- ಸಾವಿರಾರು ಭಕ್ತರ ಸಮ್ಮುಖ ವಿಜೃಂಭಣೆ ಆಚರಣೆ । ರೊಟ್ಟಿಬುತ್ತಿ ಪ್ರಸಾದ ಸೇವೆ ವಿಶೇಷ
- - -ಕನ್ನಡಪ್ರಭ ವಾರ್ತೆ ನ್ಯಾಮತಿ
ತಾಲೂಕಿನ ಕಲ್ಬಿಗಿರಿ ಬೆಟ್ಟದ ಮೇಲಿರುವ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ, ಅರೆಹಳ್ಳಿಯ ಶ್ರೀ ತಿರುಮಲ ರಂಗನಾಥ ಸ್ವಾಮಿ, ಫಲವನಹಳ್ಳಿಯ ಶ್ರೀ ರಂಗನಾಥ ಸ್ವಾಮಿ ಗ್ರಾಮ ದೇವರುಗಳ ಬನ್ನಿ ಉತ್ಸವ ಸಾವಿರಾರು ಭಕ್ತರ ಸಮ್ಮುಖ ವಿಜೃಂಭಣೆಯಿಂದ ನಡೆಯಿತು.ಕಲ್ಬಿಗಿರಿ ಬೆಟ್ಟದ ಮೇಲಿರುವ ಶ್ರೀ ಲಕ್ಷ್ಮೀರಂಗನಾಥಸ್ವಾಮಿ, ಅರೆಹಳ್ಳಿ ಗ್ರಾಮದ ಶ್ರೀ ರುದ್ರೇಶ್ವರಸ್ವಾಮಿ, ಶ್ರೀ ತಿರುಮಲ ರಂಗನಾಥಸ್ವಾಮಿ, ಶ್ರೀ ಚೌಡಮ್ಮ ಮತ್ತು ಮಾತೆಂಗಮ್ಮ, ಫಲವನಹಳ್ಳಿ ಗ್ರಾಮದ ಶ್ರೀ ರಂಗನಾಥಸ್ವಾಮಿ, ಶ್ರೀ ಆಂಜನೇಯಸ್ವಾಮಿ, ಗಂಗಾಪರಮೇಶ್ವರಿ, ಸೇವಾಲಾಲ್ ಹಾಗೂ ಮರಿಯಮ್ಮ ದೇವರುಗಳ ಪಾಲ್ಗೊಂಡವು.
ಶ್ರೀ ಲಕ್ಷ್ಮೀರಂಗನಾಥ ದೇವರ ದಸರಾ ಬನ್ನಿ ಉತ್ಸವ ಜಾತ್ರಾ ಮಹೋತ್ಸವ ದೀಪಾರಾಧನೆಯಿಂದ ಪ್ರಾರಂಭಗೊಂಡು 3 ದಿನಗಳ ಕಾಲ ನಡೆದು ಶನಿವಾರ ಬೆಳಗ್ಗೆ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ಶಿಲಾಮೂರ್ತಿಗೆ ಅಭಿಷೇಕ, ಅಲಂಕಾರ, ವಿಶೇಷ ಪೂಜೆ ಜ್ಯೋತಿ ದರ್ಶನ ಮೂಲಕ ರೊಟ್ಟಿಬುತ್ತಿ ಪ್ರಸಾದ ಸೇವೆ ನೆರವೇರಿಸಲಾಯಿತು.
ಭಾನುವಾರ ಬೆಳಗ್ಗೆ ಅಭಿಷೇಕ, ಹೋಮ, ಪೂಜೆ, ಮಕ್ಕಳ ಜವಳ, ಮುದ್ರೆ ಹಾಕುವ ಕಾರ್ಯಕ್ರಮ ನಡೆದು ಬೆಟ್ಟದ ಭೂತಪ್ಪ ದೇವರು ಹಾಗೂ ದಾಸಪ್ಪಗಳೊಂದಿಗೆ ಉತ್ಸವ ಮೂರ್ತಿಯನ್ನು ಶಂಖ, ಜಾಗಟೆಯ ಹಾಗೂ ಮಂಗಳ ವಾಧ್ಯಗಳೊಂದಿಗೆ ಭಕ್ತಸಮೂಹ ಗೋವಿಂದಾ ನಾಮಸ್ಮರಣೆ ಮಾಡುತ್ತ ಉತ್ಸವ ಮೂರ್ತಿಯ ಮೆರವಣಿಗೆಯನ್ನು ಬನ್ನಿ ಮಂಟಪದವರೆಗೆ ನಡೆಸಿ ದಾಸಯ್ಯ ಹಾಗೂ ಭೂತಪ್ಪ ದೇವರ ಮಣೆವು ಸೇವೆ ನೆಡೆದ ನಂತರ ಬಿಲ್ಲಿಗೆ ಭಾಣ ಹೂಡಿ ಅಂಬು ಕಡಿದು ನೆರೆದಿದ್ದ ಭಕ್ತರಿಗೆ ಬನ್ನಿಪತ್ರೆ ಪ್ರಸಾದವಾಗಿ ಹಂಚಲಾಯಿತು.
ಕಲ್ಬಿಗಿರಿ ಜಾತ್ರಾ ಮಹೋತ್ಸವದಲ್ಲಿ ರೊಟ್ಟಿ ಬುತ್ತಿ ನೇವೈದ್ಯ ವಿಶೇಷ. ನೂತನ ದಂಪತಿಗಳು ಮೊದಲ ಬಾರಿ ಈ ಉತ್ಸವಕ್ಕೆ ಬರುವಾಗ ರೊಟ್ಟಿ ಬುತ್ತಿಯ ಪ್ರಸಾದ ತರುವ ಪದ್ಧತಿ ಹಿಂದಿನಿಂದಲೂ ನಡೆದು ಬರುತ್ತಿದೆ. ಬನ್ನಿ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ದೇವಸ್ಥಾನ ಆಡಳಿತ ಮಂಡಳಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ನ್ಯಾಮತಿ ತಾಲೂಕು ಆಡಳಿತದಿಂದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಅರೆಹಳ್ಳಿ ಗ್ರಾಮದ ಶ್ರೀ ರುದ್ರೇಶ್ವರ ಸ್ವಾಮಿ, ಶ್ರೀ ತಿರುಮಲ ರಂಗನಾಥ ಸ್ವಾಮಿ, ಶ್ರೀ ಚೌಡಮ್ಮ ಮತ್ತು ಶ್ರೀ ಮಾತೆಂಗಮ್ಮ ದೇವಿಯ ಉತ್ಸವ ಮೂರ್ತಿಗಳನ್ನು ಹೊತ್ತ ಭಕ್ತರು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮೂಲಕ ಬನ್ನಿ ವೃಕ್ಷಕ್ಕೆ ತೆರಳಿ ಅರ್ಚಕರು, ಗ್ರಾಮದ ಹಿರಿಯರು ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿದರು.
ಬನ್ನಿ ಉತ್ಸವದ ನಂತರ ರುದ್ರೇಶ್ವರ ದೇಗುಲದ ಎದುರು ಮಣೆವು ಆಡಿ ದೇವರುಗಳ ಮೆರವಣಿಗೆಯನ್ನು ಭಜನೆ, ವಿವಿಧ ವಾದ್ಯಗಳೊಂದಿಗೆ ನಡೆಸಿ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಸಾಲುಗಟ್ಟಿ ನಿಂತು ದೇವರಿಗೆ ನೇವೈದ್ಯ, ಕಾಯಿ, ಕರ್ಪೂರ, ಫಲ-ಪುಷ್ಪ ಅರ್ಪಿಸಿ ದೇವರ ಆಶೀರ್ವಾದ ಪಡೆದರು.ಪಲವನಹಳ್ಳಿ ಗ್ರಾಮದಲ್ಲಿ ಶ್ರೀ ರಂಗನಾಥ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ, ಗಂಗಾಪರಮೇಶ್ವರಿ, ಸೇವಾಲಾಲ್ ಹಾಗೂ ಮರಿಯಮ್ಮ ದೇವರುಗಳ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಹೊತ್ತ ಭಕ್ತರು ಬನ್ನಿವೃಕ್ಷಕ್ಕೆ ತೆರಳಿ ಅಂಬು ಹೊಡೆದು ಬನ್ನಿ ಪೂಜಿಸಿದ ನಂತರ ಬನ್ನಿ ವಿತರಣೆ ಮಾಡಲಾಯಿತು.
- - --ಚಿತ್ರ: ಕಲ್ಬಿಗಿರಿ ಬೆಟ್ಟದ ಮೇಲಿರುವ ಶ್ರೀ ಲಕ್ಷ್ಮೀರಂಗನಾಥ ಸನ್ನಿಧಿಯಲ್ಲಿ ಸಕಲ ಭಕ್ತರು ಗೋವಿಂದ ನಾಮಸ್ಮರಣೆ ಮಾಡುತ್ತ ದೇವರುಗಳೊಂದಿಗೆ ಬನ್ನಿ ಸಂಭ್ರಮ ಆಚರಿಸಿದರು.
-ಚಿತ್ರ: ಅರೆಹಳ್ಳಿ ಗ್ರಾಮದಲ್ಲಿ ಗ್ರಾಮ ದೇವರುಗಳ ಮೆರವಣಿಗೆಯೊಂದಿಗೆ ಬನ್ನಿ ವೃಕ್ಷಕ್ಕೆ ತೆರಳಿ ಬನ್ನಿ ಮುಡಿದು ಸಂಭ್ರಮಿಸಿದರು.