ಸಾರಾಂಶ
- ಸಾಹಿತ್ಯ ಸಮ್ಮೇಳನ, ಜಗಳೂರು ಜಲೋತ್ಸವ ಶಾಸಕರ ಪ್ರಚಾರ ಉತ್ಸವಗಳಾಗಿವೆ: ಟೀಕೆ - - - ಕನ್ನಡಪ್ರಭ ವಾರ್ತೆ ಜಗಳೂರು
ಜ.11 ಮತ್ತು 12ರಂದು ಪಟ್ಟಣದಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ 13 ರಂದು ನಡೆಯಲಿರುವ ''ಜಗಳೂರು ಜಲೋತ್ಸವ'' ಶಾಸಕ ಬಿ.ದೇವೇಂದ್ರಪ್ಪ ಅವರ ಪ್ರಚಾರದ ಉತ್ಸವವಾಗಿವೆ. ಆಡಳಿತ ವ್ಯವಸ್ಥೆ ರಿಪಬ್ಲಿಕ್ ಆಫ್ ಜಗಳೂರು ಆಗಿ ಮಾರ್ಪಟ್ಟಿದೆ. ಶಾಸಕರು ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಶಾಸಕ ಎಸ್.ವಿ.ರಾಮಚಂದ್ರ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಜನಪದ ವಿದ್ವಾಂಸರು, ಜನಪದ ತಜ್ಞರು, ಸಾಹಿತಿಗಳನ್ನು ಸಮ್ಮೇಳನಕ್ಕೆ ಕರೆದಿಲ್ಲ ಎಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಮಾಜಿ ಶಾಸಕನಾದ ನನ್ನನ್ನೇ ಆಹ್ವಾನಿಸಿಲ್ಲ. ತಾಲೂಕು ಕಸಾಪ ಅಧ್ಯಕ್ಷರು ದೂರವಾಣಿ ಮೂಲಕ ಆಹ್ವಾನಿಸಿದ್ದಾರೆ ಎಂದು ಟೀಕಿಸಿದರು.
ಸಾಹಿತ್ಯ ಸಮ್ಮೇಳನಕ್ಕೆ ಹಣ ಸಂಗ್ರಹಣ ವಿಷಯದಲ್ಲಿ ಪ್ರಾಥಮಿಕ, ಹೈಸ್ಕೂಲ್, ಉಪನ್ಯಾಸಕರು, ಅಧಿಕಾರಿಗಳಿಂದ ಇಂತಿಷ್ಟು ಹಣ ಕೊಡಲೇಬೇಕು ಎಂದು ನಿಗದಿ ಮಾಡಿದ್ದಾರೆ. ಇದು ಶಾಸಕರಾದವರಿಗೆ, ಸಾಹಿತ್ಯ ಸಮ್ಮೇಳನಕ್ಕೆ ಶೋಭೆ ತರುವ ವಿಷಯವಲ್ಲ. ದೇಣಿಗೆ ತೆಗೆದುಕೊಳ್ಳಲಿ. ಆದರೆ ಎಲ್ಲರನ್ನೂ ಕೇಳಲಿ. ಬಡಪಾಯಿ ಶಿಕ್ಷಕರನ್ನು ಬೆದರಿಸಿ ಹಣ ವಸೂಲಿ ಮಾಡಿದ್ದಾರೆ. ಜಿಲ್ಲಾ ಅಧ್ಯಕ್ಷರ ಹೆಸರಿನಲ್ಲಿ ಶಾಸಕರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದರು.57 ಕೆರೆ ತುಂಬಿಸುವ ಯೋಜನೆ ನಮ್ಮ ಅವಧಿಯಲ್ಲಿ ಅನುಷ್ಠಾನಕ್ಕೆ ಬಂತು. ರಾಮಚಂದ್ರ ಅವಧಿಯಲ್ಲಿ ₹650 ಕೋಟಿ ಹಣ ಬಿಡುಗಡೆಯಾಯಿತು. ಆದರೆ, ಜಲೋತ್ಸವಕ್ಕೆ ಕಾರಣರಾದ ನಮ್ಮನ್ನೇ ಕರೆದಿಲ್ಲ. ಸಿರಿಗೆರೆ ಶ್ರೀಗಳನ್ನು ಕರೆಯಬಹುದಿತ್ತು. ಅದರ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ಶಾಸಕರ ಬದಲಾಗಿ ಅವರ ಮಗ ಎಂ.ಡಿ. ಕೀರ್ತಿಕುಮಾರ್ ಆಡಳಿತ ನಡೆಸುತ್ತಿದ್ದಾರೆ. ಶಾಸಕರ ಬದಲು ಶ್ಯಾಡೋ ಶಾಸಕರಾಗಿ ಮಗ ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಸಾರ್ವಜನಿಕ ಹಣದಲ್ಲಿ ಕಲಾವಿದರಿಗೆ ಮ್ಯೂಸಿಕಲ್ ನೈಟ್‍ಗಾಗಿ ₹25 ಲಕ್ಷ ಕೊಟ್ಟು ಕರೆಸುತ್ತಿದ್ದಾರಂತೆ. ಇದು ಯಾರ ಹಣ ಎಂದು ರಾಜೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್, ಮಾಜಿ ಜಿಪಂ ಅಧ್ಯಕ್ಷ ಸೊಕ್ಕೆ ನಾಗರಾಜ್ ಸೇರಿದಂತೆ ಅನೇಕ ಮುಖಂಡರು ಇದ್ದರು.- - - -9ಜೆಎಲ್.ಆರ್1:
ಜಗಳೂರು ಪಟ್ಟಣದ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ನಿವಾಸದಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಸುದ್ದಿಗೋಷ್ಠಿ ನಡೆಸಿದರು.