿ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ್, ತಹಶೀಲ್ದಾರ್ ಕೆ.ರಮೇಶ್, ಪೋಲಿಸ್ ಇನ್ಸ್ಪೆಕ್ಟರ್ ವಸಂತ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್, ಟ್ರಸ್ಟಿನ ಸದಸ್ಯರಾದ ನವರಂಗ್‌ ಮಂಜು, ಇನ್ನಿತರಿದ್ದರು.