ಕನಕಪುರದಲ್ಲಿ ದಲಿತರ ಮೇಲೆ ಹಲ್ಲೆ: ತಪ್ಪಿತತ್ಸರ ವಿರುದ್ಧ ಕ್ರಮದ ಭರವಸೆ

| Published : Jul 24 2024, 12:21 AM IST

ಕನಕಪುರದಲ್ಲಿ ದಲಿತರ ಮೇಲೆ ಹಲ್ಲೆ: ತಪ್ಪಿತತ್ಸರ ವಿರುದ್ಧ ಕ್ರಮದ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಗಡಿಪಾರಾಗಿದ್ದ ರೌಡಿಶೀಟರ್ ಮತ್ತು ಆತನ ಸಹಚರರು ಕನಕಪುರದ ಮಳಗಾಳು ಗ್ರಾಮದ ದಲಿತರ ಮೇಲೆ ಮಾರಕಸ್ತ್ರಗಳಿಂದ ಹಲ್ಲೆ ನಡೆದಿದ್ದ ಘಟನಾ ಸ್ಥಳಕ್ಕೆ ಬೆಂಗಳೂರು ಕೇಂದ್ರ ವಲಯ ಆರಕ್ಷಕ ಮಹಾ ನಿರೀಕ್ಷಕ ಶ್ರೀ ಲಾಬು ರಾಮ್ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

-ಘಟನಾ ಸ್ಥಳಕ್ಕೆ ಬೆಂಗಳೂರು ಕೇಂದ್ರ ವಲಯ ಆರಕ್ಷಕ ಮಹಾ ನಿರೀಕ್ಷಕ ಲಾಬು ರಾಮ್ ಭೇಟಿ, ಪರಿಶೀಲನೆ

ಕನ್ನಡಪ್ರಭ ವಾರ್ತೆ ಕನಕಪುರ

ಗಡಿಪಾರಾಗಿದ್ದ ರೌಡಿಶೀಟರ್ ಮತ್ತು ಆತನ ಸಹಚರರು ನಗರದ ಮಳಗಾಳು ಗ್ರಾಮದ ದಲಿತರ ಮೇಲೆ ಮಾರಕಸ್ತ್ರಗಳಿಂದ ಹಲ್ಲೆ ನಡೆದಿದ್ದ ಘಟನಾ ಸ್ಥಳಕ್ಕೆ ಬೆಂಗಳೂರು ಕೇಂದ್ರ ವಲಯ ಆರಕ್ಷಕ ಮಹಾ ನಿರೀಕ್ಷಕ ಶ್ರೀ ಲಾಬು ರಾಮ್ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಘಟನೆ ಕುರಿತು ಹಲ್ಲೆಗೊಳಗಾಗಿರುವ ಕುಟುಂಬದ ಮಹಿಳೆಯರಿಂದ ಮಾಹಿತಿ ಸಂಗ್ರಹಿಸಿದರು.

ಈ ವೇಳೆ ಪೊಲೀಸ್‌ ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡ ಮಹಿಳೆಯರು, ಇಲ್ಲಿ ದಲಿತರು ಇರಬಾರದು ಎಂಬುದು ಇಲ್ಲಿನ ಕೆಲ ಮೇಲ್ಜಾತಿವರ ಮನಸ್ಥಿತಿ. ಆದ್ದರಿಂದ ಆಗಾಗ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತವೆ. ಹಿಂದೆಯೂ ಇಂತಹ ಸಾಕಷ್ಟು ಪ್ರಕರಣಗಳು ನಡೆದಿವೆ.

ಒಂದು ವರ್ಷದ ಹಿಂದೆ ಮಳಗಾಳು ಗ್ರಾಮದ ಸೇತುವೆ ಬಳಿ ದಲಿತ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಪ್ರತಿ ಆರು ತಿಂಗಳು ಅಥವಾ ವರ್ಷಕ್ಕೊಮ್ಮೆ ಈ ರೀತಿ ಘಟನೆಗಳು ಮರುಕಳಿಸುತ್ತಲೇ ಇವೆ. ಇವರ ದೌರ್ಜನ್ಯಕ್ಕೆ ಕೆಲವರು ಕೈ ಕಾಲು ಕಳೆದುಕೊಂಡು ಅಂಗವಿಕಲರಾಗಿದ್ದಾರೆ ಎಂದು ಆತಂಕ ವ್ಯಕ್ತಪಡಸಿದರು.ಕಳೆದ ಭಾನುವಾರ ರಾತ್ರಿ 9.3೦ ಸಮಯದಲ್ಲಿ ಐದಾರು ಜನ ಗುಂಪು ಕಟ್ಟಿಕೊಂಡು ಬಂದು ಮನೆ ಮುಂದೆ ಕುಳಿತಿದ್ದ ಯುವಕನ ಮೇಲೆ ಹಲ್ಲೆ ಮಾಡಿ ಕೈ ಕತ್ತರಿಸಿದ್ದಾರೆ. ರಕ್ಷಣೆಗೆ ಹೋದ ಕುಟುಂಬ ಸದಸ್ಯರು, ಮಹಿಳೆಯರು ಮೇಲು ಹಲ್ಲೆ ನಡೆಸಿದ್ದಾರೆ.

ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಾವು ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ಇಲ್ಲಿ ದಲಿತರು ವಾಸ ಮಾಡಬಾರದೆಂಬುದು ಅವರ ಉದ್ದೇಶ. ಈಗಾಗಲೇ ತಪ್ಪು ಮಾಡಿ ರೌಡಿಶೀಟರ್ ಪಟ್ಟಿಯಲ್ಲಿದ್ದರೂ ಗಡಿ ಪಾರಾಗಿದ್ದ ಆರೋಪಿ ಗ್ರಾಮಕ್ಕೆ ಬಂದು ದೌರ್ಜವೆಸಗಿರುವುದು ಸರಿಯೇ ಎಂದು ಪ್ರಶ್ನಿಸಿದರು.ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ನಿಷ್ಕ್ರಿಯವಾಗಿದೆ. ದಲಿತರ ಮೇಲೆ ಆಗಾಗ ಕ್ಷುಲ್ಲಕ ಕಾರಣಕ್ಕೆ ಗಲಾಟೆ ತೆಗೆದು ಲಾಂಗು ಮಚ್ಚುಗಳಿಂದ ಹಲ್ಲೆ ಮಾಡುತ್ತಿದ್ದಾರೆ. ಈಗಾಗಲೇ ಇಂತಹ ಪ್ರಕರಣಗಳು ನಡೆದಿದ್ದರೂ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಂಡಿಲ್ಲ.

ಇಲ್ಲಿರುವ ಮಹಿಳೆಯರು ಮಕ್ಕಳು ಭಯದಲ್ಲಿ ಬದುಕುತ್ತಿದ್ದಾರೆ. ನಮಗೆ ನ್ಯಾಯ ಮತ್ತು ರಕ್ಷಣೆ ಬೇಕು. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಲೋನಿ ನಿವಾಸಿಗಳು ಹಿರಿಯ ಪೊಲೀಸ್‌ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಡಿವೈಎಸ್ಪಿ ಗಿರಿ, ನಗರ ಠಾಣೆ ವೃತ್ತ ನಿರೀಕ್ಷಕ ಮಿಥುನ್ ಶಿಲ್ಪಿ, ಗ್ರಾಮಾಂತರ ಠಾಣೆ ಪಿಎಸ್‌ಐ ಮನೋಹರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಉಪಸ್ಥಿತರಿದ್ದರು.ಗ್ರಾಮದಲ್ಲಿ ಪದೇಪದೇ ಇಂತಹ ಘಟನೆಗಳು ನಡೆಯಲು ಕಾರಣಗಳ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ. ಈ ಹಿಂದಿನ ಪ್ರಕರಣಗಳ ಬಗೆಗೂ ತನಿಖೆ ನಡೆಸುತ್ತೇವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಈಗ ನಡೆದಿರುವ ಘಟನೆ ಬಗ್ಗೆಯೂ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಕೊಳ್ಳುತ್ತೇವೆ. ಇಲ್ಲಿನ ಜನರಿಗೆ ರಕ್ಷಣೆ ಕೊಡುತ್ತೇವೆ.

ಲಾಬು ರಾಮ್, ಬೆಂಗಳೂರು ಕೇಂದ್ರ ವಲಯ ಆರಕ್ಷಕ ಮಹಾ ನಿರೀಕ್ಷಕ