ಸಾರಾಂಶ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳೂ ಮೇಳಗಳ ಕಲಾವಿದರಿಗೆ ಮೂರು ದಿನಗಳ ಕಾಲ ನಡೆಯುವ ಪುನರ್ ಮನನ ಕಾರ್ಯಾಗಾರ ಕಟೀಲಿನಲ್ಲಿ ಸೋಮವಾರ ಉದ್ಘಾಟನೆಗೊಂಡಿತು.
ಕಟೀಲು ಮೇಳಗಳ ಯಕ್ಷಗಾನ ಕಲಾವಿದರಿಗೆ ಪುನರ್ ಮನನ ಶಿಬಿರ
ಮೂಲ್ಕಿ: ಚಪ್ಪಾಳೆ ಯಶಸ್ಸಿನ ಮಾನದಂಡವಲ್ಲ. ಕಲಾವಿದರು ಚಪ್ಪಾಳೆಯ ಅಮಲು ಬಿಡಬೇಕು. ಪ್ರೇಕ್ಷಕನ ಆರ್ದ್ರ ಭಾವನೆಯೇ ಕಲಾವಿದನ ಸಾರ್ಥಕ್ಯದ ಕ್ಷಣ. ಭಕ್ತಿ ಶ್ರದ್ಧೆಯಿಂದ ಆಟ ಆಡಿಸುವ ಭಕ್ತರ ಮನಸ್ಸಿಗೂ ಹಿತವಾಗುವಂತೆ ವ್ಯಕ್ತಿತ್ವ, ವೇಷಧಾರಿಕೆ, ಯಕ್ಷಗಾನ ಪ್ರದರ್ಶನ ನೀಡುವ ಜವಾಬ್ದಾರಿ ಕಟೀಲು ಮೇಳದ ಕಲಾವಿದರಿಗೆ ಇದೆ ಎಂದು ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೇಕಾರ್ ಹೇಳಿದ್ದಾರೆ.ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳೂ ಮೇಳಗಳ ಕಲಾವಿದರಿಗೆ ಮೂರು ದಿನಗಳ ಕಾಲ ನಡೆಯುವ ಪುನರ್ ಮನನ ಕಾರ್ಯಾಗಾರವನ್ನು ಕಟೀಲಿನಲ್ಲಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಬಡಗಿನಲ್ಲಿ ಬಣ್ಣದ ವೇಷ ಲುಪ್ತವಾಗಿಹೋಗಿದೆ. ತೆಂಕುತಿಟ್ಟು ಹಾಗೂ ಉತ್ತರ ಕನ್ನಡದ ಪ್ರಭಾವದ ಮುಂದೆ ಬಡಗುತಿಟ್ಟು ಯಕ್ಷಗಾನ ಹೊಡೆತಕ್ಕೊಳಗಾಗಿದೆ. ವೇಷಗಳು ಕುಣಿತ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿವೆ. 10-12 ನಿಮಿಷ ಕುಣಿದು ಒಂದು ನಿಮಿಷದ ಅರ್ಥ ಹೇಳಿದರೆ ಏನು ಉಪಯೋಗ? ಕಟೀಲು ಮೇಳದಲ್ಲಿ ಇವತ್ತಿಗೂ ಚಿಟ್ಟಿ ಇಟ್ಟು ಬಣ್ಣದ ವೇಷ ಮಾಡುತ್ತಿರುವ ಕಲಾವಿದರ ಶ್ರದ್ಧೆ ದೊಡ್ಡದು. ಕಟೀಲು ಮೇಳಗಳು ಪಾರಂಪರಿಕ ವೇಷಗಳನ್ನು ಉಳಿಸಿಕೊಂಡಿರುವುದು ಸಮಾಧಾನಕರ ಎಂದರು.ಭಾಗವತರು ಹಾಡುವಾಗ ಧ್ವನಿವರ್ಧಕಕ್ಕೆ ಇಕೋ ಹಾಕುವುದು ಸರಿಯಲ್ಲ. ಯಕ್ಷಗಾನ ಪ್ರದರ್ಶನ ಇನ್ನಷ್ಟು ಚಂದ ಕಾಣಲು ಇಂತಹ ಕಾರ್ಯಾಗಾರಗಳು ಅಗತ್ಯವೆಂದು ಹೇಳಿದರು.ಕಟೀಲು ದೇವಳದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಮಾತನಾಡಿ ದೇವರ ಸೇವೆ ಎಂಬ ಭಾವನೆಯಿಂದ ಮೇಳದಲ್ಲಿ ತೊಡಗಿಸಿಕೊಳ್ಳಿ. ದೇವರು ಖಂಡಿತವಾಗಿಯೂ ಅನುಗ್ರಹಿಸುತ್ತಾರೆ ಎಂದರು.
ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಮೇಳದ ಪ್ರಬಂಧಕ ಸುಣ್ಣಂಬಳ ವಿಶ್ವೇಶ್ವರ ಭಟ್, ಕಲಾರಂಗದ ನಾರಾಯಣ ಹೆಗಡೆ ಉಪಸ್ಥಿತರಿದ್ದರು.ಅಂಡಾಲ ದೇವೀಪ್ರಸಾದ ಶೆಟ್ಟಿ ಪ್ರಾರ್ಥಿಸಿದರು. ದಿನಕರ ಗೋಖಲೆ ಸ್ವಾಗತಿಸಿದರು. ಪುತ್ತೂರು ರಮೇಶ್ ಭಟ್ ವಂದಿಸಿದರು. ಡಾ. ಶ್ರುತಕೀರ್ತಿರಾಜ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))