ಸರ್ವ ಧರ್ಮದ ಪುಣ್ಯಕ್ಷೇತ್ರ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವ 2026ರ ಜ. 25ರಿಂದ 29ರವರೆಗೆ ಜರುಗಲಿದೆ ಎಂದು ಬಸಿಲಿಕಾದ ಧರ್ಮಗುರು ಅಲ್ಬನ್ ಡಿಸೋಜ ತಿಳಿಸಿದರು.
ಕಾರ್ಕಳ: ಸರ್ವ ಧರ್ಮದ ಪುಣ್ಯಕ್ಷೇತ್ರ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವ 2026ರ ಜ. 25ರಿಂದ 29ರವರೆಗೆ ಜರುಗಲಿದೆ ಎಂದು ಬಸಿಲಿಕಾದ ಧರ್ಮಗುರು ಅಲ್ಬನ್ ಡಿಸೋಜ ತಿಳಿಸಿದರು.
ಮಹೋತ್ಸವದ ಪೂರ್ವಭಾವಿಯಾಗಿ ಜ. 16ರಿಂದ 24ರವರೆಗೆ ಒಂಬತ್ತು ದಿನಗಳ ಕಾಲ ನವದಿನಗಳ ಪ್ರಾರ್ಥನೆ (ನೊವೆನಾ) ಆಯೋಜಿಸಲಾಗಿದೆ.ಈ ವರ್ಷದ ಮಹೋತ್ಸವದ ಧ್ಯೇಯವಾಕ್ಯವಾಗಿ ‘ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ’ಎಂಬ ಸಂದೇಶವನ್ನು ಆಯ್ಕೆ ಮಾಡಲಾಗಿದೆ. ಈ ಧ್ಯೇಯವು ಮಾನವೀಯತೆ, ಪ್ರೀತಿ ಮತ್ತು ಸೇವಾಭಾವನೆಗೆ ಪ್ರೇರಣೆ ನೀಡುವ ಉದ್ದೇಶ ಹೊಂದಿದೆ ಎಂದು ಧರ್ಮಗುರು ಅಲ್ಬನ್ ಡಿಸೋಜ ವಿವರಿಸಿದರು.ಮಹೋತ್ಸವದ ಪ್ರಮುಖ ದಿನಗಳಲ್ಲಿ ವಿವಿಧ ಧರ್ಮಾಧ್ಯಕ್ಷರು ಹಾಗೂ ಧರ್ಮಗುರುಗಳು ಭಾಗವಹಿಸುವರು. ಜ. 25ರಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಲುವಿಸ್ ಪೌಲ್ ಡಿಸೋಜ ಅವರ ಉಪಸ್ಥಿತಿಯಲ್ಲಿ ಬಲಿಪೂಜೆ ನಡೆಯಲಿದೆ. ಜ. 26ರಂದು ಕಾರವಾರದ ಧರ್ಮಾಧ್ಯಕ್ಷ ದುಮಿಂಗ್ ಡಾಯಸ್, ಜ. 27ರಂದು ಅಲಹಾಬಾದ್‌ನ ಧರ್ಮಾಧ್ಯಕ್ಷ ಲುವಿಸ್ ಮಸ್ಕರೇನಸ್ರು, ಜ. 28ರಂದು ಉಡುಪಿ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಅಜ್ಮೀರ್‌ನ ಧರ್ಮಾಧ್ಯಕ್ಷ ಜೋನ್ ಕರ್ವಾಲೊ, ಜ. 29ರಂದು ಮಂಗಳೂರು ಧರ್ಮಾಧ್ಯಕ್ಷ ಪೀಟರ್ ಪೌಲ್ ಸಲ್ದಾನ್ಹಾ ಬಲಿಪೂಜೆ ಕಾರ್ಯ ಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಮಹೋತ್ಸವದ ಅಂಗವಾಗಿ ಜ. 29ರಂದು ಚರ್ಚ್ ಆವರಣದಲ್ಲಿ ‘ಸತ್ಯದರ್ಶನ’ ಯಕ್ಷಗಾನ ಬಯಲಾಟವನ್ನು ಆಯೋಜಿಸಲಾಗಿದೆ. ಭಕ್ತರ ಸುರಕ್ಷತೆ ದೃಷ್ಟಿಯಿಂದ ಈ ಬಾರಿ ಚರ್ಚ್ ಆವರಣದಲ್ಲಿ 40ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಇದೇ ಸಂದರ್ಭ ಸಾಮಾಜಿಕ ಸೇವೆ ಭಾಗವಾಗಿ ಬಡವರಿಗಾಗಿ ಐದಕ್ಕಿಂತ ಹೆಚ್ಚು ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಪ್ರತಿಯೊಂದು ಮನೆಗೆ ಸುಮಾರು 11 ಲಕ್ಷ ರೂ.ಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಹಾಯಕ ಧರ್ಮಗುರು ರೊಬಿನ್ ಸಾಂತುಮಾಯೆರ್, ಉಪಾಧ್ಯಕ್ಷ ಸಂತೋಷ್ ಡಿಸಿಲ್ವ, ಕಾರ್‍ಯದರ್ಶಿ ರೊನಾಲ್ಡ್ ನೊರೊನ್, ಸದಸ್ಯರಾದ ವಂದೀಶ್ ಮಥಾಯಸ್, ವಲೇರಿಯನ್ ಪ್ಯಾಸ್, ಮೆಲ್ವಿನ್ ಕ್ಯಾಸ್ತಲಿನೊ, ಜಾನ್ಸನ್ ಡಿಸಿಲ್ವಾ ಮೊದಲಾದವರು ಉಪಸ್ಥಿತರಿದ್ದರು.