ತಾಲೂಕು ಆಸ್ಪತ್ರೆಗಳಲ್ಲಿನ್ನು 24/7 ಹೆರಿಗೆ

| N/A | Published : Nov 11 2025, 10:54 AM IST

Delivery

ಸಾರಾಂಶ

 ತಾಲೂಕು ಆಸ್ಪತ್ರೆಗಳಲ್ಲಿ 24/7 ತಜ್ಞ ವೈದ್ಯರ ಸೇವೆ ಸಿಗುವಂತೆ ಮಾಡಲು ಕನಿಷ್ಠ ಸಂಖ್ಯೆಗಿಂತ ಕಡಿಮೆ ಹೆರಿಗೆಗಳು ಆಗುವ ಆಸ್ಪತ್ರೆಗಳ ವೈದ್ಯರನ್ನು ಹೆಚ್ಚು ಹೆರಿಗೆಗಳಾಗುವ ಆಸ್ಪತ್ರೆಗಳಿಗೆ ಹೊಂದಾಣಿಕೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್ ತಿಳಿಸಿದ್ದಾರೆ.

  ಬೆಂಗಳೂರು :  ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 24/7 ತಜ್ಞ ವೈದ್ಯರ ಸೇವೆ ಸಿಗುವಂತೆ ಮಾಡಲು ಕನಿಷ್ಠ ಸಂಖ್ಯೆಗಿಂತ ಕಡಿಮೆ ಹೆರಿಗೆಗಳು ಆಗುವ ಆಸ್ಪತ್ರೆಗಳ ವೈದ್ಯರನ್ನು ಹೆಚ್ಚು ಹೆರಿಗೆಗಳಾಗುವ ಆಸ್ಪತ್ರೆಗಳಿಗೆ ಹೊಂದಾಣಿಕೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್ ತಿಳಿಸಿದ್ದಾರೆ.

ತಾಯಿ-ಮಗು ಮರಣ ಪ್ರಮಾಣ ಶೂನ್ಯಕ್ಕಿಳಿಸುವುದು ಸರ್ಕಾರದ ಗುರಿ

ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಯಿ-ಮಗು ಮರಣ ಪ್ರಮಾಣ ಶೂನ್ಯಕ್ಕಿಳಿಸುವುದು ಸರ್ಕಾರದ ಗುರಿಯಾಗಿದೆ. ಮುಂದಿನ ದಿನದಲ್ಲಿ ತಾಲ್ಲೂಕು ಆಸ್ಪತ್ರೆಯಲ್ಲಿ ತಲಾ ಇಬ್ಬರು ಸ್ತ್ರಿರೋಗ ತಜ್ಞರು, ಮಕ್ಕಳ ತಜ್ಞರು ಮತ್ತು ಅರಿವಳಿಕೆ ತಜ್ಞರು ಹಾಗೂ ಒಬ್ಬ ರೇಡಿಯಾಲಜಿಸ್ಟ್ ಲಭ್ಯವಿದ್ದು, ದಿನದ 24 ಗಂಟೆಯೂ ಹೆರಿಗೆ ಸೌಲಭ್ಯ ಸಿಗುವಂತೆ ಕ್ರಮ ವಹಿಸಲಾಗುತ್ತಿದೆ. ಇದಕ್ಕಾಗಿ ತಿಂಗಳಿಗೆ 30ಕ್ಕಿಂತ ಕಡಿಮೆ ಹೆರಿಗೆಯಾಗುವ ಸಮುದಾಯ ಆರೋಗ್ಯ ಕೇಂದ್ರದ (ಸಿಎಚ್‌ಸಿ) ತಜ್ಞ ವೈದ್ಯರನ್ನು ಹಾಗೂ ಇಬ್ಬರು ಸ್ಟಾಫ್ ನರ್ಸ್‌ಗಳನ್ನು ತಾಲ್ಲೂಕು ಆಸ್ಪತ್ರೆಗೆ ಮರುಹೊಂದಾಣಿಕೆ ಮಾಡಲಾಗುವುದು. ಆದರೆ, ಕನಿಷ್ಠ 30ಕ್ಕಿಂತ ಹೆಚ್ಚು ಹೆರಿಗೆಯಾಗುವ ಸಿಎಚ್‌ಸಿಗಳಲ್ಲಿನ ತಜ್ಞ ವೈದ್ಯರನ್ನು ಮುಟ್ಟುವುದಿಲ್ಲ. ಅಲ್ಲಿ ತಲಾ ಒಬ್ಬ ಸ್ತ್ರೀರೋಗತಜ್ಞ, ಅರಿವಳಿಕೆ ಮತ್ತು ಮಕ್ಕಳ ತಜ್ಞರನ್ನು ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಹಜ ಹೆರಿಗೆಯನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ ಮಾಡಿಸಬಹುದಾಗಿದೆ

ಸಮುದಾಯ ಆರೋಗ್ಯ ಕೇಂದ್ರದಲ್ಲಿನ ತಜ್ಞ ವೈದ್ಯರನ್ನು ಸ್ಥಳಾಂತರಿಸಿದ ನಂತರ, ಆ ಸ್ಥಳಕ್ಕೆ ಇಬ್ಬರು ಎಂಬಿಬಿಎಸ್ ವೈದ್ಯರನ್ನು ಭರ್ತಿ ಮಾಡಲಾಗುತ್ತದೆ. ಮಕ್ಕಳ ತಜ್ಞರನ್ನು ಮುಂದುವರಿಸಲಾಗುತ್ತದೆ. ಸಹಜ ಹೆರಿಗೆಯನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ ಮಾಡಿಸಬಹುದಾಗಿದೆ. ಸಿಸೇರಿಯನ್‌ ಹೆರಿಗೆ ಪ್ರಕರಣಗಳನ್ನು ಮಾತ್ರ ತಾಲ್ಲೂಕು ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಬೇಕಾಗುತ್ತದೆ ಎಂದರು.

ರಾಜ್ಯದಲ್ಲಿ ಶೇ.6ರಷ್ಟು ಹೆರಿಗೆಗಳು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಶೇ.33ರಷ್ಟು ಹೆರಿಗೆಗಳು ತಾಲ್ಲೂಕು ಆಸ್ಪತ್ರೆಯಲ್ಲಿ ಆಗುತ್ತಿವೆ. ಶೇ.65ರಷ್ಟು ಹೆರಿಗೆಗಳು ಸರ್ಕಾರಿ ಆಸ್ಪತ್ರೆಯಲ್ಲಿಯೇ ಆಗುತ್ತಿವೆ. ರಾಜ್ಯದಲ್ಲಿ ತಾಯಿ-ಮರಣ ಸೂಚಂಕ ದೇಶಕ್ಕೆ ಹೋಲಿಸಿದರೆ ಕಡಿಮೆ ಇದೆ. ಆದರೆ, ದಕ್ಷಿಣ ರಾಜ್ಯಗಳಿಗೆ ಹೋಲಿಸಿದರೆ ನಾವು ಹಿಂದಿದ್ದೇವೆ. ಕಳೆದ ಒಂದು ವರ್ಷದಿಂದ ತಾಯಿ-ಮರಣ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಕಳೆದ ವರ್ಷ ಅಕ್ಟೋಬರ್ ವೇಳೆಗೆ 483 ಇದ್ದ ಸಂಖ್ಯೆ, ಈ ವರ್ಷ 366ಕ್ಕೆ ಇಳಿಕೆಯಾಗಿದೆ ಎಂದು ಸಚಿವರು ತಿಳಿಸಿದರು.

15 ಜಿಲ್ಲಾಸ್ಪತ್ರೆಗಳಿಗೆ125 ತಜ್ಞರ ನೇಮಕ

ರಾಜ್ಯದ 15 ಜಿಲ್ಲಾ ಆಸ್ಪತ್ರೆಗಳಿಗೆ 125 ತಜ್ಞ ವೈದ್ಯರನ್ನು ನೇಮಕ ಮಾಡಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಜಿಲ್ಲಾ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸುವ ಉದ್ದೇಶದಿಂದ ಹೃದ್ರೋಗ ತಜ್ಞರು, ನರರೋಗತಜ್ಞರು, ಮೂತ್ರಪಿಂಡಶಾಸ್ತ್ರಜ್ಞರು, ಆಂಕೊಲಾಜಿಸ್ಟ್‌ಗಳು, ಗ್ಯಾಸ್ಟ್ರೋಎಂಟರಾಲಜಿಸ್ಟ್‌ಗಳು, ಶ್ವಾಸಕೋಶ ತಜ್ಞ, ವೃದ್ಧಾಪ್ಯ ತಜ್ಞರು ಮತ್ತು ಕ್ರಿಟಿಕಲ್ ಕೇರ್ ತಜ್ಞರನ್ನು ನೇಮಕ ಮಾಡಲಾಗುವುದು ಎಂದರು.

Read more Articles on